Jiribam murders: ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಇಬ್ಬರು ಸಚಿವರು, ಮೂರು ಶಾಸಕರ ಮನೆ ಮೇಲೆ ದಾಳಿ

ಇಂಫಾಲ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಟಿಎಚ್ ಕಿರಣ್ ಕುಮಾರ್ ಹೊರಡಿಸಿದ ಆದೇಶದ ಪ್ರಕಾರ, ಶನಿವಾರ ಸಂಜೆ 4.30 ರಿಂದ ಕರ್ಫ್ಯೂ ವಿಧಿಸಲಾಗಿದೆ. ಪ್ರತಿಭಟನಾಕಾರರ ನಿಯಂತ್ರಣಕ್ಕೆ ವಿಶೇಷ ಪಡೆಯನ್ನು ನಿಯೋಜಿಸಲಾಗಿದೆ.

Update: 2024-11-16 14:57 GMT
ಪ್ರತಿಭಟನಾಕಾರರು ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿರುವುದು.

ಕಳೆದ ಸೋಮವಾರ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಮೂವರನ್ನು ಹತ್ಯೆ ಮಾಡಿದ ಘಟನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಜನಪ್ರತಿನಿಧಿಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರಾಜಧಾನಿ ಇಂಫಾಲ್‌ನಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ . ಪ್ರತಿಭಟನಾಕಾರರು ಶನಿವಾರ (ನವೆಂಬರ್ 16) ಇಬ್ಬರು ಸಚಿವರು ಮತ್ತು ಮೂವರು ಶಾಸಕರ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.



ಇಂಫಾಲ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಟಿಎಚ್ ಕಿರಣ್ ಕುಮಾರ್ ಹೊರಡಿಸಿದ ಆದೇಶದ ಪ್ರಕಾರ, ಶನಿವಾರ ಸಂಜೆ 4.30 ರಿಂದ ಕರ್ಫ್ಯೂ ವಿಧಿಸಲಾಗಿದೆ.

ಇದಕ್ಕೂ ಮುನ್ನ ಲಾಂಫೆಲ್ ಸನಕಿತೆಲ್ ಪ್ರದೇಶದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಮ್ ರಂಜನ್ ಅವರ ನಿವಾಸ ಮತ್ತು ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ಸಚಿವ ಎಲ್ ಸುಸಿಂದ್ರೋ ಸಿಂಗ್ ಅವರ ಮನೆಗೆ ಗುಂಪೊಂದು ನುಗ್ಗಿ ದಾಂಧಲೆ ಮಾಡಿದೆ.

"ಮೂವರು ವ್ಯಕ್ತಿಗಳ ಹತ್ಯೆಗೆ ಸಂಬಂಧಿಸಿದ ವಿಷಯಗಳನ್ನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಸಾರ್ವಜನಿಕರ ಭಾವನೆಗಳನ್ನು ಗೌರವಿಸಲು ಸರ್ಕಾರ ವಿಫಲವಾದರೆ ಸಚಿವರು ರಾಜೀನಾಮೆ ನೀಡುತ್ತಾರೆ ಎಂದು ಸಪಮ್ ನಮಗೆ ಭರವಸೆ ನೀಡಿದರು" ಎಂದು ಲ್ಯಾಂಫೆಲ್ ಸನಕೀತೆಲ್ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿ ಡೇವಿಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ. .

ಸಿಎಂ ಅಳಿಯನ ಮನೆ ಮುಂದೆ ಘೋಷಣೆ

ಇಂಫಾಲ್ ಪಶ್ಚಿಮ ಜಿಲ್ಲೆಯ ಸಗೋಲ್ಬಂದ್ ಪ್ರದೇಶದಲ್ಲಿರುವ ಬಿಜೆಪಿ ಶಾಸಕ ಆರ್.ಕೆ. ಇಮೋ ಅವರ ನಿವಾಸದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, "ಸರ್ಕಾರದಿಂದ ಸೂಕ್ತ ಕ್ರಮ" ಮತ್ತು ಅಧಿಕಾರಿಗಳು "24 ಗಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸಬೇಕು" ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಇಮೊ ಅವರು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಅಳಿಯ.

ಪತ್ರಿಕೆ ಕಚೇರಿ ಮೇಲೆ ದಾಳಿ

ಕೀಶಾಮ್ಥಾಂಗ್ ಕ್ಷೇತ್ರದ ಸ್ವತಂತ್ರ ಶಾಸಕ ಸಪಮ್ ನಿಶಿಕಾಂತ ಸಿಂಗ್ ಅವರನ್ನು ಅವರ ಟಿಡ್ಡಿಮ್ ರಸ್ತೆಯ ನಿವಾಸದಲ್ಲಿ ಭೇಟಿಯಾಗಲು ತೆರಳಿದ್ದ ಪ್ರತಿಭಟನಾಕಾರರು, ಶಾಸಕರು ರಾಜ್ಯದಿಂದ ಹೊರಗಿದ್ದಾರೆ ಎಂದು ಹೇಳಿದ ನಂತರ ಅವರ ಒಡೆತನದ ಸ್ಥಳೀಯ ಪತ್ರಿಕೆಯ ಕಚೇರಿ ಕಟ್ಟಡವನ್ನು ‌ಧ್ವಂಸ ಮಾಡಿದ್ದಾರೆ.

ಗುಂಪು ಕಚೇರಿ ಕಟ್ಟಡದ ಮುಂಭಾಗದ ಕೆಲವು ತಾತ್ಕಾಲಿಕ ನಿರ್ಮಾಣಗಳನ್ನು ನಾಶಪಡಿಸಿದೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಮಣಿಪುರ ಮತ್ತೆ ಕುದಿಯಲು ಕಾರಣವೇನು?

ಮಣಿಪುರ-ಅಸ್ಸಾಂ ಗಡಿಯ ಜಿರಿ ಮತ್ತು ಬರಾಕ್ ನದಿಗಳ ಸಂಗಮದ ಬಳಿ ಜಿರಿಬಾಮ್ ಜಿಲ್ಲೆಯಿಂದ ಕಾಣೆಯಾದ ಆರು ಜನರಲ್ಲಿ ಮೂವರು ಶವಗಳು ಶುಕ್ರವಾರ ರಾತ್ರಿ ಪತ್ತೆಯಾಗಿವೆ.

ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ ಸುಮಾರು 16 ಕಿ.ಮೀ ದೂರದಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿದ್ದವು. 

Tags:    

Similar News