ʻಶಾಂತಿʼ ಮಸೂದೆ ಮೇಲೆ ಚರ್ಚೆ- ಅಣುಶಕ್ತಿ ವಲಯದಲ್ಲಿ ಖಾಸಗೀಕರಣ ಪಕ್ಕಾ?

ನಾಗರಿಕ ಪರಮಾಣು ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಲು ಶಾಂತಿ ಮಸೂದೆಯನ್ನು ಸೋಮವಾರ ಮಂಡಿಸಲಾಗಿತ್ತು. ಈ ಮಸೂದೆ ಬಗ್ಗೆ ಇಂದು ಸಂಸತ್‌ನಲ್ಲಿ ಚರ್ಚೆ ನಡೆದಿದೆ.

Update: 2025-12-17 11:09 GMT
ಸಂಸತ್‌ ಅಧಿವೇಶನ
Click the Play button to listen to article

ಲೋಕಸಭೆಯಲ್ಲಿ ಬುಧವಾರ (ಡಿಸೆಂಬರ್ 17) ಪರಮಾಣು ಇಂಧನ ಮಸೂದೆಯ ಕುರಿತು ಚರ್ಚೆ ನಡೆಯಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 2047 ರ ವೇಳೆಗೆ ಭಾರತವು 100-GW ಪರಮಾಣು ಇಂಧನ ಉತ್ಪಾದನೆಯ ಗುರಿಯನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ನಾಗರಿಕ ಪರಮಾಣು ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಲು ಶಾಂತಿ (SHANTI-Sustainable Harnessing and Advancement of Nuclear Energy for Transforming India) ಮಸೂದೆಯನ್ನು ಸೋಮವಾರ ಮಂಡಿಸಲಾಗಿತ್ತು. ಈ ಮಸೂದೆ ಬಗ್ಗೆ ಇಂದು ಸಂಸತ್‌ನಲ್ಲಿ ಚರ್ಚೆ ನಡೆದಿದೆ.

ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ (FDI) ಶೇಕಡಾ 74ರಿಂದ 100 ರವರೆಗೆ ಅವಕಾಶ ಕಲ್ಪಿಸುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಮಂಡಳಿ ಅಸ್ತು ಎಂದಿತ್ತು. ಈ ನಿರ್ಧಾರ ದೇಶದ ಇಂಧನ ನೀತಿ, ರಾಷ್ಟ್ರೀಯ ಭದ್ರತೆ ಮತ್ತು ದೇಶೀಯ ಆರ್ಥಿಕ ಸ್ವಾವಲಂಬನೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಪರಮಾಣು ವಿದ್ಯುತ್ ಕ್ಷೇತ್ರದ ಮೇಲೆ ರಾಜ್ಯದ ಸಂಪೂರ್ಣ ನಿಯಂತ್ರಣ ಇರಬೇಕು ಎಂಬ ಭಾರತ ದಶಕಗಳ ತತ್ವವನ್ನು ಬದಲು ಮಾಡಿ ಇದೀಗ ಈ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಮತ್ತು ಖಾಸಗಿ ಪಾಲುದಾರರನ್ನು ಆಹ್ವಾನಿಸುವ ನಡೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ SHANTI ಮಸೂದೆಯನ್ನು ಸೋಮವಾರ (ಡಿ.15)ದಂದು ಲೋಕಸಭೆಯಲ್ಲಿ ಪರಿಚಯಿಸಲಾಗಿದೆ. ಭಾರತದಲ್ಲಿ ಅಣು ವಿದ್ಯುತ್ ಉತ್ಪಾದನೆಗೆ ದೇಶೀಯ ಹಾಗೂ ವಿದೇಶಿ ಖಾಸಗಿವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದಕ್ಕಾಗಿ, ಈಗ ಜಾರಿಯಲ್ಲಿರುವ ಅಣುಶಕ್ತಿ ಕಾಯ್ದೆ-1962 ಮತ್ತು ಅಣುಹಾನಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆ-2010 (CLND Act) ಯನ್ನು ರದ್ದುಗೊಳಿಸಿ, ಅವುಗಳ ಬದಲಿಗೆ SHANTI Bill-2025 ಅನ್ನು ತರಲಾಗುತ್ತಿದೆ. ಸರಳವಾಗಿ ಹೇಳುವುದಾದರೆ, ಇದುವರೆಗೆ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿದ್ದ ಅಣು ವಿದ್ಯುತ್ ಕ್ಷೇತ್ರವನ್ನು ಈಗ ಹೊಸ ಕಾನೂನಿನ ಮೂಲಕ ಖಾಸಗಿ ಮತ್ತು ವಿದೇಶಿ ಹೂಡಿಕೆದಾರರ ಕೈಗಿಡುವ ಪ್ರಯತ್ನ ಇದಾಗಿದೆ. ಈ ಮೂಲಕ ಅಣು ವಿದ್ಯುತ್ ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸುವುದು ಮತ್ತು ದೇಶದ ಇಂಧನ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಪ್ರತಿಪಕ್ಷಗಳಿಂದ ಭಾರೀ ವಿರೋಧ

“ಪರಮಾಣು ವಲಯಕ್ಕೆ ಬಂಡವಾಳಶಾಹಿಗಳು, ಉದ್ಯಮಿಗಳ ಭಾಗಿಗೆ ಮುಕ್ತ ಅವಕಾಶ ಮಾಡಿಕೊಡುವುದು ಭಾರತಕ್ಕೆ ಹಾನಿಕಾರಕ ಎಂದು ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಮಸೂದೆಯನ್ನು ವಿರೋಧಿಸಿದರು. ಪರಮಾಣು ವಲಯವನ್ನು ಮುಕ್ತಗೊಳಿಸಿದರೆ ವಿದೇಶಿ ಪೂರೈಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಪೂರೈಕೆದಾರರ ಹೊಣೆಗಾರಿಕೆ ಷರತ್ತನ್ನು ತೆಗೆದುಹಾಕುವುದು ಭಾರತಕ್ಕೆ ಹೇಗೆ ಸಹಾಯ ಮಾಡುತ್ತದೆ?" ತಿವಾರಿ ವಾದಿಸಿದರು.


Tags:    

Similar News