ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶದ ಬೆನ್ನಲ್ಲೇ ರಾಜ್ಯಾದ್ಯಂತ ಹಿಂಸಾಚಾರ
ಕೋಝಿಕ್ಕೋಡ್ ಜಿಲ್ಲೆಯ ಎರಮಲಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಾದ ‘ಇಂದಿರಾ ಗಾಂಧಿ ಭವನ’ದ ಮೇಲೆ ಸಿಪಿಐ(ಎಂ) ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೈತ್ರಿಕೂಟದ ಗೆಲುವಿನ ನಂತರ ಯುಡಿಎಫ್ ಅಭ್ಯರ್ಥಿ ದೀಪ್ತಿ ಮೇರಿ ವರ್ಗೀಸ್, ಕೇಂದ್ರ ಮತ್ತು ಇತರರು ಸಂಭ್ರಮಿಸುತ್ತಿದ್ದಾರೆ
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧೆಡೆ, ವಿಶೇಷವಾಗಿ ಉತ್ತರ ಕೇರಳದಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ ಭುಗಿಲೆದ್ದಿದೆ. ಫಲಿತಾಂಶದ ನಂತರ ಸಿಪಿಐ(ಎಂ), ಯುಡಿಎಫ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಘರ್ಷಣೆಗಳು ವರದಿಯಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ಎರಮಲಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಾದ ‘ಇಂದಿರಾ ಗಾಂಧಿ ಭವನ’ದ ಮೇಲೆ ಸಿಪಿಐ(ಎಂ) ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎಡಚೇರಿ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಪ್ರಕಾರ, ಸುಮಾರು 200 ಜನರ ಗುಂಪು ಮಾರಕಾಸ್ತ್ರಗಳೊಂದಿಗೆ ಬಂದು ಕಚೇರಿಯನ್ನು ಧ್ವಂಸಗೊಳಿಸಿದೆ. ಈ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಮೆಗೂ ಹಾನಿ ಮಾಡಲಾಗಿದ್ದು, ಅಂದಾಜು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಈ ಘಟನೆಯ ನಂತರ ಯುಡಿಎಫ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕಣ್ಣೂರಿನಲ್ಲಿಯೂ ಗಲಾಟೆ
ಇತ್ತ ಕಣ್ಣೂರು ಜಿಲ್ಲೆಯ ಪಾನೂರ್ ಪ್ರದೇಶದಲ್ಲಿಯೂ ಹಿಂಸಾಚಾರ ವರದಿಯಾಗಿದೆ. ಯುಡಿಎಫ್ ವಿಜಯೋತ್ಸವದ ರ್ಯಾಲಿಯನ್ನು ಸಿಪಿಐ(ಎಂ) ಕಾರ್ಯಕರ್ತರು ಕತ್ತಿ ಮತ್ತು ಡ್ಯಾಗರ್‌ಗಳನ್ನು ಪ್ರದರ್ಶಿಸಿ ತಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆದಿದ್ದು, ಮನೆಯಲ್ಲಿದ್ದ ವಾಹನಗಳನ್ನು ಜಖಂಗೊಳಿಸಲಾಗಿದೆ. ಕಣ್ಣೂರಿನ ಉಲಿಕ್ಕಲ್‌ನಲ್ಲಿಯೂ ಯುಡಿಎಫ್ ಮತ್ತು ಎಲ್‌ಡಿಎಫ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿಯೂ ಸಂಘರ್ಷ ಮುಂದುವರಿದಿದೆ. ಸುಲ್ತಾನ್ ಬತ್ತೇರಿಯಲ್ಲಿ ಯುಡಿಎಫ್ ಕಾರ್ಯಕರ್ತ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ 40ಕ್ಕೂ ಹೆಚ್ಚು ಜನರ ಗುಂಪು ದಾಳಿ ನಡೆಸಿದೆ. ಕಾಸರಗೋಡಿನ ಬೇಡಕಂನಲ್ಲಿ ಎಲ್‌ಡಿಎಫ್ ವಿಜಯಯಾತ್ರೆಯ ವೇಳೆ ಯುಡಿಎಫ್ ಕಾರ್ಯಕರ್ತರನ್ನು ಅಡ್ಡಿಪಡಿಸಲಾಗಿದ್ದು, ಗಲಾಟೆ ಬಿಡಿಸಲು ಹೋದ ಪೊಲೀಸರಿಗೂ ಗಾಯಗಳಾಗಿವೆ. ರಾಜಧಾನಿ ತಿರುವನಂತಪುರಂನ ನೇಯ್ಯಾಟಿಂಕರದಲ್ಲಿ ಬಿಜೆಪಿ ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಜ್ಯದಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.