ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಸೋನಿಯಾ, ರಾಹುಲ್‌ಗೆ ಬಿಗ್‌ ರಿಲೀಫ್‌-ಇಡಿಗೆ ಚಾಟಿ ಬೀಸಿದ ಕೋರ್ಟ್‌

ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ರಾಷ್ಟ್ರೀಯ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದ ದೂರಿನ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಕೋರ್ಟ್‌ ನೋ ಎಂದಿದೆ.

Update: 2025-12-16 07:15 GMT
ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ
Click the Play button to listen to article


ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಮಂಗಳವಾರ ದೆಹಲಿ ನ್ಯಾಯಾಲಯವು ಬಿಗ್‌ ರಿಲೀಫ್‌ ನೀಡಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಕೋರ್ಟ್‌ ನಿರಾಕರಿಸಿದೆ. ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ರಾಷ್ಟ್ರೀಯ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದ ದೂರಿನ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಕೋರ್ಟ್‌ ನಿರಾಕರಿಸಿರುವ ಕೋರ್ಟ್‌, ಇದು ಖಾಸಗಿ ದೂರನ್ನು ಆಧರಿಸಿರುವ ಕೇಸ್‌ ಎಂದಿದೆ. ಇದು ಕಾಂಗ್ರೆಸ್‌ ನಾಯಕರಿಗೆ ದೊಡ್ಡ ಗೆಲುವನ್ನೇ ತಂದುಕೊಟ್ಟಿದೆ.

ಖಾಸಗಿ ದೂರಿನ ಮೇಲೆ ಚಾರ್ಜ್‌ಶೀಟ್‌?

ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ವಿಶಾಲ್ ಗೋಗ್ನೆ ಇದ್ದ ನ್ಯಾಯಪೀಠ, ಜಾರಿ ನಿರ್ದೇಶನಾಲಯ (ಇಡಿ) ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣವು ಖಾಸಗಿ ದೂರನ್ನು ಆಧರಿಸಿದೆ. ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧಾರದ ಮೇಲಲ್ಲ. ಪಿಎಂಎಲ್‌ಎ ಕಾಯ್ದೆಯಡಿ ಇಡಿ ತನಿಖೆ ಅಥವಾ ದೂರು ದಾಖಲಿಸಲು, ಅದಕ್ಕೆ ಪೂರಕವಾದ ಎಫ್‌ಐಆರ್ ಇರುವುದು ಅತ್ಯಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇಡಿ ಚಾರ್ಜ್‌ಶೀಟ್‌ನಲ್ಲಿರುವ ಆರೋಪಿಗಳು

ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರವಲ್ಲದೇ, ಕಾಂಗ್ರೆಸ್ ನಾಯಕರಾದ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, 'ಯಂಗ್ ಇಂಡಿಯನ್' ಸಂಸ್ಥೆ, ಡೋಟೆಕ್ಸ್ ಮರ್ಕಂಡೈಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸುನಿಲ್ ಭಂಡಾರಿ ಅವರನ್ನು ಇಡಿ ತನ್ನ ಆರೋಪ ಪಟ್ಟಿಯಲ್ಲಿ ಹೆಸರಿಸಿತ್ತು

ಇಡಿ ಮೇಲ್ಮನವಿ ಸಾಧ್ಯತೆ

ರೌಸ್ ಅವೆನ್ಯೂ ನ್ಯಾಯಾಲಯವು ನೀಡಿದ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರೌಸ್ ಅವೆನ್ಯೂ ನ್ಯಾಯಾಲಯವು ನೀಡಿದ ವಿವರವಾದ ತೀರ್ಪನ್ನು ಅವರ ಕಾನೂನು ತಂಡವು ಮೌಲ್ಯಮಾಪನ ಮಾಡುತ್ತದೆ.

ಅಭಿಷೇಕ್ ಮನು ಸಿಂಘ್ವಿ ಹೇಳಿದ್ದೇನು?

ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯಿಸಿದ್ದು, "ಇದು ಒಂದು ವಿಚಿತ್ರವಾದ ಪ್ರಕರಣ. ಇಲ್ಲಿ ಒಂದು ಪೈಸೆಯಷ್ಟು ಹಣವೂ ಅಕ್ರಮವಾಗಿ ವರ್ಗಾವಣೆಯಾಗಿಲ್ಲ ಅಥವಾ ಒಂದಿಂಚು ಆಸ್ತಿಯೂ ಯಾರ ಕೈಗೂ ಹೋಗಿಲ್ಲ” ಎಂದಿದ್ದಾರೆ. ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ.

ಏನಿದು ಪ್ರಕರಣ?

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃ ಸಂಸ್ಥೆಯಾದ ಎಜೆಎಲ್ (AJL) ಅನ್ನು ವಂಚನೆಯ ಮೂಲಕ ಸ್ವಾಧೀನಪಡಿಸಿಕೊಳ್ಳಲು ಪಿತೂರಿ ನಡೆಸಲಾಗಿದೆ ಎಂಬುದು ಪ್ರಮುಖ ಆರೋಪ. ಎಫ್‌ಐಆರ್ ಪ್ರಕಾರ, ಕೋಲ್ಕತ್ತಾ ಮೂಲದ ಡೊಟೆಕ್ಸ್ ಮರ್ಚಂಡೈಸ್ ಎಂಬ ಶೆಲ್ ಕಂಪನಿಯು ಯಂಗ್ ಇಂಡಿಯನ್ ಸಂಸ್ಥೆಗೆ 1 ಕೋಟಿ ರೂಪಾಯಿಗಳನ್ನು ಒದಗಿಸಿದೆ ಎನ್ನಲಾಗಿದೆ. ಈ ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿ ಶೇ. 76ರಷ್ಟು ಪಾಲು ಹೊಂದಿದ್ದಾರೆ. ಕೇವಲ 50 ಲಕ್ಷ ರೂಪಾಯಿ ಪಾವತಿಸಿ, ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಎಜೆಎಲ್ ಕಂಪನಿಯನ್ನು ಯಂಗ್ ಇಂಡಿಯನ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.

ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ನೆಹರು ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ 2008ರಲ್ಲಿ ಆರ್ಥಿಕ ಸಂಕಷ್ಟದಿಂದ ಪ್ರಕಟಣೆ ನಿಲ್ಲಿಸಿತ್ತು. ಆ ವೇಳೆ ಎಜೆಎಲ್ ಕಂಪನಿಯು 90 ಕೋಟಿ ರೂ. ಸಾಲದಲ್ಲಿತ್ತು. ಈ ಸಾಲವನ್ನು ತೀರಿಸಲು ಕಾಂಗ್ರೆಸ್ ಪಕ್ಷ ನೆರವು ನೀಡಿತ್ತು. ನಂತರ ಸಾಲ ತೀರಿಸಲಾಗದ ಕಾರಣ ಅದನ್ನು ಷೇರುಗಳನ್ನಾಗಿ ಪರಿವರ್ತಿಸಿ, ಯಂಗ್ ಇಂಡಿಯನ್ ಕಂಪನಿಗೆ ವರ್ಗಾಯಿಸಲಾಯಿತು. ಈ ಮೂಲಕ ಯಂಗ್ ಇಂಡಿಯನ್ ಕಂಪನಿಯು ಎಜೆಎಲ್‌ ಬಹುಪಾಲು ಷೇರುಗಳನ್ನು ತನ್ನದಾಗಿಸಿಕೊಂಡಿತು ಎಂದು ಆರೋಪಿಸಲಾಗಿದೆ.

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012ರಲ್ಲಿ ದಾಖಲಿಸಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಇಡಿ ನೀಡಿದ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರು ಹೊಸದಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಇದು ಇಡಿ ತನಿಖೆಗೆ ಮತ್ತಷ್ಟು ಬಲ ನೀಡಲಿದೆ. ಕಾಂಗ್ರೆಸ್ ಪಕ್ಷವು ಈ ತನಿಖೆಯನ್ನು "ರಾಜಕೀಯ ದ್ವೇಷದ ತಂತ್ರ" ಎಂದು ಟೀಕಿಸಿದೆ.

Tags:    

Similar News