ಒಡಿಶಾ ಮಳೆ ಹಾನಿ | ಪುರಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಒಡಿಶಾದಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪುರಿ ಜಿಲ್ಲಾಡಳಿತ ಗುರುವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.;
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಒಡಿಶಾದಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪುರಿ ಜಿಲ್ಲಾಡಳಿತ ಗುರುವಾರ ತನ್ನ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.
ಪುರಿ ಮತ್ತು ಪರದೀಪ್‌ನಲ್ಲಿ ತಲಾ 3 ಸೆಂ.ಮೀ ಮಳೆ ದಾಖಲಾಗಿದ್ದರೆ, ಭುವನೇಶ್ವರದಲ್ಲಿ ಬುಧವಾರ ಸಂಜೆ 5.30 ರಿಂದ ಗುರುವಾರ ಬೆಳಿಗ್ಗೆ 8.30 ರವರೆಗೆ 2 ಸೆಂ.ಮೀ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪುರಿ ಸಮೀಪದ ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಭೇಟಿ ನೀಡುವವರು ಪ್ರವಾಹದಿಂದಾಗಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ದೇವಾಲಯದ ಪ್ರವೇಶ ದ್ವಾರ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಕೆಲವು ಪ್ರವಾಸಿಗರು ಮೊಣಕಾಲು ಆಳದ ನೀರಿನಲ್ಲಿ ಅಲೆಯುತ್ತಿರುವುದು ಕಂಡು ಬಂತು. ಸಂದರ್ಶಕರ ಅನುಕೂಲಕ್ಕಾಗಿ ದೇಗುಲದ ಆವರಣದಿಂದ ನೀರು ಹರಿಸಲು ಸ್ಥಳೀಯ ಆಡಳಿತ ಪಂಪ್‌ಗಳನ್ನು ಅಳವಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಗುರುವಾರ ತೀವ್ರ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪುರಿ, ಖುರ್ದಾ (ಭುವನೇಶ್ವರ ಸೇರಿದಂತೆ), ಕಟಕ್ (ಕಟಕ್ ನಗರ ಸೇರಿದಂತೆ), ಜಗತ್‌ಸಿಂಗ್‌ಪುರ, ಜಾಜ್‌ಪುರ್ ಮತ್ತು ಧೆಂಕನಾಲ್‌ನಲ್ಲಿಯೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಕೇಂದ್ರಪಾದ, ಗಂಜಾಂ, ಭದ್ರಕ್, ಮಯೂರ್‌ಭಂಜ್, ಬಾಲಸೋರ್, ಕಿಯೋಂಜಾರ್ ಮತ್ತು ನಯಾಗಢ್‌ನ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.