ಭಾರತದ ಜೊತೆ ಸುಂಕ ಸಮರಕ್ಕಿಳಿದ ಮೆಕ್ಸಿಕೋ- ಈ ಕ್ಷೇತ್ರಗಳ ಮೇಲೆ ಬಿಗ್‌ ಇಂಪ್ಯಾಕ್ಟ್‌!

ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಿಂದ ಆಯ್ದ ಸರಕುಗಳ ಆಮದಿನ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಲು ಮೆಕ್ಸಿಕೋ ನಿರ್ಧರಿಸಿದೆ.

Update: 2025-12-12 11:42 GMT
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್
Click the Play button to listen to article

ಅಮೆರಿಕದ ಬೆನ್ನಲ್ಲೇ ಮೆಕ್ಸಿಕೋ ಕೂಡ ಇದೀಗ ಭಾರತದ ವಿರುದ್ಧ ಸುಂಕ ಸಮರಕ್ಕಿಳಿದಿದೆ.  ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಿಂದ ಆಯ್ದ ಸರಕುಗಳ ಆಮದಿನ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಲು ಮೆಕ್ಸಿಕೋ ನಿರ್ಧರಿಸಿದೆ. ಸಹಜವೆಂಬಂತೆ ಹೆಚ್ಚಿನ ಸುಂಕಗಳು ವೆಚ್ಚವನ್ನು ಹೆಚ್ಚಿಸುತ್ತವೆ. ಚೀನಾದೊಂದಿಗಿನ ವ್ಯವಹಾರವನ್ನು ಕಡಿತಗೊಳಿಸುವಂತೆ ಅಮೆರಿಕದಿಂದ ಅಪಾರ ಒತ್ತಡ ಬಂದಿರುವ ಬೆನ್ನಲ್ಲೇ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ನೇತೃತ್ವದ ಸರ್ಕಾರ ಈ ಘೋಷಣೆ ಮಾಡಿದೆ.

ಯಾವೆಲ್ಲಾ ಸರಕುಗಳ ಮೇಲೆ ಸುಂಕ?

ಆಟೋ ಬಿಡಿಭಾಗಗಳು, ಲಘು ಕಾರುಗಳು, ಆಟಿಕೆಗಳು, ಬಟ್ಟೆ, ಜವಳಿ, ಪ್ಲಾಸ್ಟಿಕ್‌ಗಳು, ಪೀಠೋಪಕರಣಗಳು, ಪಾದರಕ್ಷೆಗಳು, ಉಕ್ಕು, ಗೃಹೋಪಯೋಗಿ ವಸ್ತುಗಳು, ಚರ್ಮದ ವಸ್ತುಗಳು, ಅಲ್ಯೂಮಿನಿಯಂ, ಕಾಗದ, ಗಾಜು, ಸೋಪುಗಳು, ಕಾರ್ಡ್‌ಬೋರ್ಡ್, ಮೋಟಾರ್‌ಸೈಕಲ್‌ಗಳು, ಸುಗಂಧ ದ್ರವ್ಯಗಳು ಮತ್ತು ಸೌಂದರ್ಯವರ್ಧಕಗಳ ಆಮದಿನ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗಿದೆ.

ಯಾವೆಲ್ಲಾ ಕ್ಷೇತ್ರಗಳ ಪರಿಣಾಮ?

ಭೌಗೋಳಿಕ ವ್ಯತ್ಯಾಸದ ಹೊರತಾಗಿಯೂ, ಭಾರತ ಮತ್ತು ಮೆಕ್ಸಿಕೋ ಬಲವಾದ ವ್ಯಾಪಾರ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಿವೆ. ಭಾರತೀಯ ಕೈಗಾರಿಕಾ ಒಕ್ಕೂಟದ (CII) ದತ್ತಾಂಶದ ಪ್ರಕಾರ, ಎರಡು ರಾಷ್ಟ್ರಗಳ ನಡುವಿನ ವ್ಯಾಪಾರವು 2019-20ರಲ್ಲಿ 7.9 ಬಿಲಿಯನ್‌ ಡಾಲರ್‌ನಿಂದ 2023-24ರಲ್ಲಿ 8.4 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಾಗಿದೆ.

ಹೊಸ ಸುಂಕಗಳು ಹಲವಾರು ವ್ಯಾಪಾರ ವಿಭಾಗಗಳ ಮೇಲೆ ಪರಿಣಾಮ ಬೀರಲಿದ್ದು, ಅನೇಕ ಸರಕುಗಳ ಬೆಲೆಯಲ್ಲಿ ಶೇಕಡಾ 35 ರಷ್ಟು ಹೆಚ್ಚಳವಾಗಲಿದೆ. ಆದರೆ ಮೆಕ್ಸಿಕೋದ ಈ ಕ್ರಮದಿಂದ ಆಟೋಮೊಬೈಲ್ ವಲಯವು ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. ಕಾರುಗಳ ಮೇಲಿನ ಆಮದು ಸುಂಕವು ಶೇಕಡಾ 20 ರಿಂದ ಶೇಕಡಾ 50 ಕ್ಕೆ ಏರಲಿದ್ದು, ವೋಕ್ಸ್‌ವ್ಯಾಗನ್, ಹುಂಡೈ, ನಿಸ್ಸಾನ್ ಮತ್ತು ಮಾರುತಿ ಸುಜುಕಿ ಸೇರಿದಂತೆ ಮೆಕ್ಸಿಕೋಗೆ ಭಾರತದ ಅತಿದೊಡ್ಡ ವಾಹನ ರಫ್ತುದಾರರ ಮೇಲೆ ಗಮನಾರ್ಹ ಹೊಡೆತ ಬೀಳಲಿದೆ. 1 ಬಿಲಿಯನ್ ಡಾಲರ್‌ ಮೌಲ್ಯದ ಸಾಗಣೆಯ ಮೇಲೆ ಈ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಉದ್ಯಮಿಗಳು

ಇನ್ನು ಕಳೆದ ತಿಂಗಳು ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಭಾರತೀಯ ಆಟೋಮೊಬೈಲ್ ತಯಾರಕರ ಸಂಘವು ಪತ್ರ ಬರೆದಿತ್ತು. "ಪ್ರಸ್ತಾವಿತ ಸುಂಕ ಹೆಚ್ಚಳವು ಮೆಕ್ಸಿಕೋಗೆ ಭಾರತೀಯ ಆಟೋಮೊಬೈಲ್ ರಫ್ತಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೆಕ್ಸಿಕನ್ ಸರ್ಕಾರದೊಂದಿಗೆ ದಯೆಯಿಂದ ತೊಡಗಿಸಿಕೊಳ್ಳಲು ನಾವು ಭಾರತ ಸರ್ಕಾರದ ಬೆಂಬಲವನ್ನು ಕೋರುತ್ತೇವೆ" ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಸೌದಿ ಅರೇಬಿಯಾ ನಂತರ ಭಾರತದ ಮೂರನೇ ಅತಿದೊಡ್ಡ ಕಾರು ರಫ್ತು ಮಾರುಕಟ್ಟೆಯಾಗಿರುವ ಮೆಕ್ಸಿಕೊದ ಈ ನಡೆ ಭಾರತಕ್ಕೆ ಬಹುದೊಡ್ಡ ಮಟ್ಟದಲ್ಲಿ ಹೊಡೆತ ಬೀಳುವಂತೆ ಮಾಡಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಸುಂಕ ಮರುಮೌಲ್ಯಮಾಪನ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.

VW ನ ಭಾರತೀಯ ಘಟಕವಾದ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್‌ನ ಮುಖ್ಯಸ್ಥ ಪಿಯೂಷ್ ಅರೋರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತವು ಹಲವು ವರ್ಷಗಳಿಂದ ಬಲವಾದ ರಫ್ತು ನೆಲೆಯಾಗಿದೆ ಮತ್ತು ಕಂಪನಿಯು ಇಲ್ಲಿಂದ 40 ಕ್ಕೂ ಹೆಚ್ಚು ದೇಶಗಳಿಗೆ ಕಾರುಗಳನ್ನು ರಫ್ತು ಮಾಡುತ್ತದೆ ಎಂದು ಹೇಳಿದ್ದಾರೆ.

ವೋಕ್ಸ್‌ವ್ಯಾಗನ್ ಮೇಲೆ ಹೆಚ್ಚು ಪರಿಣಾಮ

ಭಾರತವು ಕಳೆದ ಹಣಕಾಸು ವರ್ಷದಲ್ಲಿ ಮೆಕ್ಸಿಕೋಗೆ $5.3 ಶತಕೋಟಿ ಮೌಲ್ಯದ ಸರಕುಗಳನ್ನು ಸಾಗಿಸಿದೆ. ಅದರಲ್ಲಿ ಕಾರುಗಳು ಸುಮಾರು $1 ಶತಕೋಟಿಯಷ್ಟಿವೆ ಎಂದು ದತ್ತಾಂಶಗಳು ತಿಳಿಸಿವೆ.

ಮೆಕ್ಸಿಕೋಗೆ ಭಾರತದ ಒಟ್ಟು ಕಾರು ಸಾಗಣೆಯಲ್ಲಿ ಸ್ಕೋಡಾ ಆಟೋ ಸುಮಾರು ಶೇಕಡಾ 50 ರಷ್ಟಿದೆ. ಹುಂಡೈ 200 ಮಿಲಿಯನ್ ಡಾಲರ್‌ ಮೌಲ್ಯದ ಕಾರುಗಳನ್ನು ರಫ್ತು ಮಾಡಿದೆ. ನಿಸ್ಸಾನ್‌ನ ರಫ್ತು 140 ಮಿಲಿಯನ್ ಡಾಲರ್‌ ಮತ್ತು ಸುಜುಕಿಯ ರಫ್ತು 120 ಮಿಲಿಯನ್ ಡಾಲರ್‌ ಎಂದು ದತ್ತಾಂಶವು ತೋರಿಸಿದೆ.

ಮೆಕ್ಸಿಕೋದಲ್ಲಿ ಪ್ರತಿ ವರ್ಷ ಮಾರಾಟವಾಗುವ 1.5 ಮಿಲಿಯನ್ ಪ್ರಯಾಣಿಕ ವಾಹನಗಳಲ್ಲಿ ಸುಮಾರು ಮೂರನೇ ಎರಡರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಭಾರತದ ಸಾಗಣೆಗಳು ಒಟ್ಟು ಮಾರಾಟದ ಶೇ. 6.7 ರಷ್ಟಿದೆ.

ಭಾರತದ ಮೇಲೆ ಸುಂಕ ವಿಧಿಸುತ್ತಿರುವುದೇಕೆ?

ಮೆಕ್ಸಿಕೋದ ಕ್ಲೌಡಿಯಾ ಶೀನ್‌ಬಾಮ್ ಸರ್ಕಾರವು ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಹೀಗಾಗಿ ಭಾರತದ ಮೇಲೆ ಈ ಸುಂಕ ವಿಧಿಸಲಾಗಿದೆ. ಇನ್ನು ಸುಂಕ ಸಮರವನ್ನೇ ತನ್ನ ಅಸ್ತ್ರವನ್ನಾಗಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌ ಕೂಡ ಮೆಕ್ಸಿಕೋ ಮೇಲೆ ಭಾರೀ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಈ ಸುಂಕ ವಿಧಿಸಲಾಗಿದೆ. ಮೆಕ್ಸಿಕೊ ಇನ್ನೂ ಆಟೋಮೋಟಿವ್ ವಲಯ, ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಯುಎಸ್ ಸುಂಕಗಳನ್ನು ಎದುರಿಸುತ್ತಲೇ ಇದೆ. ಹೀಗಾಗಿ ಅದರಿಂದ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ಟ್ರಂಪ್‌ ಎದುರು ಮೆಕ್ಸಿಕೋ ತಲಬಾಗಿದೆ ಎಂಬುದು ಹಲವರ ವಾದ.

Tags:    

Similar News