ಪುದುಚೆರಿ ಗಡಿಯಲ್ಲಿ ಟ್ರಾಫಿಕ್ ಜಾಮ್: ಅರ್ಧ ಕಿಲೋಮೀಟರ್ ನಡೆದುಕೊಂಡು ಹೋದ ಕೇಂದ್ರ ಸಚಿವ ಮಾಂಡವಿಯಾ!
ತಿಂಡಿವನಂ-ಪುದುಚೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ನಿತಿನ್ ನಬಿನ್ ಅವರ ವಾಹನ ನಿಗದಿತ ಸಮಯಕ್ಕಿಂತ ತಡವಾಗಿ ಸ್ಥಳಕ್ಕೆ ತಲುಪಿತು. ಅಲ್ಲಿಂದ ಅವರು ರೋಡ್‌ಶೋಗಾಗಿ ಸಿದ್ಧಪಡಿಸಲಾಗಿದ್ದ ಮತ್ತೊಂದು ವಾಹನವನ್ನು ಏರಿದರು.
ಭದ್ರತಾ ಲೋಪ ಮತ್ತು ಟ್ರಾಫಿಕ್ ದಟ್ಟಣೆಯಿಂದಾಗಿ ಕೇಂದ್ರ ಕಾರ್ಮಿಕ ಸಚಿವ ಹಾಗೂ ಪುದುಚೆರಿ ಬಿಜೆಪಿ ಉಸ್ತುವಾರಿ ಮನ್ಸುಖ್ ಮಾಂಡವಿಯಾ ಅವರು ತಮಿಳುನಾಡು-ಪುದುಚೇರಿ ಗಡಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಶನಿವಾರ (ಡಿ. 20) ಎದುರಾಯಿತು. ತಮ್ಮ ಬೆಂಗಾವಲು ವಾಹನ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪದ ಕಾರಣ ಸಚಿವರು ತೀವ್ರ ಅಸಮಾಧಾನಗೊಂಡ ಘಟನೆ ನಡೆದಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಕಾರ್ಯಕರ್ತರು ಮತ್ತು ಬೂತ್ ಸಮಿತಿ ಸದಸ್ಯರನ್ನು ಭೇಟಿಯಾಗಲು ಎರಡು ದಿನಗಳ ಪ್ರವಾಸಕ್ಕಾಗಿ ಪುದುಚೇರಿಗೆ ಆಗಮಿಸಿದ್ದರು. ಅವರನ್ನು ಬರಮಾಡಿಕೊಳ್ಳಲು ಸಚಿವ ಮಾಂಡವಿಯಾ ಸೇರಿದಂತೆ ಪುದುಚೇರಿ ಬಿಜೆಪಿಯ ಹಿರಿಯ ನಾಯಕರಾದ ನಮಶಿವಾಯಂ, ರಾಮಲಿಂಗಂ ಮತ್ತು ಕಲ್ಯಾಣಸುಂದರಂ ಅವರು ತಮಿಳುನಾಡು-ಪುದುಚೇರಿ ಗಡಿಯ ಗೋರಿಮೇಡು ಚೆಕ್ ಪೋಸ್ಟ್ ಬಳಿ ಕಾಯುತ್ತಿದ್ದರು.
ನಾಯಕರಿಗೆ ಸ್ವಾಗತ, ಸಚಿವರಿಗೆ ಸಂಕಷ್ಟ
ತಿಂಡಿವನಂ-ಪುದುಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ನಿತಿನ್ ನಬಿನ್ ಅವರ ವಾಹನ ನಿಗದಿತ ಸಮಯಕ್ಕಿಂತ ತಡವಾಗಿ ಸ್ಥಳಕ್ಕೆ ತಲುಪಿತು. ಅಲ್ಲಿಂದ ಅವರು ರೋಡ್‌ಶೋಗಾಗಿ ಸಿದ್ಧಪಡಿಸಲಾಗಿದ್ದ ಮತ್ತೊಂದು ವಾಹನವನ್ನು ಏರಿದರು. ಈ ವೇಳೆ ಅವರ ಜೊತೆಗಿದ್ದ ಸ್ಥಳೀಯ ಬಿಜೆಪಿ ನಾಯಕರು ಸಹ ಅದೇ ವಾಹನವನ್ನೇರಿ ಮುಂದೆ ಸಾಗಿದರು. ಆದರೆ, ಈ ಗದ್ದಲದಲ್ಲಿ ಕೇಂದ್ರ ಸಚಿವ ಮಾಂಡವಿಯಾ ಅವರು ಹಿಂದೆ ಉಳಿಯುವಂತಾಯಿತು.
ರಾಷ್ಟ್ರೀಯ ನಾಯಕರ ಬೆಂಗಾವಲು ಪಡೆ ಮುಂದೆ ಸಾಗಿದರೆ, ಮಾಂಡವಿಯಾ ಅವರ ವಾಹನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತು. ಬೇರೆ ದಾರಿಯಿಲ್ಲದೆ ಸಚಿವರು ಗೋರಿಮೇಡು ಜಂಕ್ಷನ್‌ನಿಂದ ಜಿಪ್ಮರ್ (JIPMER) ಕಡೆಗೆ ಬರೋಬ್ಬರಿ 250 ಮೀಟರ್‌ಗಳಷ್ಟು ದೂರ, ಸುಮಾರು 10 ನಿಮಿಷಗಳ ಕಾಲ ನಡೆದುಕೊಂಡೇ ಸಾಗಬೇಕಾಯಿತು.
ಈ ಅವ್ಯವಸ್ಥೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಸಚಿವರು, "ನಾನು ಮುಂದೆ ಹೋಗಬೇಕು. ನನ್ನ ವಾಹನಗಳು ಎಲ್ಲಿವೆ?" ಎಂದು ತಮ್ಮ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದ ದೃಶ್ಯ ಕಂಡುಬಂತು. ಕೊನೆಗೆ ವಿಳಂಬವಾಗಿ ಬಂದ ಭದ್ರತಾ ವಾಹನವೊಂದನ್ನು ಏರಿದ ಅವರು, ಅಸಮಾಧಾನದೊಂದಿಗೆಯೇ ಕಾರ್ಯಕ್ರಮಕ್ಕೆ ತೆರಳಿದರು.