ಇದು ಕಾಂಗ್ರೆಸ್ ನೀತಿಯಲ್ಲ : ಪರಮೇಶ್ವರ್ 'ಬುಲ್ಡೋಜರ್' ಹೇಳಿಕೆಗೆ ಪಿ. ಚಿದಂಬರಂ ಅಸಮಾಧಾನ

ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ 'ಬುಲ್ಡೋಜರ್ ನ್ಯಾಯ'ವನ್ನು ಕಾಂಗ್ರೆಸ್ ಕಟುವಾಗಿ ವಿರೋಧಿಸುತ್ತದೆ ಎಂದಿರುವ ಅವರು, ಅದು ತಪ್ಪು, ಕಾನೂನುಬಾಹಿರ ಮತ್ತು ಅನ್ಯಾಯ ಎಂಬುದು ಪಕ್ಷದ ನಿಲುವಾಗಿದೆ ಎಂದು ತಿಳಿಸಿದ್ದಾರೆ.

Update: 2025-12-13 14:58 GMT
ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌
Click the Play button to listen to article

"ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆ ನೀಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಮತ್ತು ಅಂತಹ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಲು ಹಿಂಜರಿಯುವುದಿಲ್ಲ," ಎಂಬ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಅವರ ಹೇಳಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿರುವ ಚಿದಂಬರಂ, "ಮಾದಕವಸ್ತು ಕಳ್ಳಸಾಗಣೆದಾರರ ಮನೆಗಳನ್ನು ಕೆಡವಲು ಬುಲ್ಡೋಜರ್ ಬಳಸುತ್ತೇವೆ ಎಂಬ ವರದಿ ನೋಡಿ ನನಗೆ ತುಂಬಾ ಬೇಸರವಾಗಿದೆ. ಈ ವರದಿ ತಪ್ಪಾಗಿರಲಿ ಎಂದು ನಾನು ಭಾವಿಸುತ್ತೇನೆ. ಕಾನೂನಿನ ಪ್ರಕ್ರಿಯೆ ಇಲ್ಲದೆ ಮನೆ ಕೆಡವುವುದು ಕಾನೂನುಬಾಹಿರ ಮತ್ತು ಕುಟುಂಬದ ಇತರರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ," ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ 'ಬುಲ್ಡೋಜರ್ ನ್ಯಾಯ'ವನ್ನು ಕಾಂಗ್ರೆಸ್ ಕಟುವಾಗಿ ವಿರೋಧಿಸುತ್ತದೆ ಎಂದಿರುವ ಅವರು, "ಅದು ತಪ್ಪು, ಕಾನೂನುಬಾಹಿರ ಮತ್ತು ಅನ್ಯಾಯ ಎಂಬುದು ಪಕ್ಷದ ನಿಲುವಾಗಿದೆ. ಹೀಗಿರುವಾಗ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸುವುದು ಸೂಕ್ತವಲ್ಲ," ಎಂದು ಕಿವಿಮಾತು ಹೇಳಿದ್ದಾರೆ.

ಪರಮೇಶ್ವರ ಹೇಳಿದ್ದೇನು?

ವಿಧಾನ ಪರಿಷತ್‌ನಲ್ಲಿ ಡ್ರಗ್ಸ್ ಮಾಫಿಯಾ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ಗೃಹ ಸಚಿವ ಪರಮೇಶ್ವರ, "ಹೆಚ್ಚಿನ ಲಾಭದ ಆಸೆಗಾಗಿ ಡ್ರಗ್ಸ್ ದಂಧೆಕೋರರಿಗೆ, ವಿಶೇಷವಾಗಿ ಆಫ್ರಿಕಾ ಖಂಡದ ವಿದ್ಯಾರ್ಥಿಗಳಿಗೆ ಬಾಡಿಗೆ ಮನೆ ನೀಡುವ ಮಾಲೀಕರ ಮೇಲೆ ನಿಗಾ ಇಡಲಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಆ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹಿಂಜರಿಯುವುದಿಲ್ಲ," ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಡ್ರಗ್ಸ್ ಹಾವಳಿ ತಡೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ADGP) ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಮತ್ತು ಈಗಾಗಲೇ 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.

Tags:    

Similar News