6 ರಾಜ್ಯಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಣೆ; ಬಂಗಾಳಕ್ಕಿಲ್ಲ ಅವಕಾಶ

ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಕೋರಿಕೆಯ ಮೇರೆಗೆ ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಪರಿಷ್ಕರಣೆ ಗಡುವನ್ನು ವಿಸ್ತರಿಸಲಾಗಿದೆ.

Update: 2025-12-11 14:59 GMT
Click the Play button to listen to article

ಚುನಾವಣಾ ಆಯೋಗವು ಗುರುವಾರ ತಮಿಳುನಾಡು, ಗುಜರಾತ್ ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅವಧಿಯನ್ನು ವಿಸ್ತರಿಸಿದೆ. ಆದರೆ, ಈ ಪಟ್ಟಿಯಿಂದ ಪಶ್ಚಿಮ ಬಂಗಾಳವನ್ನು ಹೊರಗಿಟ್ಟಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಣ್ಣು ಕೆಂಪಾಗಿಸಿದ್ದು, ಕೇಂದ್ರ ಸರ್ಕಾರ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಕೋರಿಕೆಯ ಮೇರೆಗೆ ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಪರಿಷ್ಕರಣೆ ಗಡುವನ್ನು ವಿಸ್ತರಿಸಲಾಗಿದೆ. ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಡಿಸೆಂಬರ್ 14 ರವರೆಗೆ ಕಾಲಾವಕಾಶ ನೀಡಲಾಗಿದ್ದು, ಡಿಸೆಂಬರ್ 19 ರಂದು ಕರಡು ಪಟ್ಟಿ ಪ್ರಕಟವಾಗಲಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಅಂಡಮಾನ್‌ನಲ್ಲಿ ಡಿಸೆಂಬರ್ 18 ರವರೆಗೆ ವಿಸ್ತರಣೆಯಾಗಿದ್ದು, ಡಿಸೆಂಬರ್ 23 ರಂದು ಕರಡು ಪಟ್ಟಿ ಪ್ರಕಟವಾಗಲಿದೆ. ಉತ್ತರ ಪ್ರದೇಶದಲ್ಲಿ ಡಿಸೆಂಬರ್ 26 ರವರೆಗೆ ಗಡುವು ವಿಸ್ತರಿಸಲಾಗಿದ್ದು, ಡಿಸೆಂಬರ್ 31 ಕ್ಕೆ ಪಟ್ಟಿ ಪ್ರಕಟವಾಗಲಿದೆ.

ಗೋವಾ, ಪುದುಚೇರಿ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರವೇ ಗಡುವು ಮುಕ್ತಾಯವಾಗಿದ್ದು, ಡಿಸೆಂಬರ್ 16 ರಂದು ಕರಡು ಪಟ್ಟಿ ಹೊರಬೀಳಲಿದೆ. ಬಂಗಾಳದಲ್ಲಿ ಈಗಾಗಲೇ ಪರಿಷ್ಕರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿರುವುದರಿಂದ ಮತ್ತು ರಾಜ್ಯದಲ್ಲಿ ಚುನಾವಣೆ ಹತ್ತಿರವಿರುವುದರಿಂದ ಹೆಚ್ಚಿನ ಸಮಯ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮಿತ್ ಶಾ ವಿರುದ್ಧ ದೀದಿ ಗುಡುಗು

ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, "ದೇಶದ ಗೃಹ ಸಚಿವರು ಅಪಾಯಕಾರಿ ವ್ಯಕ್ತಿ. ಅವರ ಎರಡು ಕಣ್ಣುಗಳು ವಿಪತ್ತಿನ ಸಂದೇಶವನ್ನೇ ನೀಡುತ್ತವೆ. ಒಂದರಲ್ಲಿ ದುರ್ಯೋಧನನಾದರೆ, ಇನ್ನೊಂದರಲ್ಲಿ ದುಶ್ಯಾಸನ ಕಾಣುತ್ತಾನೆ," ಎಂದು ಮಹಾಭಾರತದ ಉಲ್ಲೇಖದೊಂದಿಗೆ ಅಮಿತ್ ಶಾ ವಿರುದ್ಧ ಹರಿಹಾಯ್ದರು.

ಮುಂದಿನ ಚುನಾವಣೆಗೆ ಮುನ್ನ ಕಾನೂನುಬದ್ಧವಾಗಿರುವ ಸುಮಾರು 1.5 ಕೋಟಿ ಬಂಗಾಳಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಅಮಿತ್ ಶಾ ನೇರವಾಗಿ ಸೂಚನೆ ನೀಡಿದ್ದಾರೆ ಎಂದು ಮಮತಾ ಗಂಭೀರ ಆರೋಪ ಮಾಡಿದರು.

ಅನಿರ್ದಿಷ್ಟಾವಧಿ ಧರಣಿಯ ಎಚ್ಚರಿಕೆ

"ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಅರ್ಹ ಮತದಾರರ ಹೆಸರನ್ನು ಅಳಿಸಲು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಬಿಹಾರದಲ್ಲಿ ನೀವು ಇದನ್ನು ಮಾಡಿರಬಹುದು, ಆದರೆ ಬಂಗಾಳದಲ್ಲಿ ನಡೆಯಲ್ಲ. ಒಬ್ಬೇ ಒಬ್ಬ ಅರ್ಹ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದರೂ, ಅದನ್ನು ಸರಿಪಡಿಸುವವರೆಗೂ ನಾನು ಅನಿರ್ದಿಷ್ಟಾವಧಿ ಧರಣಿ ಕೂರುತ್ತೇನೆ. ಬಂಗಾಳದಲ್ಲಿ ಯಾವುದೇ ಕಾರಣಕ್ಕೂ ಡಿಟೆನ್ಶನ್ ಕ್ಯಾಂಪ್‌ಗಳಿಗೆ (ಬಂಧನ ಕೇಂದ್ರ) ಅವಕಾಶ ನೀಡುವುದಿಲ್ಲ," ಎಂದು ಮಮತಾ ಎಚ್ಚರಿಸಿದರು.

ಚುನಾವಣಾ ಆಯೋಗದ ವಿರುದ್ಧವೂ ಗರಂ

ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದ ಅವರು, "ಬಿಜೆಪಿ ಬೆಂಬಲಿತ ಅಧಿಕಾರಿಗಳನ್ನು ದೆಹಲಿಯಿಂದ ಕಳುಹಿಸಿ ಜಿಲ್ಲಾಡಳಿತದ ಮೇಲೆ ಪ್ರಭಾವ ಬೀರಲಾಗುತ್ತಿದೆ. ಆಯೋಗ ಕೇವಲ ಬಿಜೆಪಿ ನೀಡುವ ದೂರುಗಳ ಮೇಲೆ ಮಾತ್ರ ಕೆಲಸ ಮಾಡುತ್ತಿದೆಯೇ?" ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಅರ್ಜಿಯನ್ನು ಸ್ವೀಕರಿಸುವವರೆಗೂ ನಾನು ನನ್ನ ಎಸ್ಐಆರ್ (SIR) ಫಾರ್ಮ್ ಅನ್ನು ಭರ್ತಿ ಮಾಡುವುದಿಲ್ಲ ಎಂದು ಸಿಎಂ ಘೋಷಿಸಿದರು.  

Tags:    

Similar News