ʻರಾಮ್ ಜಿʼ ಮಸೂದೆ ಮೇಲಿನ ಚರ್ಚೆ ಪೂರ್ಣ; ಇಂದೇ ಅಂಗೀಕಾರಗೊಳ್ಳುತ್ತಾ?
ವಿಕಸಿತ್ ಭಾರತ್ ಗ್ಯಾರಂಟಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆ, ಕುರಿತ ಚರ್ಚೆ ಬುಧವಾರ ಮಧ್ಯರಾತ್ರಿಯ ನಂತರ ಮುಕ್ತಾಯಗೊಂಡಿತು ಮತ್ತು 98 ಸದಸ್ಯರು ಭಾಗವಹಿಸಿದ್ದರು.
ಸುಮಾರು 20 ವರ್ಷ ಹಳೆಯದಾದ ನರೇಗಾ (MGNREG) ಕಾಯ್ದೆಯನ್ನು ಬದಲಿಸಲು ಉದ್ದೇಶಿಸಿರುವ ಹೊಸ ಗ್ರಾಮೀಣ ಉದ್ಯೋಗ ಮಸೂದೆಯ ಮೇಲಿನ ಚರ್ಚೆ ಲೋಕಸಭೆಯಲ್ಲಿ ಗುರುವಾರ ಬೆಳಗ್ಗಿನ ಜಾವ ಪೂರ್ಣಗೊಂಡಿದೆ. ವಿಕಸಿತ್ ಭಾರತ್ ಗ್ಯಾರಂಟಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆ, ಕುರಿತ ಚರ್ಚೆ ಬುಧವಾರ ಮಧ್ಯರಾತ್ರಿಯ ನಂತರ ಮುಕ್ತಾಯಗೊಂಡಿತು ಮತ್ತು 98 ಸದಸ್ಯರು ಭಾಗವಹಿಸಿದ್ದರು. ಲೋಕಸಭೆಯನ್ನು ಬೆಳಿಗ್ಗೆ 1:35ಕ್ಕೆ ಮುಂದೂಡಲಾಯಿತು.
ಇಂದು ಕೇಂದ್ರ ಸರ್ಕಾರದ ಉತ್ತರ
ಮಸೂದೆ ಮೇಲಿನ ಚರ್ಚೆಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಇಂದು ಸರ್ಕಾರ ಉತ್ತರಿಸಲಿದೆ. ಗ್ರಾಮೀಣ ಅಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಚರ್ಚೆಗೆ ಉತ್ತರಿಸಲಿದ್ದಾರೆ ಎನ್ನಲಾಗಿದೆ. ಇದು ಸಂಸತ್‌ನಲ್ಲಿ ಮತ್ತೊಂದು ಸುತ್ತಿನ ಕೋಲಾಹಲವನ್ನು ಸೃಷ್ಟಿಸುವ ಸಾಧ್ಯತೆ ಇದೆ.
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ವಾಯು ಮಾಲಿನ್ಯದ ಕುರಿತು ಲೋಕಸಭೆಯು ದೀರ್ಘಾವಧಿಯ ಚರ್ಚೆಯನ್ನು ಸಹ ಕೈಗೆತ್ತಿಕೊಳ್ಳಲಿದೆ. ಕಾಂಗ್ರೆಸ್ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಚರ್ಚೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಡಿಎಂಕೆ ಸದಸ್ಯೆ ಕೆ ಕನಿಮೋಳಿ ಮತ್ತು ಬಿಜೆಪಿ ಸದಸ್ಯೆ ಬನ್ಸುರಿ ಸ್ವರಾಜ್ ಕೂಡ ಚರ್ಚೆಯನ್ನು ಎತ್ತುವಂತೆ ನೋಟಿಸ್ ನೀಡಿದ್ದಾರೆ.
ದೇಶದ ಬಹುದೊಡ್ಡ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ನರೇಗಾ ಹೆಸರಿನ ಬದಲು ಇನ್ನು ಮುಂದೆ 'ವೀಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆ, 2025' ಎಂಬ ನಾಮಾಂಕಿತದ ಜೊತೆಗೆ ಹೊಸದಾಗಿ ಈ ಯೋಜನೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ.
ನರೇಗಾ ಯೋಜನೆ ಬಗ್ಗೆ
ಈ ಉದ್ಯೋಗ ಖಾತರಿ ಯೋಜನೆ ಮೊದಲು 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (NREGA) ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ನಂತರ 2009 ರಲ್ಲಿ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ 'Mahatma Gandhi' ಎಂಬ ಪದ ಸೇರಿಸಿ MGNREGA ಎಂಬ ರೂಪಕ್ಕೆ ತಂದರು. ಆದರೂ ಇದು ನರೇಗಾ ಯೋಜನೆ ಎಂದೇ ಜನಜನಿತ. ಈ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಕನಿಷ್ಠ ಗ್ಯಾರಂಟಿ-ಬದ್ಧ ಕೆಲಸವನ್ನು ಒದಗಿಸುವುದು. ಅವರ ಆರ್ಥಿಕ ಪ್ರಗತಿಗೆ ಶ್ರಮಿಸುವ ಪ್ರಮುಖ ಉದ್ದೇಶವನ್ನು ನರೇಗಾ ಹೊಂದಿದೆ.