ಮೊದಲಿಗೆ ನೆಹರೂ, ಇಂದಿರಾ ಬಗ್ಗೆ ಬಿಜೆಪಿಗೆ ವಿರೋಧ… ಈಗ ಬಾಪೂ ಸರದಿ: ಪ್ರಿಯಾಂಕಾ ಗಾಂಧಿ ಕಿಡಿ
ಪ್ರಸ್ತಾವಿತ ಹೊಸ ಮಸೂದೆಯ ಪ್ರಕಾರ ಯೋಜನೆಯ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಿ VB G-RAM G ಎಂದು ಬದಲಿಸಲಾಗಿದೆ. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯನ್ನು ರದ್ದುಗೊಳಿಸುವ ಮತ್ತು ಅದನ್ನು "ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)-(VB G-RAM G)" ಎಂಬ ಹೊಸ ಹೆಸರಿನೊಂದಿಗೆ ಜಾರಿಗೊಳಿಸಲು ಮುಂದಾಗಿದೆ. ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಈ ಮಸೂದೆ ಮಂಡನೆಯಾಗಲಿದ್ದು, ತೀವ್ರ ರಾಜಕೀಯ ಘರ್ಷಣೆಗೆ ಸಿದ್ಧಗೊಂಡಿದೆ.
ಮಸೂದೆ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸಂಸದರು ಸಂಸತ್ತಿನಲ್ಲಿ ಹಾಜರಿರಬೇಕು ಎಂದು ಸರ್ಕಾರ ವಿಪ್ ಜಾರಿ ಮಾಡಿದೆ. ಕೇಂದ್ರದ ಪ್ರಕಾರ, ಪ್ರಸ್ತಾವಿತ ಶಾಸನವು ವಿಕಸಿತ್ ಭಾರತ್ 2047 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಪರಿಷ್ಕೃತ ಚೌಕಟ್ಟನ್ನು ನೀಡುತ್ತದೆ ಎನ್ನಲಾಗಿದೆ.
100 ರಿಂದ 125 ದಿನಗಳ ಖಾತರಿ ಉದ್ಯೋಗದವರೆಗೆ
2005 ರಲ್ಲಿ ಯುಪಿಎ ಸರ್ಕಾರ ಪ್ರಾರಂಭಿಸಿದ MGNREGA, ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ವೇತನ ಉದ್ಯೋಗವನ್ನು ಖಾತರಿಪಡಿಸುತ್ತದೆ. ಇದು ಸುಮಾರು ಎರಡು ದಶಕಗಳಿಂದ ಗ್ರಾಮೀಣ ಕಲ್ಯಾಣದ ಮೂಲಾಧಾರವಾಗಿದೆ. ಇದೀಗ ಈ ಹೊಸ ಮಸೂದೆಯು 100ದಿನಗಳ ಖಾತರಿ ಉದ್ಯೋಗವನ್ನು 125 ದಿನಗಳಿಗೆ ಏರಿಕೆ ಮಾಡಲಾಗಿದೆ. ಕೆಲಸ ಪೂರ್ಣಗೊಂಡ ಏಳರಿಂದ 15 ದಿನಗಳ ಒಳಗೆ ವೇತನವನ್ನು ಪಾವತಿಸಬೇಕೆಂದು ಸಹ ಇದು ಆದೇಶಿಸುತ್ತದೆ. ನಿಗದಿತ ಅವಧಿಗಿಂತ ಹೆಚ್ಚಿನ ಪಾವತಿಗಳು ವಿಳಂಬವಾದರೆ, ಮಸೂದೆಯು ನಿರುದ್ಯೋಗ ಭತ್ಯೆ ಪಡೆಯುವ ಅವಕಾಶವನ್ನೂ ನೀಡುತ್ತದೆ.
ಕಾಂಗ್ರೆಸ್ ಕೆಂಡಾಮಂಡಲ
ಇನ್ನು ಪ್ರಸ್ತಾವಿತ ಹೊಸ ಮಸೂದೆಯ ಪ್ರಕಾರ ಯೋಜನೆಯ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಿ VB G-RAM G ಎಂದು ಬದಲಿಸಲಾಗಿದೆ. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಹಿಂದಿನ ಉದ್ದೇಶ ಮತ್ತು ಸರ್ಕಾರ ನೀಡುತ್ತಿರುವ ಸಂದೇಶ ಏನು ಎಂಬುದನ್ನು ಪ್ರಶ್ನಿಸಿದೆ.
ಈ ಬಗ್ಗೆ ಖಡಕ್ ಆಗಿಯೇ ಪ್ರಶ್ನಿಸಿರುವ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಸರ್ಕಾರದ ಈ ಕ್ರಮವು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. "ಮೋದಿ ಸರ್ಕಾರ ಮಹಾತ್ಮ ಗಾಂಧಿಯವರ ಹೆಸರನ್ನು ಏಕೆ ತೆಗೆದುಹಾಕುತ್ತಿದೆ? ಅವರನ್ನು ಭಾರತದ ಅತಿದೊಡ್ಡ ನಾಯಕ ಎಂದು ಪರಿಗಣಿಸಲಾಗುತ್ತದೆ. ಅಂತಹ ಹೆಸರು ಬದಲಾದಾಗಲೆಲ್ಲಾ, ಸಾಕಷ್ಟು ಖರ್ಚು ವೆಚ್ಚಗಳ ತಗುಲುತ್ತವೆ. ಅಷ್ಟಕ್ಕೂ ಇದರ ಉದ್ದೇಶ ಏನೆಂದು ನನಗೆ ಅರ್ಥವಾಗುತ್ತಿಲ್ಲ. ಸಂಸತ್ತು ಕಾರ್ಯನಿರ್ವಹಿಸುತ್ತಿಲ್ಲ ಸಮಯ ಮತ್ತು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಸಂಸತ್ ಭವನದ ಸಂಕೀರ್ಣದಲ್ಲಿ ಮಾತನಾಡಿದ ಅವರು, “ಒಂದು ಯೋಜನೆಯ ಹೆಸರು ಬದಲಾದಾಗಲೆಲ್ಲಾ ಕಚೇರಿಗಳು, ಲೇಖನ ಸಾಮಗ್ರಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಹಣವನ್ನು ಖರ್ಚು ಮಾಡಲಾಗುತ್ತದೆ. ಹಾಗಾದರೆ, ಅದರಿಂದ ಏನು ಪ್ರಯೋಜನ, ಅದನ್ನು ಏಕೆ ಮಾಡಲಾಗುತ್ತಿದೆ? ಮಹಾತ್ಮ ಗಾಂಧಿಯವರ ಹೆಸರನ್ನು ಏಕೆ ತೆಗೆದುಹಾಕಲಾಗುತ್ತಿದೆ? ಮಹಾತ್ಮ ಗಾಂಧಿಯನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿ ಎತ್ತರದ ನಾಯಕ ಎಂದು ಪರಿಗಣಿಸಲಾಗಿದೆ. ಬಿಜೆಪಿಗೆ ನೆಹರೂ ಜೊತೆ ಸಮಸ್ಯೆ ಇತ್ತು, ಇಂದಿರಾ ಜೊತೆ - ಈಗ ಬಾಪು ಬಗ್ಗೆ ಅಸಮಾಧಾನ ಇದೆ ಎಂಬುದು ಸಾಬೀತಾಗುತ್ತಿದೆ. ನರೇಗಾ ಅಡಿಯಲ್ಲಿ ರಾಜ್ಯಗಳಿಗೆ ಸಕಾಲಿಕ ಪಾವತಿಗಳನ್ನು ಖಚಿತಪಡಿಸಿಕೊಳ್ಳಿ. 100 ದಿನಗಳನ್ನು 150 ದಿನಗಳಿಗೆ ಹೆಚ್ಚಿಸಿ ಮತ್ತು ಯೋಜನೆಯನ್ನು ಸುಧಾರಿಸಿ. ಸರ್ಕಾರವು ಹೆಸರುಗಳನ್ನು ಬದಲಾಯಿಸುವತ್ತ ಗಮನಹರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾಡಿದ್ದಾರೆ.
ಸರ್ಕಾರದಿಂದ ಸ್ಪಷ್ಟನೆ
ಇನ್ನು ತನ್ನ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಮಹತ್ವದ ಸಾಮಾಜಿಕ-ಆರ್ಥಿಕ ಪರಿವರ್ತನೆ ಮೂಲಕ ಯೋಜನೆಯನ್ನು ಬಲಪಡಿಸುವ ಉದ್ದೇಶ ಸರ್ಕಾರದ್ದು ಎಂದಿದೆ. ಈ ಬಗ್ಗೆ ಮಾತನಾಡಿರು. ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕಳೆದ 20 ವರ್ಷಗಳಲ್ಲಿ ಖಾತರಿಪಡಿಸಿದ ವೇತನ ಉದ್ಯೋಗವನ್ನು ಒದಗಿಸುವಲ್ಲಿ MGNREGA ನಿರ್ಣಾಯಕ ಪಾತ್ರ ವಹಿಸಿದೆ. ಮಹತ್ವದ ಸಾಮಾಜಿಕ-ಆರ್ಥಿಕ ಪರಿವರ್ತನೆಯ ಮೂಲಕ ಯೋಜನೆಯನ್ನು ಮತ್ತಷ್ಟು ಬಲಪಡಿಸುವಿಕೆ ಅಗತ್ಯವಾಗಿದೆ ಎಂದು ಅವರು ವಾದಿಸಿದರು.