ಮೆಕ್ಸಿಕೋದಿಂದ ಆಮದು ಸುಂಕ ಶೇ.50ಕ್ಕೆ ಹೆಚ್ಚಳ: 'ತಕ್ಕ ಕ್ರಮ'ದ ಎಚ್ಚರಿಕೆ ನೀಡಿದ ಭಾರತ
ಮೆಕ್ಸಿಕೋದ ಈ ಕ್ರಮದಿಂದ ಭಾರತ, ಚೀನಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಏಷ್ಯಾದ ಪ್ರಮುಖ ದೇಶಗಳ ರಫ್ತಿನ ಮೇಲೆ ನೇರ ಪರಿಣಾಮ ಬೀರಲಿದೆ.
ಮೆಕ್ಸಿಕೋದ ಈ ಕ್ರಮದಿಂದ ಭಾರತ, ಚೀನಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಏಷ್ಯಾದ ಪ್ರಮುಖ ದೇಶಗಳ ರಫ್ತಿನ ಮೇಲೆ ನೇರ ಪರಿಣಾಮ ಬೀರಲಿದೆ.
ಮುಕ್ತ ವ್ಯಾಪಾರ ಒಪ್ಪಂದವಿಲ್ಲದ (FTA) ದೇಶಗಳಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ದಿಢೀರನೆ ಶೇ.50ರವರೆಗೆ ಹೆಚ್ಚಿಸಿರುವ ಮೆಕ್ಸಿಕೋ ನಿರ್ಧಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಏಕಪಕ್ಷೀಯ ನಿರ್ಧಾರವನ್ನು ಹಿಂಪಡೆಯದಿದ್ದರೆ ಭಾರತೀಯ ರಫ್ತುದಾರರ ಹಿತಾಸಕ್ತಿ ಕಾಪಾಡಲು ತಾನೂ 'ತಕ್ಕ ಕ್ರಮ' ಕೈಗೊಳ್ಳುವುದಾಗಿ ಮೆಕ್ಸಿಕೋ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ಮೆಕ್ಸಿಕೋದ ಈ ಕ್ರಮದಿಂದ ಭಾರತ, ಚೀನಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಏಷ್ಯಾದ ಪ್ರಮುಖ ದೇಶಗಳ ರಫ್ತಿನ ಮೇಲೆ ನೇರ ಪರಿಣಾಮ ಬೀರಲಿದೆ. ಒಟ್ಟು 1,463 ಉತ್ಪನ್ನಗಳ ಮೇಲಿನ ಸುಂಕವನ್ನು ಪರಿಷ್ಕರಿಸಲಾಗಿದ್ದು, ಬಹುತೇಕ ವಸ್ತುಗಳಿಗೆ ಶೇ.35ರಷ್ಟು ಮತ್ತು ಕೆಲವು ಉತ್ಪನ್ನಗಳಿಗೆ ಶೇ.50ರವರೆಗೆ ಸುಂಕ ವಿಧಿಸಲಾಗಿದೆ. ಈ ಹಿಂದೆ ಈ ಪ್ರಸ್ತಾವನೆಯನ್ನು ಆಗಸ್ಟ್ 2026ರವರೆಗೆ ಮುಂದೂಡಲಾಗಿತ್ತಾದರೂ, ಡಿಸೆಂಬರ್ 3 ರಂದು ಮೆಕ್ಸಿಕೋ ಆರ್ಥಿಕ ಸಚಿವಾಲಯ ದಿಢೀರನೆ ಮರುಜಾರಿಗೊಳಿಸಿದೆ.
ಮಾತುಕತೆ
ಭಾರತದ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರವಾಲ್ ಅವರು ಮೆಕ್ಸಿಕೋದ ಉಪ ಆರ್ಥಿಕ ಸಚಿವ ಲೂಯಿಸ್ ರೊಸೆಂಡೋ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. "ಮೆಕ್ಸಿಕೋ ಸರ್ಕಾರದ ಈ ನಿರ್ಧಾರದ ಹಿಂದೆ ಭಾರತವನ್ನು ಗುರಿಯಾಗಿಸುವ ಉದ್ದೇಶವಿಲ್ಲದಿದ್ದರೂ, ಯಾವುದೇ ಮುನ್ಸೂಚನೆ ಇಲ್ಲದೆ ಹೀಗೆ ಏಕಾಏಕಿ ಸುಂಕ ಏರಿಕೆ ಮಾಡುವುದು ಎರಡು ದೇಶಗಳ ನಡುವಿನ ಸಹಕಾರದ ತತ್ವಕ್ಕೆ ವಿರುದ್ಧವಾಗಿದೆ," ಎಂದು ಭಾರತೀಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೆಕ್ಸಿಕೋ ತನ್ನ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ವ್ಯಾಪಾರ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಂಡಿದೆ ಎಂದು ಹೇಳುತ್ತಿದ್ದರೂ, ವಾಸ್ತವವಾಗಿ ಅಮೆರಿಕದ ಒತ್ತಡವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ನಡುವಿನ ಒಪ್ಪಂದದ (USMCA) ಪರಿಶೀಲನೆಯ ಹಿನ್ನೆಲೆಯಲ್ಲಿ, ಚೀನಾದ ಸರಕುಗಳು ಮೆಕ್ಸಿಕೋ ಮೂಲಕ ಅಮೆರಿಕ ಮಾರುಕಟ್ಟೆಗೆ ಬರುವುದನ್ನು ತಡೆಯಲು ಅಮೆರಿಕ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.
ಈ ಸುಂಕ ಏರಿಕೆಯಿಂದ ಭಾರತೀಯ ಸರಕುಗಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಭಾರತದ ವಾಣಿಜ್ಯ ಇಲಾಖೆ ಪರಿಶೀಲಿಸುತ್ತಿದೆ. "ನಾವು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಬದ್ಧರಾಗಿದ್ದೇವೆ. ಆದರೆ, ಅಗತ್ಯ ಬಿದ್ದರೆ ನಮ್ಮ ರಫ್ತುದಾರರನ್ನು ರಕ್ಷಿಸಲು ಪ್ರತಿತಂತ್ರ ರೂಪಿಸುವ ಹಕ್ಕನ್ನು ಭಾರತ ಕಾಯ್ದಿರಿಸಿಕೊಂಡಿದೆ," ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.