ಬಿಹಾರದಲ್ಲಿ ಮೂರು ಹೊಸ ಇಲಾಖೆಗಳ ರಚನೆ: ನಾಗರಿಕ ವಿಮಾನಯಾನ ಖಾತೆ ಸಿಎಂ ನಿತೀಶ್ ಕುಮಾರ್ ಬಳಿಯೇ ಉಳಿಕೆ
ಹೊಸದಾಗಿ ರಚಿಸಲಾದ 'ಯುವಜನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ'ಯ ಜವಾಬ್ದಾರಿಯನ್ನು ಸಂಜಯ್ ಸಿಂಗ್ 'ಟೈಗರ್' ಅವರಿಗೆ ವಹಿಸಲಾಗಿದೆ. ಇವರು ಪ್ರಸ್ತುತ ಕಾರ್ಮಿಕ ಸಂಪನ್ಮೂಲ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ.
ನಿತೀಶ್ ಕುಮಾರ್
ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ರಚಿಸಲಾದ ಮೂರು ಇಲಾಖೆಗಳಿಗೆ ಸಚಿವರನ್ನು ಹಂಚಿಕೆ ಮಾಡಲಾಗಿದ್ದು, ಮಹತ್ವದ ನಾಗರಿಕ ವಿಮಾನಯಾನ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಅಧಿಸೂಚನೆ ತಿಳಿಸಿದೆ.
ಡಿಸೆಂಬರ್ 9 ರಂದು ನಡೆದ ಬಿಹಾರ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ ಮೂರು ಹೊಸ ಇಲಾಖೆಗಳ ರಚನೆಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ 'ಯುವಜನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ', 'ಉನ್ನತ ಶಿಕ್ಷಣ' ಮತ್ತು 'ನಾಗರಿಕ ವಿಮಾನಯಾನ' ಇಲಾಖೆಗಳು ಸೇರಿವೆ. ಇದರೊಂದಿಗೆ ಅಸ್ತಿತ್ವದಲ್ಲಿದ್ದ ಮೂರು ಇಲಾಖೆಗಳ ಹೆಸರನ್ನು ಬದಲಾಯಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಡಿಸೆಂಬರ್ 12 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಈ ಹೊಸ ಇಲಾಖೆಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ.
ನೂತನ ಖಾತೆಗಳ ಹಂಚಿಕೆ ವಿವರ
ಹೊಸದಾಗಿ ರಚಿಸಲಾದ 'ಯುವಜನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ'ಯ ಜವಾಬ್ದಾರಿಯನ್ನು ಸಂಜಯ್ ಸಿಂಗ್ 'ಟೈಗರ್' ಅವರಿಗೆ ವಹಿಸಲಾಗಿದೆ. ಇವರು ಪ್ರಸ್ತುತ ಕಾರ್ಮಿಕ ಸಂಪನ್ಮೂಲ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ. ಇನ್ನು ರಾಜ್ಯದ ಶಿಕ್ಷಣ ಸಚಿವರಾಗಿರುವ ಸುನಿಲ್ ಕುಮಾರ್ ಅವರಿಗೆ ಹೆಚ್ಚುವರಿಯಾಗಿ ಹೊಸದಾಗಿ ಸೃಜಿಸಲಾದ 'ಉನ್ನತ ಶಿಕ್ಷಣ ಇಲಾಖೆ'ಯ ಖಾತೆಯನ್ನು ನೀಡಲಾಗಿದೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದ ನಾಗರಿಕ ವಿಮಾನಯಾನ ಇಲಾಖೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ನಿರ್ವಹಿಸಲಿದ್ದಾರೆ.
ಇಲಾಖೆಗಳ ಮರುಸಂಘಟನೆಯ ಭಾಗವಾಗಿ ಕೆಲವು ಇಲಾಖೆಗಳ ಹೆಸರನ್ನು ಬದಲಾಯಿಸಲಾಗಿದೆ. ಪಶು ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯನ್ನು ಇನ್ಮುಂದೆ 'ಹೈನುಗಾರಿಕೆ, ಮೀನುಗಾರಿಕೆ ಮತ್ತು ಪಶು ಸಂಪನ್ಮೂಲ ಇಲಾಖೆ' ಎಂದು ಕರೆಯಲಾಗುತ್ತದೆ. ಕಾರ್ಮಿಕ ಸಂಪನ್ಮೂಲ ಇಲಾಖೆಯನ್ನು 'ಕಾರ್ಮಿಕ ಸಂಪನ್ಮೂಲ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಇಲಾಖೆ' ಎಂದು ಹಾಗೂ ಕಲೆ, ಸಂಸ್ಕೃತಿ ಮತ್ತು ಯುವಜನ ಇಲಾಖೆಯನ್ನು 'ಕಲೆ ಮತ್ತು ಸಂಸ್ಕೃತಿ ಇಲಾಖೆ' ಎಂದು ಮರುನಾಮಕರಣ ಮಾಡಲಾಗಿದೆ.
ಮುಖ್ಯಮಂತ್ರಿಗಳ ಉದ್ದೇಶವೇನು?
ಈ ಮಹತ್ವದ ಬದಲಾವಣೆಗಳ ಕುರಿತು ಇತ್ತೀಚೆಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಂದಿನ ಐದು ವರ್ಷಗಳಲ್ಲಿ (2025-30) ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಈ ಗುರಿಯನ್ನು ತಲುಪಲು ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು ಅತ್ಯಗತ್ಯವಾಗಿದ್ದು, ಅದಕ್ಕಾಗಿಯೇ ಪ್ರತ್ಯೇಕ ಇಲಾಖೆಗಳನ್ನು ರಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉನ್ನತ ಶಿಕ್ಷಣಕ್ಕೆ ಪ್ರತ್ಯೇಕ ಇಲಾಖೆಯ ಅವಶ್ಯಕತೆಯ ಬಗ್ಗೆ ಮಾತನಾಡಿದ ಅವರು, ಕಲಿಕೆಯಲ್ಲಿ ಗುಣಮಟ್ಟದ ಸುಧಾರಣೆ ತರುವುದು, ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡುವುದು ಹಾಗೂ ಸಮಾಜದ ಎಲ್ಲಾ ವರ್ಗದ ಯುವಕರಿಗೆ ಉದ್ಯೋಗ ಆಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.
ನಾಗರಿಕ ವಿಮಾನಯಾನ ಇಲಾಖೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಕುರಿತು ಪ್ರಸ್ತಾಪಿಸಿದ ಸಿಎಂ, ರಾಜ್ಯದಲ್ಲಿ ಈಗಾಗಲೇ ಹಲವು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ಉಡಾನ್ ಯೋಜನೆಯಡಿ ಇನ್ನೂ ಹೆಚ್ಚಿನ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತ್ಯೇಕ ನಾಗರಿಕ ವಿಮಾನಯಾನ ಇಲಾಖೆಯ ರಚನೆಯಿಂದ ಈ ಕಾಮಗಾರಿಗಳಿಗೆ ವೇಗ ಸಿಗಲಿದ್ದು, ಇದು ಕೈಗಾರಿಕಾ ವಾತಾವರಣವನ್ನು ಸುಧಾರಿಸಲು ಮತ್ತು ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳ ರಫ್ತಿಗೆ ಸಹಾಯ ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.