Rape and Murder| ಆರ್‌.ಜಿ.ಕರ್‌ ಆಸ್ಪತ್ರೆ ಕಿರಿಯ ವೈದ್ಯರಿಂದ ಅಮರಣಾಂತ ಉಪವಾಸ ನಿರಶನ ಆರಂಭ

ದಸರಾದ ದುರ್ಗಾಪೂಜೆ ಉತ್ಸವಕ್ಕೆ ಮೂರು ದಿನ ಬಾಕಿ ಇರುವಾಗಲೇ ವೈದ್ಯರು ಕೋಲ್ಕತ್ತಾದ ಧರ್ಮತಾಲದಲ್ಲಿ ಅಮರಣಾಂತ ಉಪವಾಸ ನಿರಶನ ಆರಂಭಿಸಿದ್ದು, ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

Update: 2024-10-06 07:59 GMT
ಆರ್‌ಜಿ ಕರ್‌ ಆಸ್ಪತ್ರೆಯ ಕಿರಿಯ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶನಿವಾರ ಸಂಜೆಯಿಂದ ಕೊಲ್ಕತ್ತದ ಧರ್ಮತಾಲದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು

ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಂತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೊಂದು ಹಂತ ತಲುಪಿದೆ. ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕಿರಿಯ ವೈದ್ಯರು ಶನಿವಾರ ಸಂಜೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ದಸರಾದ ದುರ್ಗಾಪೂಜೆ ಉತ್ಸವಕ್ಕೆ ಮೂರು ದಿನ ಬಾಕಿ ಇರುವಾಗಲೇ ವೈದ್ಯರು ಕೋಲ್ಕತ್ತಾದ ಧರ್ಮತಾಲದಲ್ಲಿ ಧರಣಿ ಕುಳಿತಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ 24 ಗಂಟೆಗಳ ಗಡುವು ಸಹ ನೀಡಿದ್ದರು. ಆದರೆ, ಗಡುವಿನಲ್ಲಿ ಸರ್ಕಾರ ಬೇಡಿಕೆಗಳನ್ನು ಈಡೇರಿಸದ ಕಾರಣ ಶನಿವಾರ ಸಂಜೆಯಿಂದಲೇ ಅಮರಣಾಂತ ಉಪವಾಸ ನಿರಶನ ಆರಂಭಿಸಿದ್ದು, ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ನಾವು ಶನಿವಾರ ರಾತ್ರಿ ಕರ್ತವ್ಯಕ್ಕೆ ಹಾಜರಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ. ಇಲ್ಲಿಯವರೆಗೂ ಕನಿಷ್ಠ ದ್ರವ ಆಹಾರವನ್ನೂ ಸೇವಿಸಿಲ್ಲ. ಸೇವಿಸುವುದೂ ಇಲ್ಲ ಎಂದು ಪಟ್ಟು ಹಿಡಿದು ಆರು ಮಂದಿ ಕಿರಿಯ ವೈದ್ಯರು ಉಪವಾಸ ಕುಳಿತಿದ್ದಾರೆ.

ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ನಿಗ್ಧಾ ಹಜ್ರಾ, ತನಯ ಪಂಜಾ ಮತ್ತು ಅನುಸ್ತುಪ್ ಮುಖೋಪಾಧ್ಯಾಯ, ಎಸ್‌ಎಸ್‌ಕೆಎಂನ ಅರ್ನಾಬ್ ಮುಖೋಪಾಧ್ಯಾಯ, ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪುಲಸ್ತ ಆಚಾರ್ಯ, ಕೆಪಿಸಿ ವೈದ್ಯಕೀಯ ಕಾಲೇಜಿನ ಸಯಂತನಿ ಘೋಷ್ ಹಜ್ರಾ ಉಪವಾಸ ಕುಳಿತಿರುವ ಕಿರಿಯ ವೈದ್ಯರು. ಉಪವಾಸದ ವೇಳೆ ಯಾವುದೇ ವೈದ್ಯರು ಅನಾರೋಗ್ಯಕ್ಕೆ ಒಳಗಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ನಿರಶನ ಕುಳಿತಿರುವ ವೈದ್ಯರು ಎಚ್ಚರಿಸಿದ್ದಾರೆ.

ನಮಗೆ ಜನರ ಬೆಂಬಲವಿದೆ. ಸರ್ಕಾರದ ಯಾವುದೇ ಅಡೆತಡೆಗಳಿಗೂ ನಾವು ಹೆದರುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಮಧ್ಯೆ ಕಿರಿಯ ವೈದ್ಯರು ಕರ್ತವ್ಯಕ್ಕೆ ಗೈರುಹಾಜರಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿರುವ ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳು ಕುಂಠಿತವಾಗಿವೆ. ಇನ್ನು ಶುಕ್ರವಾರ ರಾತ್ರಿ ಧರ್ಮತಾಲದಲ್ಲಿ ಧರಣಿ, ಪ್ರತಿಭಟನೆಗೆ ಕೊಲ್ಕತ್ತಾ ಪೊಲೀಸರು ಅವಕಾಶ ನೀಡದಿದ್ದಾಗ ವೈದ್ಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಿದರು ಎಂದು ವೈದ್ಯರು ಆರೋಪಿಸಿದ್ದಾರೆ.

ಕಿರಿಯ ವೈದ್ಯರು ಸರ್ಕಾರದ ಮುಂದಿಟ್ಟಿರುವ 9 ಬೇಡಿಕೆಗಳ ಪೈಕಿ ಆರೋಗ್ಯ ಕಾರ್ಯದರ್ಶಿ ಎನ್‌.ಎಸ್‌.ನಿಗಮ್ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂಬುದೂ ಸೇರಿದೆ.

ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಕೇಂದ್ರೀಕೃತ ರೆಫರಲ್ ವ್ಯವಸ್ಥೆ ಸ್ಥಾಪಿಸಬೇಕು. ಸಿಸಿಟಿವಿ ಕ್ಯಾಮೆರಾ, ಆನ್-ಕಾಲ್ ರೂಂಗಳು ಮತ್ತು ವಾಶ್‌ರೂಮ್‌ಗಳಿಗೆ ಅಗತ್ಯ ನಿಬಂಧನೆಗಳನ್ನು ಖಚಿತಪಡಿಸಿಕೊಳ್ಳಲು ಕಾರ್ಯಪಡೆ ರಚಿಸಬೇಕು. ಆಸ್ಪತ್ರೆಗಳಲ್ಲಿ ಹೆಚ್ಚಿನ ಪೊಲೀಸ್ ರಕ್ಷಣೆ, ಖಾಯಂ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕಾತಿ , ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂಬುದು ಎಂದು ಪ್ರತಿಭಟನಾನಿರತ ವೈದ್ಯರ ಬೇಡಿಕೆಯಾಗಿದೆ.

ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಹ ವೈದ್ಯೆಯ ಮೇಲೆ ಅತ್ಯಾಚಾರ ನಜಡೆಸಿ, ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಅಂದಿನಿಂದ ವಿವಿಧ ಆಸ್ಪತ್ರೆಗಳ ಕಿರಿಯ ವೈದ್ಯರು ಸೇವೆ ಸ್ಥಗಿತಗೊಳಿಸಿದ್ದರು.

Tags:    

Similar News