ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಶಶಿ ತರೂರ್!

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ಜಯ ದಾಖಲಿಸಿದೆ.

Update: 2025-12-14 04:54 GMT

ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು "ಪ್ರಜಾಪ್ರಭುತ್ವದ ಸೌಂದರ್ಯ" ಎಂದು ಬಣ್ಣಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿದ್ದನ್ನು ಶ್ಲಾಘಿಸುತ್ತಲೇ, ತಮ್ಮ ಕ್ಷೇತ್ರದಲ್ಲಿನ ಬಿಜೆಪಿಯ ಗೆಲುವನ್ನು ಅವರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ.

ಶನಿವಾರ ಫಲಿತಾಂಶ ಪ್ರಕಟವಾದ ನಂತರ ಎಕ್ಸ್ (ಹಿಂದಿನ ಟ್ವಿಟರ್) ತಾಣದಲ್ಲಿ ಪ್ರತಿಕ್ರಿಯಿಸಿರುವ ತರೂರ್, "ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅದ್ಭುತ ಫಲಿತಾಂಶ ಬಂದಿದೆ. ಜನರ ತೀರ್ಪು ಸ್ಪಷ್ಟವಾಗಿದೆ," ಎಂದು ಹೇಳಿದ್ದಾರೆ. "ರಾಜ್ಯಾದ್ಯಂತ ಪ್ರಭಾವಶಾಲಿ ಗೆಲುವು ಸಾಧಿಸಿದ ಯುಡಿಎಫ್ ಕೇರಳಕ್ಕೆ ನನ್ನ ದೊಡ್ಡ ಅಭಿನಂದನೆಗಳು. ಕಠಿಣ ಪರಿಶ್ರಮ, ಬಲವಾದ ಸಂದೇಶ ಮತ್ತು ಆಡಳಿತ ವಿರೋಧಿ ಅಲೆಯು 2020ಕ್ಕಿಂತ ಉತ್ತಮ ಫಲಿತಾಂಶವನ್ನು ತಂದುಕೊಟ್ಟಿದೆ. ಇದು ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಬಲ ಸಂಕೇತವಾಗಿದೆ," ಎಂದು ಅವರು ವಿಶ್ಲೇಷಿಸಿದ್ದಾರೆ.

ಬದಲಾವಣೆಗಾಗಿ ಪ್ರಚಾರ

ಇದೇ ವೇಳೆ, ತಿರುವನಂತಪುರಂನಲ್ಲಿನ ಫಲಿತಾಂಶವನ್ನು ಒಪ್ಪಿಕೊಂಡಿರುವ ಅವರು, "ನನ್ನ ಕ್ಷೇತ್ರದಲ್ಲಿ 45 ವರ್ಷಗಳ ಎಲ್‌ಡಿಎಫ್ ದುರಾಡಳಿತದ ವಿರುದ್ಧ ನಾನು ಬದಲಾವಣೆಗಾಗಿ ಪ್ರಚಾರ ಮಾಡಿದ್ದೆ. ಆದರೆ, ಮತದಾರರು ಬದಲಾವಣೆ ಬಯಸಿದ ಮತ್ತೊಂದು ಪಕ್ಷಕ್ಕೆ (ಬಿಜೆಪಿ) ಮನ್ನಣೆ ನೀಡಿದ್ದಾರೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಜನರ ತೀರ್ಪನ್ನು ನಾವು ಗೌರವಿಸಲೇಬೇಕು; ಅದು ರಾಜ್ಯದಲ್ಲಿ ಯುಡಿಎಫ್‌ಗೆ ಇರಲಿ ಅಥವಾ ನನ್ನ ಕ್ಷೇತ್ರದಲ್ಲಿ ಬಿಜೆಪಿಗೆ ಇರಲಿ," ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ಜಯ ದಾಖಲಿಸಿದೆ. 45 ವರ್ಷಗಳ ಎಡಪಕ್ಷಗಳ ನಿರಂತರ ಆಡಳಿತವನ್ನು ಕೊನೆಗೊಳಿಸಿರುವ ಬಿಜೆಪಿ, 101 ಸದಸ್ಯ ಬಲದ ಪಾಲಿಕೆಯಲ್ಲಿ 50 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಎಲ್‌ಡಿಎಫ್ 29 ಮತ್ತು ಯುಡಿಎಫ್ 19 ಸ್ಥಾನಗಳಿಗೆ ತೃಪ್ತಿಪಟ್ಟರೆ, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೇವಲ ಒಂದು ಸ್ಥಾನದಿಂದ ಸಂಪೂರ್ಣ ಬಹುಮತ ವಂಚಿತವಾಗಿದೆ.

Similar News