ಕಾರ್ತಿಕ ದೀಪ ವಿವಾದ| ಆದೇಶ ಜಾರಿ ಮಾಡಿದ ಅಧಿಕಾರಿಗಳ ವಿರುದ್ಧ ನ್ಯಾಯಮೂರ್ತಿ ಗರಂ; ಮದ್ರಾಸ್ ಪೀಠದಲ್ಲಿ ಹೈಡ್ರಾಮ
ಸೆಕ್ಷನ್ 144 ಜಾರಿಗೊಳಿಸಿರುವುದು ಮಾರ್ಗಸೂಚಿಗಳ ಅನ್ವಯವೇ ಹೊರತು, ನ್ಯಾಯಾಲಯದ ಆದೇಶ ಉಲ್ಲಂಘಿಸುವ ಉದ್ದೇಶದಿಂದಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಕಾರ್ತಿಕ ದೀಪ
ತಮಿಳುನಾಡಿನ ಮಧುರೈನಲ್ಲಿರುವ ತಿರುಪರಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಹಾಗೂ ಶಾಸಕಾಂಗದ ನಡುವಿನ ಸಂಘರ್ಷ ತಾರಕಕ್ಕೇರಿದೆ.
ಬುಧವಾರ ಮದ್ರಾಸ್ ಹೈಕೋರ್ಟ್ ಮಧುರೈ ಪೀಠದಲ್ಲಿ ನಡೆದ ಕಾವೇರಿದ ವಿಚಾರಣೆ ನಡೆದು, ಕಾರ್ತಿಕ ದೀಪ ಬೆಳಗುವಂತೆ ತಾವು ನೀಡಿದ್ದ ಆದೇಶವನ್ನು ಏಕೆ ಜಾರಿಗೆ ತಂದಿಲ್ಲ ಎಂದು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಜಿಲ್ಲಾಧಿಕಾರಿಗಳು, ಡಿ.1 ರಂದು ನ್ಯಾಯಪೀಠ ನೀಡಿದ್ದ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಕುಪಿತರಾದರು.
ವಿಚಾರಣೆ ವೇಳೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಹಾಗೂ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಮಧುರೈ ಜಿಲ್ಲಾಧಿಕಾರಿ ಕೆ.ಜೆ. ಪ್ರವೀಣ್‌ಕುಮಾರ್ ಮತ್ತು ನಗರ ಪೊಲೀಸ್ ಕಮಿಷನರ್ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸರ್ಕಾರದ ಸಮರ್ಥನೆ
ಸೆಕ್ಷನ್ 144 ಜಾರಿಗೊಳಿಸಿರುವುದು ಮಾರ್ಗಸೂಚಿಗಳ ಅನ್ವಯವೇ ಹೊರತು, ನ್ಯಾಯಾಲಯದ ಆದೇಶ ಉಲ್ಲಂಘಿಸುವ ಉದ್ದೇಶದಿಂದಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸ್ವಾಮಿನಾಥನ್ ಅವರು, ಹಾಗಾದರೆ ನನ್ನ ಆದೇಶಕ್ಕೆ ಗೌರವವಿಲ್ಲವೇ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ನ್ಯಾಯಾಂಗದ ನಿರ್ದೇಶನಗಳನ್ನು ನಿರ್ಲಕ್ಷಿಸುವುದರಿಂದ ಆಡಳಿತವು ದುರ್ಬಲಗೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಪೀಠದಿಂದ ಹೊರನಡೆದ ನ್ಯಾಯಮೂರ್ತಿ
ವಿಚಾರಣೆಯ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು, ನ್ಯಾ.ಸ್ವಾಮಿನಾಥನ್ ಅವರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸೂಚ್ಯವಾಗಿ ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು.
ತಕ್ಷಣವೇ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ, ವಿವರಣೆ ಕೋರಿದರು. ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ದಿಢೀರ್ ಸಭಾಂಗಣದಿಂದ ನಿರ್ಗಮಿಸಿ ತಮ್ಮ ಕೊಠಡಿಗೆ ತೆರಳಿದರು. ಪ್ರಕರಣದ ವಿಚಾರಣೆಯನ್ನು ಜ.9ಕ್ಕೆ ಮುಂದೂಡಲಾಯಿತು. ಬಳಿಕ ಎಲ್ಲಾ ಅಧಿಕಾರಿಗಳಿಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಯಿತು.
ಪ್ರಕರಣದ ಹಿನ್ನೆಲೆ ಏನು?
ತಿರುಪರಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗುವ ಐತಿಹಾಸಿಕ ದೀಪತ್ತೂಣ್ ಆಚರಣೆ ಮುಂದುವರಿಸುವಂತೆ ನ್ಯಾಯಮೂರ್ತಿಗಳು ತೀರ್ಪು ನೀಡಿದ ಬಳಿಕ ತಮಿಳುನಾಡಿನಲ್ಲಿ ಡಿಎಂಕೆ ಸೇರಿದಂತೆ ಹಲವು ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅಲ್ಲದೇ ಅಧಿಕಾರಿಗಳು ಕೂಡ ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಆದೇಶ ಜಾರಿಗೆ ಹಿಂದೇಟು ಹಾಕಿದ್ದರು. ಈ ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಲ್ಲದೆ, 100 ಕ್ಕೂ ಹೆಚ್ಚು 'ಇಂಡಿಯಾ' ಮೈತ್ರಿಕೂಟದ ಸಂಸದರು ನ್ಯಾಯಾಧೀಶರ ವಿರುದ್ಧ ವಾಗ್ದಂಡನೆಗೆ ಸಹಿ ಸಂಗ್ರಹ ಮಾಡಿದ್ದರು.
ವಾಗ್ದಂಡನೆ ಪ್ರಕ್ರಿಯೆ
ಸಂವಿಧಾನದ 124(4) ವಿಧಿ ಮತ್ತು ನ್ಯಾಯಾಧೀಶರ (ತನಿಖಾ) ಕಾಯ್ದೆ 1968ರ ಪ್ರಕಾರ, ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸುವುದು ಸುಲಭದ ಮಾತಲ್ಲ. ಇದಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಮೂರನೇ ಎರಡರಷ್ಟು ಸದಸ್ಯರ ಬಹುಮತದ ಅಗತ್ಯವಿರುತ್ತದೆ.
ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್ಡಿಎ ಒಕ್ಕೂಟ ಸ್ಪಷ್ಟ ಬಹುಮತ ಹೊಂದಿರುವುದರಿಂದ, ಈ ನಿರ್ಣಯ ಅಂಗೀಕಾರವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಸ್ಪೀಕರ್ ಅವರು ಈ ನೋಟಿಸ್ ಅನ್ನು ಅಂಗೀಕರಿಸಿದರೆ, ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಬೇಕಾಗುತ್ತದೆ. ಸದ್ಯಕ್ಕೆ ಇದು ತಮಿಳುನಾಡಿನಲ್ಲಿ ರಾಜಕೀಯ ಮತ್ತು ಕೋಮು ಆಧಾರಿತ ಚರ್ಚೆಯನ್ನು ತೀವುಗೊಳಿಸಿದೆ.