ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ; ಯುಡಿಎಫ್‌ಗೆ ಮುನ್ನಡೆ, ಆಡಳಿತರೂಢ ಎಲ್‌ಡಿಎಫ್‌ಗೆ ಮುಖಭಂಗ

ರಾಜ್ಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬೆಳಿಗ್ಗೆ 11.05ರ ವೇಳೆಗೆ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿರೋಧ ಪಕ್ಷ ಯುಡಿಎಫ್ ಕ್ರಮವಾಗಿ 371 ಮತ್ತು 389 ಗ್ರಾಮ ಪಂಚಾಯತ್‌ಗಳಲ್ಲಿ ಮುನ್ನಡೆ ಸಾಧಿಸಿವೆ ಎಂದು ತಿಳಿಸಿದೆ.

Update: 2025-12-13 08:31 GMT
ಕೇರಳ ಸ್ಥಳೀಯ ಸಂ‍ಸ್ಥೆ ಚುನಾವಣೆಯ ಫಲಿತಾಂಶ
Click the Play button to listen to article

ಕೇರಳದ 1,199 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಆಡಳಿತ ರೂಢ  ಎಲ್‌ಡಿಎಫ್‌ ಅನ್ನು ಹಿಂದಿಕ್ಕಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮುನ್ನಡೆ ಕಾಯ್ದುಕೊಂಡಿದೆ.  ಗ್ರಾಮ ಮತ್ತು ಬ್ಲಾಕ್ ಪಂಚಾಯತ್‌ಗಳು, ಪುರಸಭೆಗಳು ಮತ್ತು ನಿಗಮಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲೂ ಯುಡಿಎಫ್‌ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಚುನಾವಣಾ ಆಯೋಗ ತನ್ನ ದತ್ತಾಂಶದಲ್ಲಿ ತಿಳಿಸಿದೆ.

ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಹಂಚಿಕೊಂಡ ಮಾಹಿತಿ ಪ್ರಕಾರ ಬೆಳಿಗ್ಗೆ 11.05 ರ ವೇಳೆಗೆ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿರೋಧ ಪಕ್ಷ ಯುಡಿಎಫ್ ಕ್ರಮವಾಗಿ 371 ಮತ್ತು 389 ಗ್ರಾಮ ಪಂಚಾಯತ್‌ಗಳಲ್ಲಿ ಮುನ್ನಡೆ ಸಾಧಿಸಿವೆ ಎಂದು ತಿಳಿಸಿದೆ. ಯುಡಿಎಫ್ 55 ಪುರಸಭೆಗಳು, 8 ಜಿಲ್ಲಾ ಪಂಚಾಯತ್‌ಗಳು, 76 ಬ್ಲಾಕ್ ಪಂಚಾಯತ್‌ಗಳು ಮತ್ತು 4 ನಿಗಮಗಳಲ್ಲಿಯೂ ಮುಂದಿದೆ. ಎಲ್‌ಡಿಎಫ್ 29 ಪುರಸಭೆಗಳು, 6 ಜಿಲ್ಲಾ ಪಂಚಾಯತ್‌ಗಳು, 64 ಬ್ಲಾಕ್ ಪಂಚಾಯತ್‌ಗಳು ಮತ್ತು ಒಂದು ನಿಗಮದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 28 ಗ್ರಾಮ ಪಂಚಾಯತ್‌ಗಳು, ಒಂದು ಬ್ಲಾಕ್ ಪಂಚಾಯತ್ ಮತ್ತು ಒಂದು ನಿಗಮದಲ್ಲಿ ಮುಂದಿದೆ.

ಎಡರಂಗ ಭದ್ರಕೋಟೆ ಬೇಧಿಸಿದ ಕೇಸರಿ ಪಡೆ

ಆದಾಗ್ಯೂ, ಕಳೆದ 45 ವರ್ಷಗಳಿಂದ ಎಡರಂಗದ ಹಿಡಿತದಲ್ಲಿದ್ದ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್‌ಗಿಂತ ಎನ್‌ಡಿಎ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಗೆದ್ದಿದ್ದ ಕೊಲ್ಲಂ, ಕೊಚ್ಚಿ ಮತ್ತು ತ್ರಿಶೂರ್ ಕಾರ್ಪೊರೇಷನ್‌ಗಳಲ್ಲಿ ಎಲ್‌ಡಿಎಫ್ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ.

ಕೊಚ್ಚಿ ಕಾರ್ಪೋರೇಷನ್‌ ಕಾಂಗ್ರೆಸ್‌ ವಶ ಸಾಧ್ಯತೆ

ಕೊಲ್ಲಂ ಕಾರ್ಪೊರೇಷನ್ 2000 ರಿಂದ ಎಲ್‌ಡಿಎಫ್ ವಶದಲ್ಲಿತ್ತು ಮತ್ತು 2015 ರಿಂದ ತ್ರಿಶೂರ್ ಕಾರ್ಪೊರೇಷನ್ ವಶದಲ್ಲಿತ್ತು. 2020ರಲ್ಲಿ ಎಲ್‌ಡಿಎಫ್ ಯುಡಿಎಫ್‌ನಿಂದ ಕೊಚ್ಚಿ ಕಾರ್ಪೊರೇಷನ್‌ನ್ನು ಗೆದ್ದುಕೊಂಡಿತ್ತು. ಈಗ ಕಾಂಗ್ರೆಸ್ ನೇತೃತ್ವದ ರಂಗ ಅಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

ಬೆಳಿಗ್ಗೆ 11.05 ರವರೆಗಿನ ಟ್ರೆಂಡ್‌ಗಳ ಪ್ರಕಾರ, ಯುಡಿಎಫ್ ಕಣ್ಣೂರು ಕಾರ್ಪೊರೇಷನ್ ಅನ್ನು ಉಳಿಸಿಕೊಳ್ಳಲು ನೋಡುತ್ತಿದೆ ಮತ್ತು ಕೋಝಿಕ್ಕೋಡ್ ಕಾರ್ಪೊರೇಷನ್ ಎಲ್‌ಡಿಎಫ್‌ನಲ್ಲೇ ಉಳಿಯುವ ಸಾಧ್ಯತೆಯಿದೆ. ಬಿಜೆಪಿ ಹಿಡಿತದಲ್ಲಿರುವ ಪಾಲಕ್ಕಾಡ್ ಪುರಸಭೆಯಲ್ಲೂ ಯುಡಿಎಫ್ ಮುನ್ನಡೆಯಲ್ಲಿದೆ.

ಕೆಲವೆಡೆ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಣೆ

244 ಕೇಂದ್ರಗಳು ಮತ್ತು 14 ಜಿಲ್ಲಾ ಕಲೆಕ್ಟರೇಟ್‌ಗಳಲ್ಲಿ ಎಣಿಕೆ ನಡೆಯುತ್ತಿದ್ದು ತಿರುವನಂತಪುರಂ, ಪಾಲಕ್ಕಾಡ್ ಮತ್ತು ವಡಕರ ಸೇರಿದಂತೆ ಕೆಲವು ಎಣಿಕೆ ಕೇಂದ್ರಗಳಲ್ಲಿ ಬೂತ್ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಆರೋಪ ಕೇಳಿಬಂದಿತ್ತು.

Tags:    

Similar News