ಪಹಲ್ಗಾಮ್‌ ಉಗ್ರರ ದಾಳಿ: ಪಾಕ್ ಮೂಲದ ಹ್ಯಾಂಡ್ಲರ್ ಸೇರಿ 7 ಮಂದಿ ವಿರುದ್ಧ ಎನ್​ಐಎ ಚಾರ್ಜ್​ಶೀಟ್

ಜಮ್ಮುವಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ದೋಷಾರೋಪ ಪಟ್ಟಿಯಲ್ಲಿ, ಪಾಕಿಸ್ತಾನದಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಹ್ಯಾಂಡ್ಲರ್ 'ಸಾಜಿದ್ ಜಾಟ್' ನನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ.

Update: 2025-12-16 04:35 GMT

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಧರ್ಮ ಆಧಾರಿತವಾಗಿ ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಿದ್ದಾರೆ. 

Click the Play button to listen to article

ಕಳೆದ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಸೋಮವಾರ 1,597 ಪುಟಗಳ ದೋಷಾರೋಪ ಪಟ್ಟಿ (ಚಾರ್ಜ್​ಶೀಟ್) ಸಲ್ಲಿಸಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆ 'ದ ರೆಸಿಸ್ಟೆನ್ಸ್ ಫ್ರಂಟ್' (TRF) ಸೇರಿದಂತೆ ಒಟ್ಟು ಏಳು ಮಂದಿಯ ವಿರುದ್ಧ ಚಾರ್ಜ್​ಶೀಟ್ ದಾಖಲಿಸಲಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದ ಈ ಭೀಕರ ದಾಳಿಯಲ್ಲಿ 25 ಮಂದಿ ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ಕುದುರೆ ಸವಾರ ಮೃತಪಟ್ಟಿದ್ದರು. ಈ ಕೃತ್ಯದ ಹಿಂದಿರುವ ಪಾಕಿಸ್ತಾನದ ಸಂಚು, ಆರೋಪಿಗಳ ಪಾತ್ರ ಮತ್ತು ಪೂರಕ ಸಾಕ್ಷ್ಯಗಳ ವಿವರಗಳನ್ನು ಎನ್​ಐಎ ಚಾರ್ಜ್​ಶೀಟ್ ಒಳಗೊಂಡಿದೆ. ನಿಷೇಧಿತ ಉಗ್ರ ಸಂಘಟನೆಗಳಾದ ಲಷ್ಕರ್​ ಮತ್ತು ಟಿಆರ್​ಎಫ್​ ಅನ್ನು ಕಾನೂನುಬಾಹಿರ ಘಟಕಗಳೆಂದು ಇದರಲ್ಲಿ ಹೆಸರಿಸಲಾಗಿದೆ.

ಪಾಕ್ ಉಗ್ರ ಸಾಜಿದ್ ಜಾಟ್ ಪ್ರಮುಖ ಆರೋಪಿ

ಜಮ್ಮುವಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ದೋಷಾರೋಪ ಪಟ್ಟಿಯಲ್ಲಿ, ಪಾಕಿಸ್ತಾನದಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಹ್ಯಾಂಡ್ಲರ್ 'ಸಾಜಿದ್ ಜಾಟ್' ನನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಜುಲೈ 29 ರಂದು ಶ್ರೀನಗರದ ದಾಚಿಗಾಮ್‌ನಲ್ಲಿ ನಡೆದ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಿಂದ ಹತ್ಯೆಯಾದ ಮೂವರು ಪಾಕಿಸ್ತಾನಿ ಉಗ್ರರಾದ ಫೈಸಲ್ ಜಾಟ್ (ಸುಲೇಮಾನ್ ಶಾ), ಹಬೀಬ್ ತಾಹಿರ್ (ಜಿಬ್ರಾನ್) ಮತ್ತು ಹಮ್ಜಾ ಅಫ್ಘಾನಿ ಅವರ ಹೆಸರುಗಳನ್ನೂ ಚಾರ್ಜ್​ಶೀಟ್‌ನಲ್ಲಿ ಸೇರಿಸಲಾಗಿದೆ.

ಭಾರತದ ವಿರುದ್ಧ ಯುದ್ಧ ಸಾರಿದ ಆರೋಪ

ಎಂಟು ತಿಂಗಳುಗಳ ಕಾಲ ನಡೆಸಿದ ವೈಜ್ಞಾನಿಕ ತನಿಖೆಯ ಮೂಲಕ, ಈ ದಾಳಿಯ ಸಂಚು ಪಾಕಿಸ್ತಾನದಲ್ಲೇ ರೂಪಿತವಾಗಿತ್ತು ಎಂಬುದನ್ನು ಎನ್​ಐಎ ಪತ್ತೆ ಹಚ್ಚಿದೆ. ಆರೋಪಿಗಳ ವಿರುದ್ಧ ಭಾರತದ ವಿರುದ್ಧ ಯುದ್ಧ ಸಾರಿದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಉಗ್ರರಿಗೆ ಆಶ್ರಯ ನೀಡಿದ ಆರೋಪದಡಿ ಜೂನ್ 22 ರಂದು ಬಂಧಿಸಲಾಗಿದ್ದ ಪರ್ವೇಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್ ಜೋತರ್ ಎಂಬಿಬ್ಬರ ವಿರುದ್ಧವೂ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ವಿಚಾರಣೆ ವೇಳೆ ಇವರಿಬ್ಬರೂ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರು ಪಾಕಿಸ್ತಾನಿ ಪ್ರಜೆಗಳು ಮತ್ತು ಅವರು LeT ಸಂಘಟನೆಗೆ ಸೇರಿದವರು ಎಂಬುದನ್ನು ಬಾಯ್ಬಿಟ್ಟಿದ್ದರು ಎಂದು ಎನ್​ಐಎ ತಿಳಿಸಿದೆ.

Tags:    

Similar News