
ಬದಲಾಗುತ್ತೆ ನರೇಗಾ ಯೋಜನೆ ಹೆಸರು; ಗಾಂಧಿ ನಾಮಾಂಕಿತದ ಬದಲು ʼರಾಮ್ ಜಿʼ!
ನರೇಗಾ ಹೆಸರನ್ನು ಬದಲಿಸಿ ಆ ಯೋಜನೆಯನ್ನು ʻವೀಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G)ʼ ಹೆಸರಿನಲ್ಲಿ ಪರಿಚಯಿಸಲು ಸರ್ಕಾರ ಮುಂದಾಗಿದೆ.
ದೇಶದ ಬಹುದೊಡ್ಡ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ನರೇಗಾ ಹೆಸರಿನ ಬದಲು ಇನ್ನು ಮುಂದೆ ʻವೀಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆ, 2025ʼ ಎಂಬ ನಾಮಾಂಕಿತದ ಜೊತೆಗೆ ಹೊಸದಾಗಿ ಈ ಯೋಜನೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಇದಕ್ಕೆ ಸಂಬಂಧಪಟ್ಟ ಕರಡು ಮಸೂದೆಯನ್ನು ಸರ್ಕಾರ ಲೋಕಸಭೆ ಸದಸ್ಯರಲ್ಲಿ ವಿತರಿಸಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಪ್ರಸ್ತಾವಿತ ಕರಡು ಮಸೂದೆಯ ಪ್ರತಿಯ ಪ್ರಕಾರ, ಮಸೂದೆಯು 'ವೀಕ್ಷಿತ್ ಭಾರತ್ 2047 ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ಗ್ರಾಮೀಣ ಅಭಿವೃದ್ಧಿ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಮತ್ತು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
'ಸಮೃದ್ಧ ಮತ್ತು ಬಲಿಷ್ಠ ಗ್ರಾಮೀಣ ಭಾರತ'ವನ್ನು ನಿರ್ಮಿಸುವ ಧ್ಯೇಯ ಹೊಂದಿರುವುದಾಗಿದೆ ಎಂದು ಕರಡು ಮಸೂದೆ ಹೇಳುತ್ತದೆ ಎಂದು ಪಿಟಿಐ ತಿಳಿಸಿದೆ. ಈ ಮಸೂದೆಯನ್ನು ಈಗಾಗಲೇ ಲೋಕಸಭಾ ಸದಸ್ಯರಲ್ಲಿ ವಿತರಿಸಲಾಗಿದೆ. ಈ ಅಧಿವೇಶನದಲ್ಲೇ ಸದನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಂದು ಪ್ರಾರಂಭವಾಗಿ ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಮಸೂದೆ ಸಂಸತ್‌ನಲ್ಲಿ ಮಂಡನೆಯಾಗಿ ಭಾರೀ ಕೋಲಾಹಲವನ್ನೇ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೊದಲಿಗೆ ಬೇರೆ ಹೆಸರು ಕೇಳಿಬಂದಿತ್ತು
ಇನ್ನು ನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರ ಕೆಲವು ದಿನಗಳಿಂದಲೇ ಭಾರೀ ಚರ್ಚೆಗೆ ಕಾರಣವಾಗುತ್ತಿತ್ತು.ಈ ಹಿಂದೆ ಈ ಯೋಜನೆಗೆ ಪೂಜ್ಯ ಬಾಪು ಗ್ರಾಮೀಣ ಉದ್ಯೋಗ ಯೋಜನೆ ಎಂದು ಹೆಸರು ಬದಲಾಯಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಆ ಹೆಸರನ್ನೂ ಕೈ ಬಿಟ್ಟು ಸರ್ಕಾರ ಬೇರೆಯದ್ದೇ ಹೆಸರನ್ನು ಆಯ್ಕೆ ಮಾಡಿದೆ.
ನರೇಗಾ ಯೋಜನೆ ಬಗ್ಗೆ
ಈ ಉದ್ಯೋಗ ಖಾತರಿ ಯೋಜನೆ ಮೊದಲು 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (NREGA) ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ನಂತರ 2009 ರಲ್ಲಿ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ‘Mahatma Gandhi’ ಎಂಬ ಪದ ಸೇರಿಸಿ MGNREGA ಎಂಬ ರೂಪಕ್ಕೆ ತಂದರು. ಆದರೂ ಇದು ನರೇಗಾ ಯೋಜನೆ ಎಂದೇ ಜನಜನಿತ. ಈ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಕನಿಷ್ಠ ಗ್ಯಾರಂಟಿ-ಬದ್ಧ ಕೆಲಸವನ್ನು ಒದಗಿಸುವುದು. ಅವರ ಆರ್ಥಿಕ ಪ್ರಗತಿಗೆ ಶ್ರಮಿಸುವ ಪ್ರಮುಖ ಉದ್ದೇಶವನ್ನು ನರೇಗಾ ಹೊಂದಿದೆ.

