ಕಾವೇರಿದ ಫಾರಿನ್ ಟೂರ್ ಚರ್ಚೆ; ಬಿಜೆಪಿ ಟೀಕೆಗೆ ಪ್ರಿಯಾಂಕಾ ಖಡಕ್ ಟಾಂಗ್!
ರಾಹುಲ್ ಗಾಂಧಿಯವರ ಬರ್ಲಿನ್ ಪ್ರವಾಸವನ್ನು ಟೀಕಿಸಿದ ಬಿಜೆಪಿ ನಾಯಕರಿಗೆ ಪ್ರಿಯಾಂಕಾ ಗಾಂಧಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ನಾಯಕರ ವಿದೇಶ ಪ್ರವಾಸದ ಕುರಿತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ವಾಕ್ಸಮರ ಬಿರುಸಾಗಿಯೇ ಸಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸವನ್ನು ಟೀಕಿಸಿದ ಬಿಜೆಪಿಯನ್ನು ಪ್ರಿಯಾಂಕಾ ಗಾಂಧಿ ತರಾಟೆ ತೆಗೆದುಕೊಂಡರು. ರಾಹುಲ್ ಗಾಂಧಿಯವರ ಮುಂಬರುವ ಜರ್ಮನಿ ಭೇಟಿ ವಿಚಾರವನ್ನು ಎತ್ತಿಕೊಂಡು ಬಿಜೆಪಿ ನಾಯಕರು ವಾಗ್ದಾಳಿ ಪ್ರಾರಂಭಿಸಿದ್ದರು. ಇದರಿಂದ ಕೆರಳಿದ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ಕೈಗೊಳ್ಳುವ ವಿದೇಶ ಪ್ರವಾಸವನ್ನು ಪ್ರಸ್ತಾಪಿಸಿ ಟೀಕಿಸಿದರು.
ಡಿ.15 ರಿಂದ ರಾಹುಲ್ ಬರ್ಲಿನ್ ಪ್ರವಾಸ
ರಾಹುಲ್ ಗಾಂಧಿಯವರು ಡಿಸೆಂಬರ್ 15 ರಿಂದ 20 ರವರೆಗೆ ಬರ್ಲಿನ್ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿ ಅವರು ಜರ್ಮನ್ ಅಧಿಕಾರಿಗಳನ್ನು ಭೇಟಿ ಮಾಡಿ ಭಾರತೀಯ ವಲಸೆಗಾರರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಬಿಜೆಪಿ ನಾಯಕರ ಟೀಕೆ ಏನು?
ಬಿಜೆಪಿ ರಾಹುಲ್ ಗಾಂಧಿಯವರನ್ನು "ಪರ್ಯಟನ ನಾಯಕ" ಎಂದು ಟೀಕಿಸಿದ್ದು, ಅವರು ನಿಯಮಿತ ವಿದೇಶ ಪ್ರವಾಸಗಳಿಂದಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿತು. ಅಲ್ಲದೇ ಕಾಂಗ್ರೆಸ್ ನಾಯಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೂರ್ಖತನದ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಬರ್ಲಿನ್‌ಗೆ ತೆರಳುತ್ತಿರುವ ಉದ್ದೇಶ ಏನು ಎಂಬುದನ್ನು ಬಿಜೆಪಿ ಪ್ರಶ್ನಿಸಿದೆ.
ಮತ್ತೆ ವಿದೇಶಕ್ಕೆ ಹೋಗಿ ಭಾರತವನ್ನು ಅವಮಾನಿಸುವ ಪ್ರಯತ್ನವೇ? ಬಿಹಾರ ಚುನಾವಣೆಯ ಸಮಯದಲ್ಲಿ ರಾಹುಲ್ ಎಲ್ಲಿದ್ದರು? ಸಾಮಾನ್ಯ ಜನರು ಕೆಲಸದ ಅವಧಿಗಳ ನಡುವೆ ರಜಾದಿನಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ರಾಹುಲ್ ರಜಾ ದಿನಗಳ ನಡುವೆ ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.
ಬಿಜೆಪಿ ಎಕ್ಸ್ ಪೋಸ್ಟ್‌ನಲ್ಲೂ ಟೀಕೆ
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದು, "ರಾಹುಲ್ ಗಾಂಧಿ ಒಬ್ಬ ಗಂಭೀರ ರಾಜಕಾರಣಿಯಲ್ಲ. ಜನರು ಕೆಲಸ ಮಾಡುತ್ತಿದ್ದಾರೆ. ಅವರು ಶಾಶ್ವತ ರಜೆಯಲ್ಲಿದ್ದಾರೆ. ಇತ್ತೀಚೆಗೆ, ಬಿಹಾರ ಚುನಾವಣೆಯ ಸಮಯದಲ್ಲಿ, ಅವರು ಜಂಗಲ್ ಸಫಾರಿಯಲ್ಲಿದ್ದರು. ಅವರ ಆದ್ಯತೆಗಳು ಸ್ಪಷ್ಟವಾಗಿವೆ. ಅವರು ಜರ್ಮನಿಗೆ ಏಕೆ ಹೋಗುತ್ತಿದ್ದಾರೆಂದು ನನಗೆ ತಿಳಿದಿಲ್ಲ. ದೇಶದ ಬಗ್ಗೆ ನಕಾರಾತ್ಮಕ ಸಂಗತಿಗಳನ್ನು ಹರಡುವುದೇ ಅವರ ಉದ್ದೇಶವಾಗಿರಬಹುದು ಎಂದು ಹೇಳಿದ್ದಾರೆ.
ಪ್ರಹ್ಲಾದ್ ಜೋಷಿ ಕೂಡ ವಾಗ್ದಾಳಿ
“ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ರಾಹುಲ್ ಅವರನ್ನು ಟೀಕಿಸಿದರು. ಸಂಸತ್ತು ಅಧಿವೇಶನ ನಡೆಯುತ್ತಿರುವಾಗ ಅವರು ದೇಶವನ್ನು ತೊರೆದು ನಂತರ ಅವರಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ದೂರುತ್ತಾರೆ. ಅವರು ಅರೆಕಾಲಿಕ, ಗಂಭೀರವಲ್ಲದ ರಾಜಕೀಯ ನಾಯಕ" ಎಂದು ಅವರು ಟೀಕಿಸಿದರು.
ಸಹೋದರನ ಪರ ಪ್ರಿಯಾಂಕಾ ಬ್ಯಾಟಿಂಗ್
ರಾಹುಲ್ ಗಾಂಧಿಯವರ ವಿದೇಶ ಪ್ರವಾಸವನ್ನು ಟೀಕಿಸಿದ ಬಿಜೆಪಿ ನಾಯಕರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸವನ್ನು ಪ್ರಸ್ತಾಪಿಸಿದ ಪ್ರಿಯಾಂಕಾ, ಮೋದಿ ಜಿ ತಮ್ಮ ಕೆಲಸದ ಸಮಯದ ಅರ್ಧದಷ್ಟು ಭಾಗವನ್ನು ವಿದೇಶದಲ್ಲಿ ಕಳೆಯುತ್ತಾರೆ. ಆದರೆ ವಿರೋಧ ಪಕ್ಷದ ನಾಯಕರ ಭೇಟಿಯನ್ನು ಅವರು ಏಕೆ ಪ್ರಶ್ನಿಸುತ್ತಿದ್ದಾರೆ?" ಅವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಕೂಡ ರಾಹುಲ್ ಗಾಂಧಿಯವರ ಚುನಾವಣಾ ಅಕ್ರಮಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಬಿಜೆಪಿ ಮತ್ತು ಪ್ರಧಾನಿ ಬಳಿ ಉತ್ತರವಿಲ್ಲ ಎಂದು ಹೇಳುತ್ತಾ, "ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಲು ಸಾಧ್ಯವಾಗದಿದ್ದಾಗ, ಅವರು ಅವರನ್ನು ದೂಷಿಸಲು ಶುರು ಮಾಡುತ್ತಾರೆ" ಎಂದು ಹೇಳಿದರು.
ವಲಸಿಗ ಭಾರತೀಯರೊಂದಿಗೆ ರಾಹುಲ್ ಮಾತುಕತೆ
ರಾಹುಲ್ ಗಾಂಧಿಯವರ ಭೇಟಿಯನ್ನು ಪಕ್ಷದ ಜಾಗತಿಕ ಸಂವಹನವನ್ನು ಹೆಚ್ಚಿಸುವ ಮಹತ್ವದ ಸಂಪರ್ಕ ಪ್ರಯತ್ನ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಬಣ್ಣಿಸಿದೆ. "ಡಿಸೆಂಬರ್ 17, 2025 ರಂದು ಬರ್ಲಿನ್‌ನಲ್ಲಿ ಭಾರತೀಯ ವಲಸೆಗಾರರೊಂದಿಗೆ ಮಾತುಕತೆ ನಡೆಸಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ನಮಗೆ ಗೌರವವಿದೆ" ಎಂದು ಐಒಸಿ ಹೇಳಿದೆ.
"ಈ ಕಾರ್ಯಕ್ರಮವು ಯುರೋಪಿನಾದ್ಯಂತದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರನ್ನು ಒಟ್ಟುಗೂಡಿಸುತ್ತದೆ. ರಾಹುಲ್ ಗಾಂಧಿ ಅವರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಒಂದು ಪ್ರಮುಖ ವೇದಿಕೆಯನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು. ಎನ್‌ಆರ್‌ಐ ಕಾಳಜಿಗಳನ್ನು ಪರಿಹರಿಸುವುದು ಮತ್ತು ಪಕ್ಷ ಮತ್ತು ಅದರ ಸಿದ್ಧಾಂತದೊಂದಿಗೆ ಹೆಚ್ಚಿನ ಜನರನ್ನು ಸಂಪರ್ಕಿಸುವಲ್ಲಿ ಐಒಸಿಯ ಪಾತ್ರವನ್ನು ವಿಸ್ತರಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ" ಎಂದು ಐಒಸಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿಹೇಳಿದೆ.