ನಟ ಸೋನು ಸೂದ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆಸ್ತಿ ಜಪ್ತಿ
ಕ್ರಿಕೆಟಿಗರು ಮತ್ತು ನಟ-ನಟಿಯರು ವಿದೇಶಿ ಕಂಪನಿಗಳೊಂದಿಗೆ ಬೆಟ್ಟಿಂಗ್ ಆಪ್ ಪ್ರಚಾರದ ಒಪ್ಪಂದಗಳನ್ನು ಮಾಡಿಕೊಂಡಿದ್ದರು.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟ ಸೋನು ಸೂದ್
ವಿದೇಶಿ ಮೂಲದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜು ಆಪ್‌ಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕ್ರಿಕೆಟಿಗರಾದ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ ಮತ್ತು ಬಾಲಿವುಡ್ ನಟರಾದ ಸೋನು ಸೂದ್, ಊರ್ವಶಿ ರೌಟೇಲಾ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಇಡಿ ಬಿಸಿ ಮುಟ್ಟಿಸಿದೆ. ಈ ಗಣ್ಯರಿಗೆ ಸೇರಿದ ಸುಮಾರು 7.93 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ನಟರಾದ ಮಿಮಿ ಚಕ್ರವರ್ತಿ, ಅಂಕುಶ್ ಹಜ್ರಾ ಮತ್ತು ನೇಹಾ ಶರ್ಮಾ ಅವರದ್ದು ಸಹ ಸೇರಿದೆ. ವಿದೇಶಿ ಮೂಲದ ಅಕ್ರಮ ಬೆಟ್ಟಿಂಗ್ ಆಪ್‌ಗಳು ಭಾರತದಲ್ಲಿ ಕಾನೂನುಬಾಹಿರವಾಗಿ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಜನರನ್ನು ಪ್ರಚೋದಿಸುತ್ತಿವೆ. ಈ ಸಂಬಂಧ ದಾಖಲಾದ ಹಲವಾರು ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ತನಿಖೆ ಕೈಗೊಂಡಿದೆ.
'ಸರೊಗೇಟ್' ಬ್ರ್ಯಾಂಡ್ ಮೂಲಕ ಪ್ರಚಾರ
ಕ್ರಿಕೆಟಿಗರು ಮತ್ತು ನಟ-ನಟಿಯರು ವಿದೇಶಿ ಕಂಪನಿಗಳೊಂದಿಗೆ ಪ್ರಚಾರದ ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಈ ಬೆಟ್ಟಿಂಗ್ ಆಪ್‌ಗಳನ್ನು ಸರೋಗೇಟ್ ಬ್ರ್ಯಾಂಡ್‌ಗಳ ಮೂಲಕ ಪ್ರಚಾರ ಮಾಡುವ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಈ ಆಪ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಯಾವುದೇ ಅಧಿಕೃತ ಅನುಮತಿ ಪಡೆದಿರಲಿಲ್ಲ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ 6 ರಂದು ಇ.ಡಿ. ಮತ್ತೊಂದು ದೊಡ್ಡ ಕ್ರಮ ಕೈಗೊಂಡಿತ್ತು. ಆಗ ಖ್ಯಾತ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾ ಅವರಿಗೆ ಸೇರಿದ 11.14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು.
ಏನಿದು 'ಸರೊಗೇಟ್' ?
ವಾಣಿಜ್ಯ ಕ್ಷೇತ್ರದಲ್ಲಿ, ಕಾನೂನುಬದ್ಧವಾಗಿ ನೇರವಾಗಿ ಜಾಹೀರಾತು ನೀಡಲು ನಿಷೇಧವಿರುವ ಉತ್ಪನ್ನಗಳನ್ನು (ಉದಾಹರಣೆಗೆ ಮದ್ಯ, ತಂಬಾಕು ಅಥವಾ ಬೆಟ್ಟಿಂಗ್ ಆ್ಯಪ್‌ಗಳು), ಬೇರೊಂದು ಕಾನೂನುಬದ್ಧ ಉತ್ಪನ್ನದ ಹೆಸರಿನಲ್ಲಿ ಪ್ರಚಾರ ಮಾಡುವುದಕ್ಕೆ 'ಸರೊಗೇಟ್ ಬ್ರ್ಯಾಂಡಿಂಗ್' ಅಥವಾ 'ಸರೊಗೇಟ್ ಅಡ್ವರ್ಟೈಸಿಂಗ್' ಎನ್ನಲಾಗುತ್ತದೆ.
ಮಹದೇವ್ ಬೆಟ್ಟಿಂಗ್ ಪ್ರಕರಣ
ಅಕ್ರಮ ಬೆಟ್ಟಿಂಗ್ ಹಾಗೂ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಹಗರಣಗಳಲ್ಲಿ, ವಿಶೇಷವಾಗಿ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ಸಿನಿಮಾ ನಟರು ಹಾಗೂ ಕ್ರಿಕೆಟಿಗರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದರು. ಪ್ರಮುಖವಾಗಿ ರಣಬೀರ್ ಕಪೂರ್, ಶ್ರದ್ಧಾ ಕಪೂರ್, ಸೋನು ಸೂದ್, ಸಾಹಿಲ್ ಖಾನ್, ತಮನ್ನಾ ಭಾಟಿಯಾ, ಕಪಿಲ್ ಶರ್ಮಾ, ಹುಮಾ ಖುರೇಷಿ , ಹಿನಾ ಖಾನ್, ಪೃಥ್ವಿರಾಜ್ ಮತ್ತು ವಿಜಯ್ ದೇವರಕೊಂಡ ಅವರಿಗೂ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು.