
ವಿಶೇಷ ಪೌಷ್ಟಿಕ ಆಹಾರ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಸಿರು ನಿಶಾನೆ
ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ವಿಶೇಷ ಪೌಷ್ಟಿಕ ಆಹಾರ ಯೋಜನೆ ಆರಂಭ. ಚಿಕಿತ್ಸೆಯ ಜತೆಗೆ ಪೌಷ್ಠಿಕ ಆಹಾರ ಕೂಡ ಮಹತ್ವದ ಪಾತ್ರ ವಹಿಸಲಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು ರೋಗಿಗಳಿಗೆ ಅಗತ್ಯ ಪೌಷ್ಠಿಕಾಂಶ ಒದಗಿಸುವ ಆಹಾರವನ್ನು ನೀಡುವ ಯೋಜನೆಯನ್ನು ಆರೋಗ್ಯ ಇಲಾಖೆ ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಜಾರಿಗೆ ತಂದಿದೆ.
ಬೆಂಗಳೂರಿನ ಸಿ.ವಿ. ರಾಮನ್ ನಗರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ವಿತರಿಸುವ ಮೂಲಕ 'ವಿಶೇಷ ಪೌಷ್ಟಿಕ ಆಹಾರ' ಯೋಜನೆಗೆ ಹಸಿರು ನಿಶಾನೆ ತೋರಲಾಯಿತು. ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರೋಗಿಗಳ ಚೇತರಿಕೆಗೆ ಚಿಕಿತ್ಸೆಯ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಕೂಡ ಮಹತ್ವದ ಪಾತ್ರ ವಹಿಸಲಿದೆ. ಈ ಯೋಜನೆಯ ಮೂಲಕ ರೋಗಿಗಳ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರವನ್ನು ಒದಗಿಸಲಾಗುವುದು. ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರ ಸೂಕ್ತವಲ್ಲ ಎಂದು ಹೇಳಿದರು.
ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ, ಜಯನಗರ ಹಾಗೂ ಸಿ.ವಿ ರಾಮನ್ ನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರವನ್ನು ಪ್ರತಿನಿತ್ಯ ಒದಗಿಸಲಾಗುವುದು. ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಆರೋಗ್ಯ ಇಲಾಖೆ ಯೋಜನೆಯನ್ನು ಜಾರಿಗೆ ತಂದಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಜಿಲ್ಲಾಸ್ಪತ್ರೆಗಳಿಗೆ ಪೌಷ್ಠಿಕ ಆಹಾರ ವಿತರಣೆ ಜಾರಿಗೆ ತರುವುದಾಗಿ ಹೇಳಿದರು.
ಸಾಮಾನ್ಯ ಆಹಾರ ಕ್ರಮದ ಜತೆಗೆ ಚಿಕಿತ್ಸಾ ಆಹಾರ ಕ್ರಮವನ್ನು ಯೋಜನೆಯಡಿ ರೂಪಿಸಲಾಗಿದೆ. ಗರ್ಭಿಣಿಯರ ಆಹಾರ ಕ್ರಮ, ಬಾಣಂತಿಯರ ಆಹಾರ ಕ್ರಮ ಹಾಗು ಮಕ್ಕಳ ಆಹಾರ ಕ್ರಮ ಎಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ಯೋಜನೆಯಡಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ರೋಗಿಯ ಆರೋಗ್ಯ ಚೇತರಿಕೆಗೆ ಸಹಕಾರಿಯಾಗುವಂತೆ ವೈದ್ಯಕೀಯ ಉದ್ದೇಶಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಪ್ರತಿ ಆಸ್ಪತ್ರೆಯಲ್ಲಿ ಸುಮಾರು 250 ರೋಗಿಗಳಿಗೆ ಪ್ರತಿದಿನ ಆಹಾರವನ್ನು ಸರಬರಾಜು ಮಾಡಲು ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 9 ತಿಂಗಳ ಅವಧಿಗೆ 1,37,45,700 ರೂ. ವೆಚ್ಚವನ್ನು ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತದೆ. ಯೋಜನೆಯಡಿ ರೋಗಿಗಳಿಗೆ ಪ್ರತಿದಿನ - ಬೆಳಗಿನ ಉಪಹಾರ, ಬೆಳಿಗ್ಗೆ ಮತ್ತು ಸಂಜೆ ಲಘು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ರೋಗನಿರೋಧಕ ಶಕ್ತಿ ಮತ್ತು ಸರಿಯಾದ ಬೆಳವಣಿಗೆಗೆ ವಿಶೇಷ ಪೌಷ್ಟಿಕಾಂಶಗಳನ್ನು ಪಡೆಯುವುದು ಬಹಳ ಮುಖ್ಯ. ಈ ಯೋಜನೆಯು ಇಂತಹ ರೋಗಿಗಳ ಅಗತ್ಯಗಳಿಗೆ ಆದ್ಯತೆ ನೀಡಿದೆ. ಉದಾಹರಣೆಗೆ, ಗರ್ಭಿಣಿಯರಿಗೆ ಗರ್ಭಾವಸ್ಥೆಯ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೆಚ್ಚಿರುವ ಆಹಾರವನ್ನು ನೀಡಲಾಗುತ್ತದೆ. ಬಾಣಂತಿಯರಿಗೆ ಹಾಲು ಉತ್ಪಾದನೆ ಮತ್ತು ಆರೋಗ್ಯಕ್ಕೆ ಸಹಕಾರಿಯಾಗುವ ಆಹಾರವನ್ನು ಒದಗಿಸಲಾಗುತ್ತದೆ. ಸಮರ್ಪಕ ಪೌಷ್ಟಿಕ ಆಹಾರವು ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು.