ಕಾರ್ಯಾಚರಣೆಯ ಸಮಸ್ಯೆ; ಏರ್ ಇಂಡಿಯಾ ಅಹಮದಾಬಾದ್-ಲಂಡನ್ ವಿಮಾನ ರದ್ದು
ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು, "ಅಹಮದಾಬಾದ್ನಿಂದ ಲಂಡನ್ಗೆ ಹೊರಡಬೇಕಿದ್ದ ಮೂಲ AI-171 ವಿಮಾನವನ್ನು ಸೋಮವಾರದಿಂದ ಹೊಸ ಕೋಡ್ AI-159ರೊಂದಿಗೆ ಪುನರಾರಂಭಿಸಲಾಗಿತ್ತು.;
ಅಹಮದಾಬಾದ್ನಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾದ AI-159 ವಿಮಾನದ ಸಂಚಾರವನ್ನು ರದ್ದು ಮಾಡಲಾಗಿದೆ. ಈ ಮಾರ್ಗದ ವಿಮಾನ ಕೆಲವು ದಿನಗಳ ಹಿಂದೆ ಪತನಗೊಂಡು 270ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಈ ವಿಮಾನವನ್ನು "ಕಾರ್ಯಾಚರಣೆಯ ಸಮಸ್ಯೆಗಳ" ಕಾರಣದಿಂದ ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏರ್ ಇಂಡಿಯಾದ ಅಧಿಕೃತ ವೆಬ್ಸೈಟ್ ಕೂಡ ಈ ವಿಮಾನ ಸಂಚಾರ ರದ್ದಾಗಿರುವ ಮಾಹಿತಿಯನ್ನು ಸ್ಪಷಟಪಡಿಸಿದೆ.
ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಡಬೇಕಿತ್ತು. ಆದರೆ, ಸಂಚಾರ ಏಕಾಏಕಿ ರದ್ದಾಗಿದೆ. ಆದರೆ, ರದ್ದತಿಗೆ ಕಾರಣ ಏನೆಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು, "ಅಹಮದಾಬಾದ್ನಿಂದ ಲಂಡನ್ಗೆ ಹೊರಡಬೇಕಿದ್ದ ಮೂಲ AI-171 ವಿಮಾನವನ್ನು ಸೋಮವಾರದಿಂದ ಹೊಸ ಕೋಡ್ AI-159ರೊಂದಿಗೆ ಪುನರಾರಂಭಿಸಲಾಗಿತ್ತು. ಆದರೆ, ಕಾರ್ಯಾಚರಣೆಯ ಸಮಸ್ಯೆಗಳಿಂದ ಈ ವಿಮಾನವನ್ನು ರದ್ದುಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
ಪ್ರಯಾಣಿಕರ ಆಕ್ಷೇಪಣೆ
"ನಾನು ಗ್ಯಾಟ್ವಿಕ್ಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದಾಗಿದೆ. ರದ್ದತಿಗೆ ಕಾರಣ ಅಥವಾ ದರವನ್ನು ಮರುಪಾವತಿ ಮಾಡುವ ಬಗ್ಗೆ ಸಿಬ್ಬಂದಿ ಯಾವುದೇ ಮಾಹಿತಿ ನೀಡಿಲ್ಲ" ಎಂದು ಒಬ್ಬ ಪ್ರಯಾಣಿಕರು ಸುದ್ದಿ ಸಂಸ್ಥೆಗಳ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಇತ್ತೀಚಿನ ಭೀಕರ ಅವಘಡ
ಜೂನ್ 12ರಂದು ಅಹಮದಾಬಾದ್ನಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ AI-171 ವಿಮಾನವು ಅಪಘಾತಕ್ಕೀಡಾಗಿ 242 ಪ್ರಯಾಣಿಕರಲ್ಲಿ ಒಬ್ಬರನ್ನು ಹೊರತುಪಡಿಸಿಎಲ್ಲರೂ ಮೃತಪಟ್ಟಿದ್ದರು. ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ಗೆ ಬಿದ್ದ ಕಾರಣ ಅಲ್ಲೂ ಹಲವರು ಮೃತಪಟ್ಟಿದ್ದರು. .
ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾದ AI-180 ವಿಮಾನವು ಇತ್ತೀಚೆಗೆ ಕೋಲ್ಕತ್ತಾದಲ್ಲಿ ತಾಂತ್ರಿಕ ದೋಷದಿಂದಾಗಿ ಸಾಕಷ್ಟು ಹೊತ್ತು ಏರ್ಪೋರ್ಟ್ನಲ್ಲಿಯೇ ಕಳೆಯಿತು. ಬೋಯಿಂಗ್ 777-300 ವಿಮಾನದ ಎಡ ಎಂಜಿನ್ನಲ್ಲಿ ದೋಷ ಕಂಡುಬಂದಿದ್ದರಿಂದ ಪ್ರಯಾಣಿಕರನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಈ ಸರಣಿ ಘಟನೆಗಳು ಏರ್ ಇಂಡಿಯಾದ ಕಾರ್ಯಾಚರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.