ಹಲಸು, ಹುಣಸೆ, ನೇರಳೆ ಘಮ| ರಾಷ್ಟ್ರೀಯ ಮಂಡಳಿ ಸ್ಥಾಪಿಸಲು ಕೇಂದ್ರಕ್ಕೆ ದೇವೇಗೌಡ ಸಲಹೆ
ಹಲಸು ಮತ್ತು ನೇರಳೆಗಳನ್ನು ಪ್ರಧಾನವಾಗಿ ದೇಶದ ದಕ್ಷಿಣ, ಮಧ್ಯ, ಪೂರ್ವ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಮಾವು, ಹುಣಸೆ ಮತ್ತು ನೇರಳೆ ಪ್ರಮುಖ ತೋಟಗಾರಿಕಾ ಬೆಳೆಗಳಾಗಿವೆ.
ಹಲಸು, ಹುಣಸೆ ಹಾಗೂ ನೇರಳೆ ಹಣ್ಣು
ಹುಣಸೆ, ಹಲಸು ಮತ್ತು ನೇರಳೆ ಸೇರಿದಂತೆ ಪೌಷ್ಟಿಕಾಂಶಯುಕ್ತ ಹಣ್ಣಿನ ಬೆಳೆಗಳಿಗಾಗಿ ಪ್ರತ್ಯೇಕವಾದ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತೆ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಮಾಡಿದ್ದಾರೆ.
ಶುಕ್ರವಾರ (ಡಿ.19) ಸಂಸತ್ ಭವನದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಿದ ಅವರು, ಹುಣಸೆ, ಹಲಸು ಮತ್ತು ನೇರಳೆ - ಔಷಧ ಗುಣಗಳುಳ್ಳ ಪೌಷ್ಟಿಕಾಂಶಯುಕ್ತ ಹಣ್ಣಿನ ಬೆಳೆಗಳಾಗಿವೆ, ಇವುಗಳನ್ನು ಶತಮಾನಗಳಿಂದ ದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗಳು ಸಾವಯವವಾಗಿ, ಪ್ರಕೃತಿಯಲ್ಲಿ ಇವು ಸಶಕ್ತವಾಗಿ ಬೆಳೆಯುತ್ತವೆ. ಕಡಿಮೆ ಮಳೆಯ ಅಗತ್ಯವಿದ್ದು, ಕಡಿಮೆ ವೆಚ್ಚದಲ್ಲಿ ಬೆಳೆಸಲಾಗುತ್ತದೆ ಎಂದು ತಿಳಿಸಿದರು.
ಹುಣಸೆ ಹಣ್ಣನ್ನು ದೇಶಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ, ಮಧ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ, ಆದರೆ ಹಲಸು ಮತ್ತು ನೇರಳೆಗಳನ್ನು ಪ್ರಧಾನವಾಗಿ ದೇಶದ ದಕ್ಷಿಣ, ಮಧ್ಯ, ಪೂರ್ವ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಭಾರತವು ಈ ಹಣ್ಣುಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಏಷ್ಯಾದ ಕೆಲ ದೇಶಗಳು ಮತ್ತು ಆಫ್ರಿಕನ್ ದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಈ ಕೃಷಿ ಕಂಡುಬರುತ್ತದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಳುವರಿಯಲ್ಲಿ ಸುಧಾರಣೆ
ಸಾಂಪ್ರದಾಯಿಕವಾಗಿ ಈ ಬೆಳೆಗಳನ್ನು ಬೀಜಗಳನ್ನು ನೆಟ್ಟು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಸಿ ಮಾಡಿದ ಸಸಿಗಳು ಸಾಮಾನ್ಯವಾಗಿದ್ದು, ಇಳುವರಿ ಮತ್ತು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಪ್ರತಿ ವರ್ಷ ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು ಕೊಯ್ಲು ಮಾಡುತ್ತಿದ್ದರೂ ಹಣ್ಣುಗಳ ಗಮನಾರ್ಹ ಭಾಗವು ಕೊಯ್ಲು ಮಾಡದೆ ಮತ್ತು ಕಡಿಮೆ ಬಳಕೆಯಲ್ಲಿವೆ. ಕೊಯ್ಲು ಮಾಡುವಲ್ಲಿನ ತೊಂದರೆ, ಖರೀದಿದಾರರ ಕೊರತೆ, ಅಸಮರ್ಪಕ ಸಂಸ್ಕರಣಾ ಸೌಲಭ್ಯಗಳು ಮತ್ತು ದೇಶಾದ್ಯಂತ ಬೆಳೆಗಾರರಿಗೆ ಶೀತಲೀಕರಣ ಕೇಂದ್ರಗಳಿಗೆ ಸೀಮಿತ ಪ್ರವೇಶದಂತಹ ಸವಾಲುಗಳು ಇದಕ್ಕೆ ಕಾರಣವೆಂದು ತಿಳಿಸಿದ್ದಾರೆ.
ಉದ್ಯೋಗ ಸೃಷ್ಟಿ
ಈ ಹಣ್ಣುಗಳು ಮತ್ತು ಅವುಗಳ ಉಪ ಉತ್ಪನ್ನಗಳು ಔಷಧೀಯ ಕೈಗಾರಿಕೆಗಳಿಂದ ಬೇಡಿಕೆ ಸೇರಿದಂತೆ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಈ ಬೆಳೆಗಳನ್ನು ಹೆಚ್ಚಿನ ಆದಾಯಗಳಿಸುವ, 'ಡಾಲರ್ ಗಳಿಸುವ' ಬೆಳೆಗಳೆಂದು ಕೃಷಿ ಸಚಿವರ ಗಮನ ಸೆಳೆದರು. ಅಲ್ಲದೆ, ಇದು ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ರಾಜ್ಯದಲ್ಲಿ ಮಾವು, ಹುಣಸೆ ಮತ್ತು ನೇರಳೆ ಪ್ರಮುಖ ತೋಟಗಾರಿಕಾ ಬೆಳೆಗಳಾಗಿವೆ.
ಮಾವು : ದೇಶದ ಪ್ರಮುಖ ಮಾವು ಉತ್ಪಾದನಾ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ ಸುಮಾರು 1.8 ರಿಂದ 2.0 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಸರಾಸರಿ 12 ರಿಂದ 15 ಲಕ್ಷ ಟನ್ ಇಳುವರಿ ಬರುತ್ತದೆ.
ರಾಜ್ಯದ 'ಮಾವು ನಗರಿ' ಎಂದು ಕರೆಯಲ್ಪಡುವ ಕೋಲಾರದಲ್ಲಿ ಅತಿ ಹೆಚ್ಚು ಮಾವಿನ ಹಣ್ಣು ಬೆಳೆಯಲಾಗುತ್ತದೆ. ರಾಮನಗರದಲ್ಲಿ ವಿಶೇಷವಾಗಿ ಬೆಳೆಯುವ 'ಬಾದಾಮಿ' ತಳಿ ಹೆಚ್ಚು ಪ್ರಸಿದ್ಧವಾಗಿದ್ದು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಧಾರವಾಡ ಮತ್ತು ಬೆಳಗಾವಿಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಹುಣಸೆ: ಶುಷ್ಕ ವಲಯದ ಜಿಲ್ಲೆಗಳಿಗೆ ಹುಣಸೆ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರಾಜ್ಯದಲ್ಲಿ ಸುಮಾರು 15,000 ರಿಂದ 20,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಕರ್ನಾಟಕವು ದೇಶದಲ್ಲೇ ಒಟ್ಟು ಹುಣಸೆ ಉತ್ಪಾದನೆಯಲ್ಲಿ ಗಣನೀಯ ಪಾಲು ಹೊಂದಿದೆ. ತುಮಕೂರು ಜಿಲ್ಲೆಯ ತಿಪಟೂರು ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚಿನ ಉತ್ಪಾದನೆ ಇದ್ದು ಹುಣಸೆ ಮಾರುಕಟ್ಟೆಗೆ ಚಿತ್ರದುರ್ಗ ಪ್ರಸಿದ್ಧಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಬರಡು ಭೂಮಿಯಲ್ಲಿ ಹುಣಸೆ ಪ್ರಮುಖ ಬೆಳೆಯಾಗಿದ್ದು, ಮಂಡ್ಯ ಮತ್ತು ಮೈಸೂರಿನಲ್ಲಿ ಬೆಳೆಯಲಾಗುತ್ತದೆ.
ನೇರಳೆ: ಇತ್ತೀಚಿನ ವರ್ಷಗಳಲ್ಲಿ ನೇರಳೆ ವಾಣಿಜ್ಯ ಬೆಳೆಯಾಗಿ ಹೆಚ್ಚು ಜನಪ್ರಿಯವಾಗುತ್ತಿದೆ. ಇತರೆ ಹಣ್ಣುಗಳಿಗೆ ಹೋಲಿಸಿದರೆ ಇದರ ವಿಸ್ತೀರ್ಣ ಕಡಿಮೆ ಸುಮಾರು 2,000 ರಿಂದ 3,000 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದ್ದು, ಜಂಬೂ ನೇರಳೆ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಭಾಗದ ನೇರಳೆ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕೋಲಾರದ ಹವಾಮಾನ ಪೂರಕವಾಗಿರುವುದರಿಂದ ಹೆಚ್ಚಿನ ರೈತರು ನೇರಳೆ ಬೆಳೆಯುತ್ತಿದ್ದಾರೆ. ಬೆಳಗಾವಿ, ಧಾರವಾಡ, ತುಮಕೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ನೇರಳೆ ಬೆಳೆಯಲಾಗುತ್ತದೆ.