ಎನ್1ಬಿ ವೀಸಾ ಗೊಂದಲ ನಡುವೆ ಅಮೆರಿಕದ 2 ಕಂಪನಿಗಳಿಗೆ ಸಿಇಒಗಳಾಗಿ ಇಬ್ಬರು ಭಾರತೀಯರ ಆಯ್ಕೆ
ಅಮೆರಿಕ ಸರ್ಕಾರ ಎಚ್-1ಬಿ ವೀಸಾದ ನಿಯಮಾವಳಿಗಳನ್ನು ಬಿಗಿಗೊಳಿಸುತ್ತಿರುವ ನಡುವೆ ಅಮೆರಿಕದ 2 ಕಂಪನಿಗಳು ಸೆ.22ರಂದು ಇಬ್ಬರು ಭಾರತೀಯರಿಗೆ ಸಿಇಒಗಳನ್ನಾಗಿ ನೇಮಕ ಮಾಡಿ ಆದೇಶಿಸಿವೆ.
ರಾಹುಲ್ ಗೋಯಲ್, ಶ್ರೀನಿವಾಸ ಗೋಪಾಲನ್
ಅಮೆರಿಕದಲ್ಲಿ ವಲಸೆ ನೀತಿಗಳು ಮತ್ತು ಎಚ್1ಬಿ ವೀಸಾ ನಿಯಮಗಳು ಬಿಗಿಯಾಗುತ್ತಿರುವ ಚರ್ಚೆಯ ನಡುವೆಯೇ, ಅಮೆರಿಕದ ಎರಡು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮೂಲದ ಇಬ್ಬರು ಅನುಭವಿ ಉದ್ಯೋಗಿಗಳನ್ನು ತಮ್ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನಾಗಿ (ಸಿಇಒ) ನೇಮಕ ಮಾಡಿವೆ. ದೂರಸಂಪರ್ಕ ಕ್ಷೇತ್ರದ ದೈತ್ಯ ಟಿ-ಮೊಬೈಲ್‌ಗೆ ಶ್ರೀನಿವಾಸ್ ಗೋಪಾಲನ್ ಮತ್ತು ಪಾನೀಯ ಕ್ಷೇತ್ರದ ಪ್ರಮುಖ ಕಂಪನಿ ಮೊಲ್ಸನ್ ಕೂರ್ಸ್‌ಗೆ ರಾಹುಲ್ ಗೋಯಲ್ ಅವರು ಉನ್ನತ ಹುದ್ದೆಗೇರುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ನಾಯಕತ್ವದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಟಿ-ಮೊಬೈಲ್ ಚುಕ್ಕಾಣಿ ಹಿಡಿದ ಶ್ರೀನಿವಾಸ್ ಗೋಪಾಲನ್
ಅಮೆರಿಕದ ಅತಿದೊಡ್ಡ ದೂರಸಂಪರ್ಕ ಕಂಪನಿಗಳಲ್ಲಿ ಒಂದಾದ ಟಿ-ಮೊಬೈಲ್, ತನ್ನ ಮುಂದಿನ ಸಿಇಒ ಆಗಿ ಶ್ರೀನಿವಾಸ್ ಗೋಪಾಲನ್ ಅವರನ್ನು ನೇಮಕ ಮಾಡಿದೆ. ಹಾಲಿ ಸಿಇಒ ಮೈಕ್ ಸಿಯೆವರ್ಟ್ ಅವರಿಂದ, ಗೋಪಾಲನ್ ಅವರು ನವೆಂಬರ್ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಅಹಮದಾಬಾದ್‌ನ ಪ್ರತಿಷ್ಠಿತ ಐಐಎಂ ಪದವೀಧರರಾಗಿರುವ ಗೋಪಾಲನ್, ಈ ನೇಮಕಾತಿಯ ಬಗ್ಗೆ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. "ಟಿ-ಮೊಬೈಲ್‌ನ ಮುಂದಿನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತಿದೆ. ಯಾರೂ ಊಹಿಸದ ರೀತಿಯಲ್ಲಿ ಗ್ರಾಹಕ ಸೇವೆಯನ್ನು ಒದಗಿಸುವ ಮೂಲಕ ಈ ಕಂಪನಿ ನನ್ನಲ್ಲಿ ವಿಶೇಷ ಸ್ಥಾನ ಪಡೆದಿದೆ," ಎಂದು ಅವರು ಬರೆದುಕೊಂಡಿದ್ದಾರೆ.
ಹಿಂದೂಸ್ಥಾನ್ ಯೂನಿಲಿವರ್ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ವೃತ್ತಿ ಆರಂಭಿಸಿದ ಗೋಪಾಲನ್, ನಂತರ ಭಾರ್ತಿ ಏರ್‌ಟೆಲ್, ವೊಡಾಫೋನ್, ಕ್ಯಾಪಿಟಲ್ ಒನ್ ಮತ್ತು ಡಚ್ ಟೆಲಿಕಾಂನಂತಹ ಜಾಗತಿಕ ಕಂಪನಿಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು. ಜರ್ಮನಿಯಲ್ಲಿ ಫೈಬರ್ ನೆಟ್‌ವರ್ಕ್ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಅಲ್ಲಿನ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಟಿ-ಮೊಬೈಲ್‌ನಲ್ಲಿ ಟೆಕ್ನಾಲಜಿ, ಗ್ರಾಹಕ ಸೇವೆ ಮತ್ತು ವ್ಯವಹಾರ ವಿಭಾಗಗಳ ಮುಖ್ಯಸ್ಥರಾಗಿ, 5ಜಿ, ಕೃತಕ ಬುದ್ಧಿಮತ್ತೆ (AI) ಹಾಗೂ ನೆಟ್‌ವರ್ಕ್ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರು.
ನಿರ್ಗಮಿತ ಸಿಇಒ ಮೈಕ್ ಸಿಯೆವರ್ಟ್ ಅವರು ಗೋಪಾಲನ್ ಅವರನ್ನು "ಅತ್ಯುತ್ತಮ ಕೌಶಲ್ಯ ಹೊಂದಿರುವ ನಾಯಕ" ಎಂದು ಶ್ಲಾಘಿಸಿದ್ದು, ಅವರ ನೇತೃತ್ವದಲ್ಲಿ ಕಂಪನಿಯು ಉದ್ಯೋಗಿ ಮತ್ತು ಗ್ರಾಹಕರ ಸೇವೆಯಲ್ಲಿ ಹೊಸ ಎತ್ತರಕ್ಕೆ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊಲ್ಸನ್ ಕೂರ್ಸ್ ಅಧ್ಯಕ್ಷರಾಗಿ ರಾಹುಲ್ ಗೋಯಲ್
ಚಿಕಾಗೋ ಮೂಲದ ಪಾನೀಯ ದೈತ್ಯ ಕಂಪನಿ ಮೊಲ್ಸನ್ ಕೂರ್ಸ್, ತನ್ನ ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ರಾಹುಲ್ ಗೋಯಲ್ (49) ಅವರನ್ನು ನೇಮಿಸಿದೆ. ಅಕ್ಟೋಬರ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿರುವ ಅವರು, ಗೇವಿನ್ ಹ್ಯಾಟೆರ್ಸ್ಲಿ ಅವರ ಸ್ಥಾನವನ್ನು ತುಂಬಲಿದ್ದಾರೆ ಮತ್ತು ವರ್ಷಾಂತ್ಯದವರೆಗೆ ಕಂಪನಿಗೆ ಸಲಹೆಗಾರರಾಗಿಯೂ ಮುಂದುವರಿಯಲಿದ್ದಾರೆ.
ಮೈಸೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ನಂತರ ಅಮೆರಿಕದ ಡೆನ್ವರ್‌ನಲ್ಲಿ ವ್ಯವಹಾರ ಅಧ್ಯಯನ (Business Administration) ಪೂರೈಸಿದ ರಾಹುಲ್ ಗೋಯಲ್, ಬರೋಬ್ಬರಿ 24 ವರ್ಷಗಳ ಕಾಲ ಇದೇ ಕಂಪನಿಗಾಗಿ ದುಡಿದಿದ್ದಾರೆ. ಕೂರ್ಸ್ ಮತ್ತು ಮೊಲ್ಸನ್ ಬ್ರ್ಯಾಂಡ್‌ಗಳಿಗಾಗಿ ಅಮೆರಿಕ, ಬ್ರಿಟನ್ ಮತ್ತು ಭಾರತದಲ್ಲಿಯೂ ಕಾರ್ಯನಿರ್ವಹಿಸಿದ ಅಪಾರ ಅನುಭವ ಅವರಿಗಿದೆ.
ಕಂಪನಿಯ ಮಂಡಳಿಯ ಅಧ್ಯಕ್ಷರಾದ ಡೇವಿಡ್ ಕೂರ್ಸ್, "ಉತ್ತರಾಧಿಕಾರಿಯ ಆಯ್ಕೆಯ ಸುದೀರ್ಘ ಪ್ರಕ್ರಿಯೆಯಲ್ಲಿ, ಕಂಪನಿಯ ಬೆಳವಣಿಗೆಗೆ ಪೂರಕವಾದ ಅನುಭವ ಮತ್ತು ದೃಷ್ಟಿಕೋನ ರಾಹುಲ್ ಅವರಲ್ಲಿದೆ ಎಂಬುದು ಸ್ಪಷ್ಟವಾಯಿತು" ಎಂದು ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿದ ರಾಹುಲ್, "ಕಂಪನಿಯ ಶ್ರೀಮಂತ ಪರಂಪರೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ಸಿದ್ಧ" ಎಂದು ಹೇಳಿದ್ದಾರೆ.