ಮಂಡ್ಯ ಮಹಿಳೆಗೆ ಆಂಧ್ರದಲ್ಲಿ ಭ್ರೂಣಲಿಂಗ ಪತ್ತೆ, ಗುಪ್ತ ಕಾರ್ಯಾಚರಣೆಯಲ್ಲಿ ಅಕ್ರಮ ಜಾಲ ಪತ್ತೆ
ಐದು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣ ಹತ್ಯೆಗೆ ಮುಂದಾಗಿದ್ದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ ಚಿತ್ರ
ಕಣ್ಣು ಬಿಡುವ ಮುನ್ನವೇ ಗರ್ಭದಲ್ಲಿಯೇ ಹೆಣ್ಣು ಭ್ರೂಣವನ್ನು ಕೊಲ್ಲುವ ಕಟುಕರ ವಿರುದ್ಧ ಸತತ ಕಾರ್ಯಾಚರಣೆ ನಡೆಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಹೊರರಾಜ್ಯ ಆಂಧ್ರ ಪ್ರದೇಶಕ್ಕೆ ತೆರಳಿ ರಹಸ್ಯ ಕಾರ್ಯಾಚರಣೆ ನಡೆಸುವ ಮೂಲಕ ಕಟುಕರನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಳವಳ್ಳಿಯ 30 ವರ್ಷದ ಮಹಿಳೆಗೆ 3 ಜನ ಹೆಣ್ಣುಮಕ್ಕಳಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಏಜೆಂಟ್ ಮೂಲಕ ಲಿಂಗ ಪತ್ತೆ ಮಾಡಿದ್ದು ಹೆಣ್ಣು ಭ್ರೂಣ ಎಂದು ಗೊತ್ತಾದಾಗ, ಐದು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣಹತ್ಯೆಗೆ ಮುಂದಾಗಿದ್ದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಕ್ಷಣ ರಹಸ್ಯ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆ ಕಟುಕರನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೇಗಿತ್ತು ಕಾರ್ಯಾಚರಣೆ ?
ಸೆ.21 ರಂದು ರಾಜ್ಯದ ಪಿಎನ್‌ಡಿಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರಗಳ (ತಡೆಗಟ್ಟುವಿಕೆ ಮತ್ತು ದುರುಪಯೋಗ ನಿಯಂತ್ರಣ) ಕಾಯ್ದೆ, 1994 (Prenatal) ರಾಜ್ಯ ನೋಡಲ್ ಅಧಿಕಾರಿ ಡಾ. ವಿವೇಕ್ ದೊರೈ ಹಾಗೂ ತಂಡ ಆಂಧ್ರಪ್ರದೇಶ ಪಿಸಿ&ಪಿಎನ್‌ಡಿಟಿ ರಾಜ್ಯ ನೋಡಲ್ ಅಧಿಕಾರಿ ಡಾ.ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ಹಾಗೂ ತಂಡದ ಸಹಯೋಗದಲ್ಲಿ ಕರ್ನೂಲ್ ಜಿಲ್ಲೆಯ ಕೊಡಮುರು ತಾಲೂಕಿನ ಬಾಷಾ ನರ್ಸಿಂಗ್ ಹೋಂನಲ್ಲಿ ಗುಪ್ತಕಾರ್ಯಚರಣೆ ನಡೆಸಿದ್ದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಬಂಡೂರು ಗ್ರಾಮದ ಸುಮಾರು 30ವರ್ಷ ವಯಸ್ಸಿನ ಗರ್ಭಿಣಿ ಸೆ.2 ರಂದು, ಆಶಾ ಕಾರ್ಯಕರ್ತೆ ಮತ್ತು ವೈದ್ಯಕೀಯ ಅಧಿಕಾರಿಯು ವಲಸೆ ಕಾರ್ಮಿಕರ ಆರೋಗ್ಯ ಸ್ಥಿತಿಯನ್ನು ನಿರ್ಣಯಿಸಲು ದಿನನಿತ್ಯದ ಭೇಟಿ ನೀಡುವ ಸಮಯದಲ್ಲಿ ಗರ್ಭಿಣಿಯು ನಿಃಶಕ್ತಳಾಗಿರುವುದನ್ನು ಗಮನಿಸಿದ್ದರು.
ಈ ವೇಳೆ ಗರ್ಭಿಣಿಯನ್ನು ವಿಚಾರಣೆ ಮಾಡಿದಾಗ, ಭ್ರೂಣವು ಹೆಣ್ಣು ಎಂದು ತಿಳಿದ ನಂತರ ಕಳೆದ ಎರಡು ದಿನಗಳಿಂದ ತಾನು ಯಾವುದೇ ಔಷಧಿ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದರು. ಈ ವೇಳೆ ಆಶಾ ಕಾರ್ಯಕರ್ತೆ ಸುಶೀಲಾರವರು ತಕ್ಷಣವೇ ಘಟನೆಯ ಬಗ್ಗೆ ವೈದ್ಯಕೀಯ ಅಧಿಕಾರಿಗೆ ಮಾಹಿತಿ ನೀಡಿದ್ದರು. ಸೆ.3ರಂದು ಮಧ್ಯಾಹ್ನ 3ರ ಸುಮಾರಿಗೆ, ವೈದ್ಯಾಧಿಕಾರಿ ಡಾ. ಸೆರೆನ್ ನಮ್ರತಾ ಪಿಎಚ್‌ಸಿಒ ನಂದಿನಿ ಮತ್ತು ಆಶಾ ಕಾರ್ಯಕರ್ತೆ ಹೆಚ್ಚಿನ ವಿಚಾರಣೆಗಾಗಿ ಮಹಿಳೆಯನ್ನು ಮತ್ತೆ ಭೇಟಿ ಮಾಡಿದ್ಧರು. ಈ ವೇಳೆ ಗರ್ಭಿಣಿ ಈಗಾಗಲೇ ಮೂರು ಹೆಣ್ಣು ಮಕ್ಕಳಿದ್ದು, ಇದೀಗ ಐದು ತಿಂಗಳ ಗರ್ಭಿಣಿಯಾಗಿದ್ದೆ. ಅಜ್ಞಾತ ಸ್ಥಳದಲ್ಲಿ ಅಕ್ರಮ ಲಿಂಗಪತ್ತೆ ಪರೀಕ್ಷೆ ಮಾಡಿಸಿದ್ದು, ಭ್ರೂಣವು ಹೆಣ್ಣು ಎಂದು ತಿಳಿಯಿತು ಎಂದು ಮಾಹಿತಿ ನೀಡಿದ್ದರು.
ಗರ್ಭಪಾತ ನಿರಾಕರಿಸಿದ್ದ ದಂಪತಿ
ಅಪರಚಿತ ವ್ಯಕ್ತಿಯೊಬ್ಬ ಗರ್ಭಿಣಿಯ ಪತಿಯ ಪರಿಚಯ ಮಾಡಿಕೊಂಡು, ಭ್ರೂಣ ಲಿಂಗ ಪತ್ತೆ ಹಚ್ಚಲು 7,000 ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದ್ದ. ನಂತರ ಮಹಿಳಾ ಏಜೆಂಟ್ ಸೀತಮ್ಮ ಎಂಬವಳು ಭ್ರೂಣವು ಹೆಣ್ಣು ಎಂದು ಪತಿಗೆ ತಿಳಿಸಿದ್ದಳು. ಮಹಿಳೆಯು ಗರ್ಭಪಾತ ಮಾಡಿಸುವಂತಿದ್ದರೆ 20,000 ಶುಲ್ಕವಾಗುತ್ತದೆ ಎಂದು ಮಹಿಳಾ ಏಜೆಂಟ್ ತಿಳಿಸಿದಾಗ, ಅಷ್ಟು ಹಣವಿಲ್ಲ ಎಂದು ನಿರಾಕರಿಸಿ ದಂಪತಿ ವಾಪಸ್ ಮಂಡ್ಯಕ್ಕೆ ಮರಳಿದ್ದರು.
ಸಂಪೂರ್ಣ ಘಟನೆಯನ್ನು ಪಿಸಿ&ಪಿಎನ್‌ಡಿಟಿ ಆಯುಕ್ತರೊಂದಿಗೆ ಉಪನಿರ್ದೇಶಕರು ವಿವರಿಸಿದಾಗ, ಆಂಧ್ರಪ್ರದೇಶ ಆಯುಕ್ತರ ಮೂಲಕ, ಅನಂತಪುರ ಜಿಲ್ಲೆಯ ರಾಜ್ಯ ನೋಡಲ್ ಅಧಿಕಾರಿ ಡಾ. ಅನಿಲ್ ಕುಮಾರ್ ಅವರನ್ನು ಡಾ. ವಿವೇಕ್ ದೊರೈರೊಂದಿಗೆ ಗುಪ್ತಕಾರ್ಯಚಾರಣೆಗಾಗಿ ನಿಯೋಜಿಸಿ ಸೆ.21ರಂದು ಕಾರ್ಯಾಚರಣೆ ನಡೆಸಿದ್ದರು.
ಭ್ರೂಣ ಲಿಂಗ ಪತ್ತೆಯನ್ನು ಸಾಮಾನ್ಯವಾಗಿ ಭಾನುವಾರದಂದು ಮಾತ್ರ ನಡೆಸಲಾಗುತ್ತದೆ ಮತ್ತು ಮಾಹಿತಿಯನ್ನು ಭಾನುವಾರದಂದು ಮಾತ್ರ ಬಹಿರಂಗಪಡಿಸಲಾಗುತ್ತದೆ. ಆದ್ದರಿಂದ, ಗುಪ್ತಕಾರ್ಯಚಾರಣೆಗೆ ಒಂದು ನಿರ್ದಿಷ್ಟ ಭಾನುವಾರವನ್ನು ಆಯ್ಕೆ ಮಾಡಿ ಮತ್ತು ಪುರಾವೆ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ಅದೇ ಗರ್ಭಿಣಿ ಮತ್ತು ಅವರ ಪತಿಯನ್ನು ಕರೆದೊಯ್ಯಲು ಯೋಜಿಸಲಾಗಿತ್ತು.
ಗಡಿ ಜಿಲ್ಲೆ ಅಧಿಕಾರಿಗಳಲ್ಲಿ ಸಮನ್ವಯ ಅಗತ್ಯ
ಭ್ರೂಣ ಲಿಂಗ ಪತ್ತೆ ಮಾಡುವ ಆಸ್ಪತ್ರೆ ಆಂಧ್ರಪ್ರದೇಶದಲ್ಲಿದ್ದರೂ, ಇದು ಕರ್ನಾಟಕದ ಗಡಿಗೆ, ವಿಶೇಷವಾಗಿ ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಬಹಳ ಹತ್ತಿರದಲ್ಲಿದೆ. ಆದ್ದರಿಂದ, ಪಿಸಿ&ಪಿಎನ್‌ಡಿಟಿ ಕಾಯ್ದೆಯಡಿಯಲ್ಲಿ ಇಂತಹ ಅಂತರ-ರಾಜ್ಯ ಉಲ್ಲಂಘನೆಗಳನ್ನು ತಡೆಯಲು ಕರ್ನಾಟಕ ಮತ್ತು ಆಂಧ್ರಪ್ರದೇಶದ ರಾಜ್ಯ ಮತ್ತು ಜಿಲ್ಲಾ ಸೂಕ್ತ ಅಧಿಕಾರಿಗಳೊಂದಿಗೆ ಸಮನ್ವಯವು ಅತ್ಯಗತ್ಯ.
ದಂಪತಿಗಳಿಗೆ ಹಣ ನೀಡಿದ ಅಧಿಕಾರಿಗಳು
ಸೆ.21ರಂದು ಮಧ್ಯಾಹ್ನ 12:00 ಗಂಟೆಗೆ, ಕರ್ನೂಲ್ ಜಿಲ್ಲೆಯ ಕೊಡುಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂಗೆ ಭೇಟಿ ನೀಡಿದ ದಂಪತಿಗಳಿಗೆ ಕಾರ್ಯಾಚರಣೆಯ ಭಾಗವಾಗಿ 9,000 ರೂ. ಹಸ್ತಾಂತರಿಸಲಾಗಿತ್ತು. ಸ್ಕ್ಯಾನ್ ನಡೆಸಿದ ನಂತರ, ಏಜೆಂಟ್ ಸೀತಮ್ಮ ದಂಪತಿಗಳಿಂದ 7,500 ರೂ. ಪಡೆದು 2,000 ರೂಪಾಯಿಯನ್ನು ಮೆಡಿಕಲ್ ಸ್ಟೋರ್‌ನಲ್ಲಿ ಪಾವತಿಸಿ, ಉಳಿದ 5,500 ರೂಪಾಯಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರು.
ಮೊದಲೇ ಯೋಚಿಸಿದಂತೆ ತಂಡವು ನೋಟುಗಳ ಸಂಖ್ಯೆಗಳನ್ನು ಪರಿಶೀಲಿಸಿ ಮೊದಲೇ ದಾಖಲಿಸಲಾದ ಸರಣಿ ಸಂಖ್ಯೆಗಳೊಂದಿಗೆ ಹೊಂದಾಣಿಕೆ ಮಾಡಿದ್ದು ಪ್ರಕರಣ ದೃಢಪಟ್ಟಿದ್ದು, ಪುರಾವೆಗಳ ಆಧಾರದ ಮೇಲೆ, ಹೆಚ್ಚಿನ ತನಿಖೆ ಮತ್ತು ಅಗತ್ಯ ಕಾನೂನು ಕ್ರಮಕ್ಕಾಗಿ ಆಂಧ್ರಪ್ರದೇಶದ ರಾಜ್ಯ ನೋಡಲ್ ಅಧಿಕಾರಿಯಾದ ಡಾ.ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ರವರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಇಲಾಖೆಯ ಕಾರ್ಯಚರಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಮಾಜ ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಸಚಿವರಿಂದ ಮೆಚ್ಚುಗೆ
ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವರು, ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ ಹಾಗೂ ಇಲಾಖೆಯಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲು ಸಾಧ್ಯವೋ ಅದನ್ನು ಪ್ರಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗೃತರಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದುಹಾಕಲು ಸಾಮಾಜಿಕ ಬದಲಾವಣೆ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.