ದಶಕದ ನಿಷೇಧಕ್ಕೆ ತೆರೆ: ಭಾರತದ 500, 200 ರೂ. ನೋಟುಗಳಿಗೆ ನೇಪಾಳದಲ್ಲಿ ಗ್ರೀನ್ ಸಿಗ್ನಲ್

ಕರೆನ್ಸಿ ನಿರ್ಬಂಧವು ನೇಪಾಳದ ಪ್ರವಾಸೋದ್ಯಮ ಕ್ಷೇತ್ರದ ಮೇಲೂ, ವಿಶೇಷವಾಗಿ ಭಾರತೀಯ ಪ್ರವಾಸಿಗರನ್ನೇ ಹೆಚ್ಚಾಗಿ ಅವಲಂಬಿಸಿರುವ ಕ್ಯಾಸಿನೊ ಮತ್ತು ಹಾಸ್ಪಿಟಾಲಿಟಿ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು.

Update: 2025-12-16 04:30 GMT

ಸಾಂದರ್ಭಿಕ ಚಿತ್ರ 

Click the Play button to listen to article

ದಶಕಗಳ ಕಾಲ ಜಾರಿಯಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸಿರುವ ನೇಪಾಳ ಸರ್ಕಾರ, ಭಾರತದ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳ (200 ಮತ್ತು 500 ರೂಪಾಯಿ) ಬಳಕೆಗೆ ಅನುಮತಿ ನೀಡಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ಮುಂದೆ ಭಾರತೀಯ ಹಾಗೂ ನೇಪಾಳಿ ಪ್ರಜೆಗಳು 25,000 ರೂಪಾಯಿ ಮಿತಿಯವರೆಗೆ ಈ ನೋಟುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬಹುದಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ವಿನಿಮಯ ನಿರ್ವಹಣಾ ನಿಯಮಗಳಿಗೆ ತಿದ್ದುಪಡಿ ತಂದ ಬೆನ್ನಲ್ಲೇ ನೇಪಾಳ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ತಿದ್ದುಪಡಿಯ ಅನ್ವಯ ಭಾರತ, ನೇಪಾಳ ಮತ್ತು ಭೂತಾನ್ ಪ್ರಜೆಗಳು ಅಧಿಕ ಮುಖಬೆಲೆಯ ನೋಟುಗಳನ್ನು ಭಾರತದಿಂದ ಹೊರಗೆ ಅಥವಾ ಭಾರತದೊಳಗೆ ತರಲು ಅವಕಾಶ ಕಲ್ಪಿಸಲಾಗಿದೆ. ನೇಪಾಳ ಸರ್ಕಾರದ ಈ ನಿರ್ಧಾರವು ಗೆಜೆಟ್‌ನಲ್ಲಿ ಪ್ರಕಟವಾದ ನಂತರ, ನೇಪಾಳ ರಾಷ್ಟ್ರ ಬ್ಯಾಂಕ್ (NRB) ಅಧಿಕೃತ ಸುತ್ತೋಲೆ ಹೊರಡಿಸಲಿದ್ದು, ಬಳಿಕ ಈ ನಿಯಮ ಜಾರಿಗೆ ಬರಲಿದೆ ಎಂದು ಎನ್‌ಆರ್‌ಬಿ ವಕ್ತಾರ ಗುರು ಪ್ರಸಾದ್ ಪೌಡೆಲ್ ತಿಳಿಸಿದ್ದಾರೆ.

ಈ ನಿರ್ಧಾರದಿಂದ ಎರಡೂ ದೇಶಗಳ ಪ್ರವಾಸಿಗರಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ಅನುಕೂಲವಾಗಲಿದೆ. "ಇದು ನಮ್ಮ ಬಹುಕಾಲದ ಬೇಡಿಕೆಯಾಗಿತ್ತು ಮತ್ತು ಭಾರತ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ" ಎಂದು ಪೌಡೆಲ್ ಹೇಳಿದ್ದಾರೆ. ಈ ಹಿಂದೆ, ಭಾರತದಲ್ಲಿ ದುಡಿಯುವ ಲಕ್ಷಾಂತರ ನೇಪಾಳಿ ಕಾರ್ಮಿಕರು ಕಡಿಮೆ ಮುಖಬೆಲೆಯ ನೋಟುಗಳಲ್ಲಿ ಹಣವನ್ನು ಮನೆಗೆ ತರಬೇಕಾಗುತ್ತಿತ್ತು. ಇದರಿಂದ ಪ್ರಯಾಣದ ವೇಳೆ ಕಳ್ಳತನದ ಅಪಾಯ ಹೆಚ್ಚಾಗಿತ್ತು. ಅಲ್ಲದೆ, ನಿಯಮದ ಅರಿವಿಲ್ಲದೆ 500 ಮತ್ತು 1,000 ರೂಪಾಯಿ ನೋಟುಗಳನ್ನು ಸಾಗಿಸಿ ಅನೇಕರು ಜೈಲು ಪಾಲಾದ ಉದಾಹರಣೆಗಳೂ ಇದ್ದವು.

ಪ್ರವಾಸೋದ್ಯಮಕ್ಕೆ ಆಘಾತ

ಕರೆನ್ಸಿ ನಿರ್ಬಂಧವು ನೇಪಾಳದ ಪ್ರವಾಸೋದ್ಯಮ ಕ್ಷೇತ್ರದ ಮೇಲೂ, ವಿಶೇಷವಾಗಿ ಭಾರತೀಯ ಪ್ರವಾಸಿಗರನ್ನೇ ಹೆಚ್ಚಾಗಿ ಅವಲಂಬಿಸಿರುವ ಕ್ಯಾಸಿನೊ ಮತ್ತು ಹಾಸ್ಪಿಟಾಲಿಟಿ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಅಧಿಕ ಮುಖಬೆಲೆಯ ನೋಟುಗಳಿಲ್ಲದೆ ಭಾರತೀಯ ಪ್ರವಾಸಿಗರು ಹೆಚ್ಚು ಖರ್ಚು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಇದು ಗಡಿ ಪಟ್ಟಣಗಳ ಆದಾಯಕ್ಕೆ ಹೊಡೆತ ನೀಡಿತ್ತು ಎಂದು ಪ್ರವಾಸೋದ್ಯಮ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

Tags:    

Similar News