ತೀವ್ರತೆ ಕಡಿಮೆಯಾಗಿದ್ದರೂ ‘ಆಪರೇಷನ್ ಸಿಂಧೂರ್’ ಮುಂದುವರಿದಿದೆ: ಸಿಡಿಎಸ್ ಅನಿಲ್ ಚೌಹಾಣ್
ನಿರಂತರ ಜಾಗರೂಕತೆ ಮತ್ತು ವಿಜಯವನ್ನು ಅಭ್ಯಾಸವಾಗಿಸಿಕೊಳ್ಳುವುದರಲ್ಲೇ ಭಾರತೀಯ ಸೇನೆಯ ಬಲ ಅಡಗಿದೆ ಎಂದು ಸಿಡಿಎಸ್ ಅನಿಲ್ ಚೌಹಾಣ್ ನೂತನ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಿಡಿಎಸ್ ಅನಿಲ್ ಚೌಹಾಣ್
"ಆಪರೇಷನ್ ಸಿಂಧೂರ್‌ನ ತೀವ್ರತೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು, ಆದರೆ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ," ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಪ್ರಸ್ತುತ ದಿನಗಳಲ್ಲಿ ದಿನದ 24 ಗಂಟೆಯೂ ಕಾರ್ಯಾಚರಣೆಗೆ ಸನ್ನದ್ಧವಾಗಿರುವುದೇ ಭಾರತೀಯ ಸೇನೆಯ ಹೊಸ ವಾಸ್ತವ ಎಂದು ಅವರು ಪ್ರತಿಪಾದಿಸಿದ್ದಾರೆ.
ಶನಿವಾರ (ಡಿ.13) ತೆಲಂಗಾಣದ ದುಂಡಿಗಲ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಪ್ರದಾನ ಪರೇಡ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿರಂತರ ಜಾಗರೂಕತೆ ಮತ್ತು ವಿಜಯವನ್ನು ಅಭ್ಯಾಸವಾಗಿಸಿಕೊಳ್ಳುವುದರಲ್ಲೇ ಭಾರತೀಯ ಸೇನೆಯ ಬಲ ಅಡಗಿದೆ ಎಂದು ಅವರು ನೂತನ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
‘ಮಾತುಗಳಿಂದ ಯುದ್ಧ ಗೆಲ್ಲಲಾಗದು’
ಯಾವುದೇ ನಿರ್ದಿಷ್ಟ ದೇಶದ ಹೆಸರನ್ನು ಪ್ರಸ್ತಾಪಿಸದಿದ್ದರೂ, ಪರೋಕ್ಷವಾಗಿ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಜನರಲ್ ಚೌಹಾಣ್, "ಇತ್ತೀಚಿನ ಬೆಳವಣಿಗೆಗಳು ಸಾಂಸ್ಥಿಕ ದೌರ್ಬಲ್ಯ ಮತ್ತು ಪ್ರತಿಕ್ರಿಯಾತ್ಮಕ ಹೊಂದಾಣಿಕೆಗಳನ್ನು ಸೂಚಿಸುತ್ತವೆ. ಕೇವಲ ವಾಕ್ಚಾತುರ್ಯ ಅಥವಾ ಭಾಷಣಗಳಿಂದ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ, ಉದ್ದೇಶಪೂರ್ವಕ ಮತ್ತು ದೃಢವಾದ ಕ್ರಮಗಳಿಂದ ಮಾತ್ರ ಅದು ಸಾಧ್ಯ," ಎಂದು ಹೇಳಿದರು.
ನೂತನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ನಮ್ಮಲ್ಲಿ ತಪ್ಪುಗಳಿಗೆ ಅವಕಾಶವೇ ಇಲ್ಲ, ಮತ್ತು ಮೈಮರೆತರೆ ಅದಕ್ಕೆ ತೆರಬೇಕಾದ ಬೆಲೆ ಕ್ಷಮಾರ್ಹವಲ್ಲ. ಆಪರೇಷನ್ ಸಿಂಧೂರ್‌ನ ತೀವ್ರತೆ ತಗ್ಗಿರಬಹುದು, ಆದರೆ ಅದು ಮುಗಿದಿಲ್ಲ. ಪ್ರತಿ ಗಂಟೆ, ಪ್ರತಿದಿನ ಎಚ್ಚರವಾಗಿರುವುದು, ಚುರುಕಾಗಿರುವುದು ಮತ್ತು ಸಿದ್ಧವಾಗಿರುವುದು ನಮ್ಮ ಶಕ್ತಿಯಾಗಬೇಕು. ಗೆಲುವನ್ನು ಅಭ್ಯಾಸವಾಗಿಸಿಕೊಳ್ಳುವುದು ಇಂದಿನ ಹೊಸ ಸಹಜತೆಯ (New Normal) ಭಾಗವಾಗಬೇಕು," ಎಂದು ತಿಳಿಸಿದರು.
ಭಾರತದ ಸೇನಾ ಶಕ್ತಿಯ 3 ಆಧಾರ ಸ್ತಂಭಗಳು
ಭವಿಷ್ಯದ ಯುದ್ಧಗಳಲ್ಲಿ ಭಾರತದ ಶಕ್ತಿಯು 'ಜೈ' ಎಂಬ ಮೂರು ಸ್ತಂಭಗಳ ಮೇಲೆ ನಿಂತಿದೆ ಎಂದು ಅವರು ವಿವರಿಸಿದರು. ಜಂಟಿ ಕಾರ್ಯಾಚರಣೆ: ಒಂದೇ ರಾಷ್ಟ್ರ ಮತ್ತು ಒಂದೇ ಪಡೆಯಾಗಿ ಹೋರಾಡುವುದು. ಆತ್ಮನಿರ್ಭರತೆ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕಾಗಿ ವಿಶ್ವಾಸಾರ್ಹ ವೇದಿಕೆಗಳು ಮತ್ತು ವ್ಯವಸ್ಥೆಗಳನ್ನು ರೂಪಿಸುವುದು. ಇನ್ನೋವೇಶನ್ ಕಾಲಕ್ಕಿಂತ ಮುಂದೆ ಯೋಚಿಸುವುದು ಮತ್ತು ಮುಂಚೂಣಿಯಲ್ಲಿರುವುದು ಇದರ ಶಕ್ತಿ ಎಂದು ಹೇಳಿದರು.
ನೂತನ ಅಧಿಕಾರಿಗಳ ಮುಂದಿನ ಪಯಣಕ್ಕೆ 'ಜೈ ಹಿಂದ್'ನ ಮೊದಲ ಪದವಾದ ಈ 'ಜೈ' (JAI) ತತ್ವವೇ ಮಾರ್ಗದರ್ಶಿಯಾಗಲಿದೆ," ಎಂದು ಅವರು ಬಣ್ಣಿಸಿದರು.
ಭವಿಷ್ಯದ ಯುದ್ಧಗಳ ಸ್ವರೂಪ
ಯುದ್ಧ ಮತ್ತು ರಣತಂತ್ರಗಳು ಕ್ರಾಂತಿಕಾರಿ ಬದಲಾವಣೆಯ ಹಂತದಲ್ಲಿವೆ ಎಂದು ಅಭಿಪ್ರಾಯಪಟ್ಟ ಜನರಲ್ ಚೌಹಾಣ್, ಹಳೆಯ ಶೈಲಿಯ ಯುದ್ಧಗಳು ಕ್ರೂರವಾಗಿರುತ್ತವೆ. ಆದರೆ ಹೊಸ ಡೊಮೇನ್‌ಗಳಲ್ಲಿ ನಡೆಯುವ ಯುದ್ಧಗಳು ಸ್ಮಾರ್ಟ್ ಆಗಿರುತ್ತವೆ, ತ್ವರಿತವಾಗಿರುತ್ತವೆ ಮತ್ತು ಬೌದ್ಧಿಕತೆ ಹಾಗೂ ಆವಿಷ್ಕಾರದಿಂದ ಕೂಡಿರುತ್ತವೆ. ಹೊಸ ಗಡಿಗಳನ್ನು ಕರಗತ ಮಾಡಿಕೊಳ್ಳುವ ಪಡೆಯೇ ಭವಿಷ್ಯದ ಸಂಘರ್ಷಗಳಲ್ಲಿ ಮೇಲುಗೈ ಸಾಧಿಸಲಿದೆ ಎಂದು ವಿಶ್ಲೇಷಿಸಿದರು.
ಈ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ವಿವಿಧ ವಿಭಾಗಗಳಲ್ಲಿ ತರಬೇತಿ ಪೂರ್ಣಗೊಳಿಸಿದ 216ನೇ ಕೋರ್ಸ್‌ನ ಫ್ಲೈಟ್ ಕೆಡೆಟ್‌ಗಳ ಪರೇಡ್ ಅನ್ನು ಜನರಲ್ ಚೌಹಾಣ್ ಪರಿಶೀಲಿಸಿದರು.