ಸುದೀರ್ಘ ರೋಗಗ್ರಸ್ತರಿಗೆ ‘ಗೌರವಯುತ ಸಾವು’: ವೈದ್ಯಕೀಯ ನೆರವಿನ ಆತ್ಮಹತ್ಯೆಗೆ ಕಾನೂನಿನ ಮುದ್ರೆ!

ನ್ಯೂಯಾರ್ಕ್ ರಾಜ್ಯದ ಶಾಸಕಾಂಗ ನಾಯಕರೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ, ಡೆಮಾಕ್ರಟಿಕ್ ಪಕ್ಷದ ನಾಯಕಿ ಹಾಗೂ ಗವರ್ನರ್ ಆಗಿರುವ ಕ್ಯಾಥಿ ಹೋಚುಲ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Update: 2025-12-18 06:51 GMT

'g' ಸರಣಿಯನ್ನು ಸೇರಿಸಲು ಒತ್ತಾಯಿಸಿದ ನಂತರ ಮುಂದಿನ ವರ್ಷ ಪ್ರಸ್ತಾವನೆಗೆ ಸಹಿ ಹಾಕಲು ಡೆಮಾಕ್ರಟಿಕ್ ಗವರ್ನರ್ ಕ್ಯಾಥಿ ಹೊಚುಲ್ ಯೋಜಿಸಿದ್ದಾರೆ

Click the Play button to listen to article

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಬದುಕುವ ಭರವಸೆ ಕಳೆದುಕೊಂಡಿರುವ ಅಂತಿಮ ಹಂತದ ರೋಗಿಗಳಿಗೆ ವೈದ್ಯಕೀಯ ನೆರವಿನೊಂದಿಗೆ ತಮ್ಮ ಜೀವನವನ್ನು ಅಂತ್ಯಗೊಳಿಸಲು ಅವಕಾಶ ನೀಡುವ ಮಹತ್ವದ ನಿರ್ಧಾರವನ್ನು ನ್ಯೂಯಾರ್ಕ್ ರಾಜ್ಯ ತೆಗೆದುಕೊಂಡಿದೆ

ತೀವ್ರವಾದ ನೋವು ಅನುಭವಿಸುತ್ತಿರುವ ರೋಗಿಗಳಿಗೆ ‘ದಯಾಮರಣ’ ಅಥವಾ ವೈದ್ಯಕೀಯ ನೆರವಿನ ಆತ್ಮಹತ್ಯೆಗೆ ಅವಕಾಶ ನೀಡುವ ಮಸೂದೆಗೆ ಸಹಿ ಹಾಕಲು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್ ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುತ್ತಿರುವ ರಾಜ್ಯಗಳ ಸಾಲಿಗೆ ನ್ಯೂಯಾರ್ಕ್ ಕೂಡ ಸೇರ್ಪಡೆಯಾಗಲಿದೆ.

ನ್ಯೂಯಾರ್ಕ್ ರಾಜ್ಯದ ಶಾಸಕಾಂಗ ನಾಯಕರೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ, ಡೆಮಾಕ್ರಟಿಕ್ ಪಕ್ಷದ ನಾಯಕಿ ಹಾಗೂ ಗವರ್ನರ್ ಆಗಿರುವ ಕ್ಯಾಥಿ ಹೋಚುಲ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಂದಿನ ವರ್ಷ ಅವರು ಈ ಮಸೂದೆಗೆ ಅಧಿಕೃತವಾಗಿ ಸಹಿ ಹಾಕಲಿದ್ದು, ಆ ನಂತರದ ಆರು ತಿಂಗಳ ಬಳಿಕ ಕಾನೂನು ಜಾರಿಗೆ ಬರಲಿದೆ. ‘ಅಲ್ಬಾನಿ ಟೈಮ್ಸ್ ಯೂನಿಯನ್’ನಲ್ಲಿ ಬರೆದ ಲೇಖನವೊಂದರಲ್ಲಿ ಹೋಚುಲ್ ಅವರು ತಮ್ಮ ಈ ನಿರ್ಧಾರದ ಹಿಂದಿನ ಸಂಘರ್ಷ ಮತ್ತು ಮಾನವೀಯತೆಯ ಆಯಾಮಗಳನ್ನು ಬಿಚ್ಚಿಟ್ಟಿದ್ದಾರೆ.

ಸ್ವತಃ ಕ್ಯಾಥೊಲಿಕ್ ಆಗಿರುವ ಅವರು, ಧಾರ್ಮಿಕ ನಂಬಿಕೆಗಳು ಮತ್ತು ರೋಗಿಗಳ ನರಳಾಟದ ನಡುವೆ ಅಂತಿಮವಾಗಿ ಕರುಣೆಯ ಹಾದಿಯನ್ನು ಆರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ದೇವರು ಕರುಣಾಮಯಿ, ಹೀಗಾಗಿ ಅಂತಿಮ ದಿನಗಳಲ್ಲಿ ನರಕಯಾತನೆ ಅನುಭವಿಸುತ್ತಿರುವವರಿಗೆ ನೆಮ್ಮದಿಯ ಸಾವನ್ನು ಅರಸಲು ಅವಕಾಶ ನೀಡುವುದು ಕೂಡ ಕರುಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದುರುಪಯೋಗ ತಡೆಗೆ ಕ್ರಮ

ಈ ಮಸೂದೆಯು ದುರುಪಯೋಗವಾಗದಂತೆ ತಡೆಯಲು ಗವರ್ನರ್ ಹೋಚುಲ್ ಅವರು ಅತ್ಯಂತ ಕಠಿಣವಾದ ‘ಸುರಕ್ಷತಾ ಕ್ರಮಗಳನ್ನು’ ಅಳವಡಿಸಲು ಸೂಚಿಸಿದ್ದಾರೆ. ಉದ್ದೇಶಿತ ‘ಮೆಡಿಕಲ್ ಏಡ್ ಇನ್ ಡೈಯಿಂಗ್ ಆಕ್ಟ್’ ಅನ್ವಯ, ಇನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಬದುಕುವ ಸಾಧ್ಯತೆಯಿಲ್ಲ ಎಂದು ವೈದ್ಯರು ದೃಢಪಡಿಸಿದ ರೋಗಿಗಳಿಗೆ ಮಾತ್ರ ಈ ಆಯ್ಕೆ ಲಭ್ಯವಿರುತ್ತದೆ. ಜೀವವನ್ನು ಅಂತ್ಯಗೊಳಿಸುವ ಔಷಧವನ್ನು ಪಡೆಯಲು ರೋಗಿಯು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕಾಗುತ್ತದೆ. ರೋಗಿಯ ಮೇಲೆ ಕುಟುಂಬಸ್ಥರಾಗಲೀ ಅಥವಾ ಇನ್ಯಾರೇ ಆಗಲೀ ಒತ್ತಡ ಹೇರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಬ್ಬರು ಸಾಕ್ಷಿಗಳು ಈ ಮನವಿಗೆ ಸಹಿ ಹಾಕಬೇಕಾಗುತ್ತದೆ. ಅಷ್ಟೇ ಅಲ್ಲದೆ, ರೋಗಿಯು ಮಾನಸಿಕವಾಗಿ ಸದೃಢವಾಗಿದ್ದಾರೆ ಮತ್ತು ಸ್ವಇಚ್ಛೆಯಿಂದಲೇ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರು ಕಡ್ಡಾಯವಾಗಿ ದೃಢೀಕರಿಸಬೇಕೆಂಬ ನಿಯಮವನ್ನು ಗವರ್ನರ್ ಸೇರಿಸಿದ್ದಾರೆ.

ಕಾನೂನಿನ ಪ್ರಕಾರ, ರೋಗಿಯು ಮನವಿ ಸಲ್ಲಿಸಿದ ನಂತರ ಕಡ್ಡಾಯವಾಗಿ ಐದು ದಿನಗಳ ಕಾಯುವಿಕೆ ಅವಧಿ ಇರುತ್ತದೆ. ಇದಾದ ಬಳಿಕವೂ ರೋಗಿಯು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರೆ, ಲಿಖಿತ ಮತ್ತು ರೆಕಾರ್ಡ್ ಮಾಡಿದ ಮೌಖಿಕ ಹೇಳಿಕೆಯನ್ನು ನೀಡಬೇಕಾಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ, ಈ ಸೌಲಭ್ಯವು ಕೇವಲ ನ್ಯೂಯಾರ್ಕ್ ರಾಜ್ಯದ ನಿವಾಸಿಗಳಿಗೆ ಮಾತ್ರ ಲಭ್ಯವಿರುತ್ತದೆ. ಹೊರ ರಾಜ್ಯದವರು ಇಲ್ಲಿಗೆ ಬಂದು ಈ ಕಾನೂನಿನ ಲಾಭ ಪಡೆಯುವಂತಿಲ್ಲ. ಇತ್ತೀಚೆಗೆ ಫೆಡರಲ್ ನ್ಯಾಯಾಲಯವೊಂದು ನ್ಯೂಜೆರ್ಸಿಯ ಇದೇ ರೀತಿಯ ಕಾನೂನು ಕೇವಲ ಅಲ್ಲಿನ ನಿವಾಸಿಗಳಿಗೆ ಸೀಮಿತ ಎಂದು ತೀರ್ಪು ನೀಡಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ನ್ಯೂಯಾರ್ಕ್‌ನಲ್ಲೂ ಈ ನಿಯಮ ಅಳವಡಿಸಲಾಗಿದೆ. ಧಾರ್ಮಿಕ ಆಸ್ಪತ್ರೆಗಳಿಗೆ ಸಂಬಂಧಿಸಿದ ಹೊರರೋಗಿ ವಿಭಾಗಗಳು ಈ ಸೇವೆಯನ್ನು ನೀಡಲು ನಿರಾಕರಿಸುವ ಹಕ್ಕನ್ನು ಕೂಡ ಹೊಂದಿರುತ್ತವೆ.

ತೀವ್ರ ವಿರೋಧ

ಈ ಮಸೂದೆಗೆ ಧಾರ್ಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನ್ಯೂಯಾರ್ಕ್ ರಾಜ್ಯದ ಕ್ಯಾಥೊಲಿಕ್ ಕಾನ್ಫರೆನ್ಸ್ ಮತ್ತು ಕಾರ್ಡಿನಲ್ ತಿಮೋತಿ ಡೋಲನ್ ಅವರು ಈ ನಡೆಯನ್ನು ಖಂಡಿಸಿದ್ದಾರೆ. ಇದು ಮಾನವ ಜೀವದ ಮೌಲ್ಯವನ್ನು ಕುಗ್ಗಿಸುತ್ತದೆ ಮತ್ತು ಸಮಾಜದ ಅತ್ಯಂತ ದುರ್ಬಲ ನಾಗರಿಕರನ್ನು ಸರ್ಕಾರ ಕೈಬಿಟ್ಟಂತಾಗುತ್ತದೆ ಎಂದು ಅವರು ಟೀಕಿಸಿದ್ದಾರೆ. ಅಸ್ವಸ್ಥರು ಮತ್ತು ವಿಕಲಾಂಗರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಸ್ವೀಕಾರಾರ್ಹವಷ್ಟೇ ಅಲ್ಲ, ಅದಕ್ಕೆ ನಾಯಕರು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ಆತಂಕವನ್ನು ಧಾರ್ಮಿಕ ಮುಖಂಡರು ವ್ಯಕ್ತಪಡಿಸಿದ್ದಾರೆ. 2016ರಲ್ಲೇ ಈ ಮಸೂದೆಯನ್ನು ಮಂಡಿಸಲಾಗಿತ್ತಾದರೂ, ಧಾರ್ಮಿಕ ವಿರೋಧದ ಕಾರಣದಿಂದ ಇದು ಇಷ್ಟು ವರ್ಷ ನೆನಗುದಿಗೆ ಬಿದ್ದಿತ್ತು. ಇದೀಗ ಗವರ್ನರ್ ಅವರ ದೃಢ ನಿರ್ಧಾರದಿಂದಾಗಿ ಕಾನೂನು ರೂಪ ಪಡೆಯುತ್ತಿದ್ದು, ಅಮೆರಿಕದ ಇತರ 12 ರಾಜ್ಯಗಳಂತೆ ನ್ಯೂಯಾರ್ಕ್ ಕೂಡ ರೋಗಿಗಳಿಗೆ ಗೌರವಯುತ ಸಾವಿನ ಹಕ್ಕನ್ನು ನೀಡಲು ಮುಂದಾಗಿದೆ.

Tags:    

Similar News