88 ನಿಮಿಷ ಚರ್ಚೆ! ಮೋದಿ-ರಾಹುಲ್‌ ಹೈವೋಲ್ಟೇಜ್‌ ಮೀಟಿಂಗ್‌ ಹೈಲೈಟ್ಸ್‌ ಏನು?

ಮುಖ್ಯ ಮಾಹಿತಿ ಆಯುಕ್ತ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿ ವಿಚಾರವಾದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್‌ ಗಾಂಧಿ ಮಾತುಕತೆ ನಡೆಸಿದ್ದಾರೆ.

Update: 2025-12-11 07:15 GMT
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಮಾತುಕತೆ
Click the Play button to listen to article

ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ. ಮುಖ್ಯ ಮಾಹಿತಿ ಆಯುಕ್ತ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿ ವಿಚಾರವಾದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಕಚೇರಿಯಲ್ಲಿ ನಿನ್ನೆ ಮಧ್ಯಾಹ್ನ 1:07 ಗಂಟೆಗೆ ಈ ಸಭೆ ಆರಂಭಗೊಂಡು ಸುಮಾರು 88 ನಿಮಿಷಗಳ ಕಾಲ ನಡೆಯಿತು. ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಯ ಬಗ್ಗೆ ಮಾತ್ರವಲ್ಲದೇ, ಎಂಟು ಮಾಹಿತಿ ಆಯುಕ್ತರು ಮತ್ತು ಒಬ್ಬ ವಿಜಿಲೆನ್ಸ್ ಆಯುಕ್ತರ ನೇಮಕಾತಿಗಳ ಬಗ್ಗೆ ಈ ಸಭೆ ನಡೆದಿತ್ತು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಗಾಂಧಿ ಎಲ್ಲಾ ನೇಮಕಾತಿಗಳಿಗೆ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಮತ್ತು ಲಿಖಿತವಾಗಿ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ಅಗತ್ಯವಿರುವ ಮಾನದಂಡಗಳ ಬಗ್ಗೆ ರಾಹುಲ್‌ ಗಾಂಧಿ ಆಕ್ಷೇಪವನ್ನು ಎತ್ತಿದ್ದಾರೆ. ಸಾಮ್ಯಾನ್ಯವಾಗಿ ಇಂತಹ ಸಭೆಗಳಲ್ಲಿ ಭಾಗಿಯಾಗುವ ವಿರೋಧ ಪಕ್ಷ ನಾಯಕರಿಂದ ನೇಮಕಾತಿ ವಿಚಾರವಾಗಿ ಆಕ್ಷೇಪಣೆ ಬಂದೇ ಬರುತ್ತದೆ.

ಖಾಲಿ ಇರುವ ಹುದ್ದೆಗಳೆಷ್ಟು?

ಇನ್ನು ಕೇಂದ್ರ ಮಾಹಿತಿ ಆಯೋಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ನೋಡುವುದಾದರೆ… ಎಂಟು ಮಾಹಿತಿ ಆಯುಕ್ತರು ಹುದ್ದೆಗಳು ಖಾಲಿ ಇವೆ. ಇದರಲ್ಲಿ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯೂ ಸೇರಿದೆ. ಮುಖ್ಯ ಆಯುಕ್ತರಾಗಿದ್ದ ಹೀರಾಲಾಲ್‌ ಸಮಾರಿಯಾ ಸೆಪ್ಟೆಂಬರ್‌ನಲ್ಲಿ ನಿವೃತರಾಗಿದ್ದರು. ಇದಾದ ನಂತರ ಆ ಹುದ್ದೆಯೂ ಖಾಲಿ ಉಳಿದಿದೆ. ಸಿಐಸಿಯ ವೆಬ್‌ಸೈಟ್ ಪ್ರಕಾರ, ನೇಮಕಾತಿ ವಿಳಂಬದಿಂದಾಗಿ 30,838 ಪ್ರಕರಣಗಳ ವಿಳೇವಾರಿ ಆಗದೇ ಬಾಕಿ ಉಳಿದಿವೆ.

ನೇಮಕಾತಿ ಸಮಿತಿಯಲ್ಲಿ ಯಾರಿರುತ್ತಾರೆ?

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 12(3) ರ ಅಡಿಯಲ್ಲಿ, ಪ್ರಧಾನ ಮಂತ್ರಿಗಳು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೆ ಹೆಸರುಗಳನ್ನು ಆಯ್ಕೆ ಮಾಡಲು ಮತ್ತು ಶಿಫಾರಸು ಮಾಡಲು ಈ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಪ್ರಧಾನ ಮಂತ್ರಿಗಳು ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಸೇರಿದ್ದಾರೆ.

ರಾಹುಲ್‌ ಆರೋಪ ಏನು?

ಆಯ್ಕೆ ಸಮಿತಿ ಶಾರ್ಟ್‌ಲಿಸ್ಟ್‌ ಮಾಡಿದ ಹೆಸರುಗಳಿಗೆ ರಾಹುಲ್‌ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಾರ್ಟ್‌ಲಿಸ್ಟ್‌ಗೊಂಡಿರುವ ಅಭ್ಯರ್ಥಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳು ಹೆಸರುಗಳೇ ಇಲ್ಲ ಎನ್ನುವುದು ರಾಹುಲ್‌ ಆರೋಪ. ಈ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಒಟ್ಟು ಅರ್ಜಿದಾರರಲ್ಲಿ ಕೇವಲ 50% ಮತ್ತು ಶಾರ್ಟ್‌ಲಿಸ್ಟ್‌ನಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಹಿಂದುಳಿದ ವರ್ಗಗಳಿಂದ ಬಂದವರು. ಇದು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಸಂಚು. ನಾಗರಿಕ ಮಾಹಿತಿ ಹಕ್ಕನ್ನು ರಕ್ಷಿಸುವ ಹೊಣೆಯನ್ನು ಹೊತ್ತುಕೊಂಡಿರುವ ಸಂಸ್ಥೆಗಳಲ್ಲಿ ಈ ರೀತಿಯ ತಾರತಮ್ಯದ ನೇಮಕಾಗತಿ ಸರಿಯಾದ ನಡೆಯಲ್ಲ ಎಂದು ಅವರು ಹೇಳಿದ್ದಾರೆ.

Tags:    

Similar News