ದೇಶದ ಮೊದಲ ನೇಚರ್ ಥೀಮ್ಡ್ ಏರ್‌ಪೋರ್ಟ್ ಟರ್ಮಿನಲ್- ಇದರ ವೈಶಿಷ್ಟ್ಯವೇನು?
ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಸ್ಸಾಂನ ಹೊಸ ಟರ್ಮಿನಲ್ ಇದು ದೇಶದ ಮೊಟ್ಟ ಮೊದಲ ನೇಚರ್ ಥೀಮ್ಡ್ ಏರ್‌ಪೋರ್ಟ್ ಟರ್ಮಿನಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ (LGBI) ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಹೊಸ ಟರ್ಮಿನಲ್, ಈಶಾನ್ಯ ಭಾರತದ ಅತಿದೊಡ್ಡ ವಿಮಾನ ನಿಲ್ದಾಣದ ಟರ್ಮಿನಲ್ ಎಂದು ಗುರುತಿಸಲ್ಪಟ್ಟಿದೆ. ಅಲ್ಲದೇ ಇದು ದೇಶದ ಮೊಟ್ಟ ಮೊದಲ ನೇಚರ್ ಥೀಮ್ಡ್ ಏರ್‌ಪೋರ್ಟ್ ಟರ್ಮಿನಲ್ ಆಗಿದೆ. ಇದು ಸಂಪರ್ಕ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಧಾನಮಂತ್ರಿಯವರು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಗುವಾಹಟಿಗೆ ಆಗಮಿಸಲಿದ್ದು, ನಂತರ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಹಾಗಿದ್ದರೆ ಈ ಟರ್ಮಿನಲ್‌ನ ವಿಶೇಷತೆ ಏನು? ಅಷ್ಟಕ್ಕೂ ನೇಚರ್ ಥೀಮ್ಡ್ ವಿಮಾನ ನಿಲ್ದಾಣ ಎಂದರೆ ಏನು?
ಸಂಪೂರ್ಣವಾಗಿ ಪ್ರಕೃತಿ ಪರಿಕಲ್ಪನೆಯಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣ ಆಗಿದೆ. ಅಂದರೆ ಈ ಏರ್‌ಪೋರ್ಟ್‌ನಲ್ಲಿ ಪ್ರವಾಸಿಗರಿಗೆ ಪ್ರಕೃತಿಯ ಅನುಭವ ನೀಡುತ್ತದೆ.
- ಬೃಹತ್ ವಿಸ್ತೀರ್ಣ: ತನ್ನ ವಿಶಿಷ್ಟ ವಿನ್ಯಾಸದಿಂದ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಡುತ್ತಿರುವ ಈ ಟರ್ಮಿನಲ್, ಪ್ರಸ್ತುತ ಇರುವ ಟರ್ಮಿನಲ್‌ಗಿಂತ ಏಳು ಪಟ್ಟು ದೊಡ್ಡದಾಗಿದೆ.
- ಸಾಮರ್ಥ್ಯ: ಈ ಟರ್ಮಿನಲ್ 2032 ರ ವೇಳೆಗೆ ವಾರ್ಷಿಕವಾಗಿ 13.1 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ನಿರೀಕ್ಷೆಯಿದೆ.
- ಪ್ರಾದೇಶಿಕ ಸಂಪರ್ಕ ಕೇಂದ್ರ: ಭಾರತ ಮತ್ತು ಆಗ್ನೇಯ ಏಷ್ಯಾ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರಾದೇಶಿಕ ಸಂಪರ್ಕ ಕೇಂದ್ರವಾಗಿ ಇದು ಕಾರ್ಯನಿರ್ವಹಿಸಲಿದೆ.
- ತಂತ್ರಜ್ಞಾನ: ಇದು ಗಂಟೆಗೆ 34 ವಿಮಾನಗಳ ಸಂಚಾರವನ್ನು (Air traffic movements) ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಈಶಾನ್ಯದಲ್ಲೇ ಅತಿ ಹೆಚ್ಚಿನ ಸಾಮರ್ಥ್ಯವಾಗಿದೆ. ಇಲ್ಲಿ ಸುಧಾರಿತ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅನ್ನು ಸಹ ಅಳವಡಿಸಲಾಗುವುದು.
ನೂತನ ಟರ್ಮಿನಲ್ ವಿಡಿಯೊ ಇಲ್ಲಿದೆ
ಪ್ರಕೃತಿ ಪ್ರೇರಿತ ವಿನ್ಯಾಸ
ಈ ಟರ್ಮಿನಲ್‌ನ ಗಾತ್ರ ಮತ್ತು ತಂತ್ರಜ್ಞಾನದಷ್ಟೇ ಅದರ ವಿನ್ಯಾಸವೂ ಗಮನ ಸೆಳೆಯುತ್ತಿದೆ. ಇದರ ವಿನ್ಯಾಸವು ಈಶಾನ್ಯ ಭಾರತದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಒಳಾಂಗಣ ವಿನ್ಯಾಸವು ಈ ಪ್ರದೇಶದ ಅಪರೂಪದ ಆರ್ಕಿಡ್ ಹೂಗಳಿಂದ ತುಂಬಿದೆ. ಬಿದಿರಿನ ವಿನ್ಯಾಸವನ್ನು ಬಳಸಲಾಗಿದೆ. "ಬಿದಿರು ಆರ್ಕಿಡ್" (Bamboo Orchids) ಎಂಬ ವಿಷಯದ ಅಡಿಯಲ್ಲಿ ವಿನ್ಯಾಸಗೊಳಿಸಲಾದ ಇದು, ಭಾರತದ ಮೊದಲ ಪ್ರಕೃತಿ ಆಧಾರಿತ (Nature-themed) ವಿಮಾನ ನಿಲ್ದಾಣದ ಟರ್ಮಿನಲ್ ಆಗಿದೆ.
ಅಸ್ಸಾಂನಲ್ಲಿ 'ಕೊಪೌ ಫೂಲ್' (Kopou Phool) ಎಂದು ಕರೆಯಲ್ಪಡುವ ಸ್ಥಳೀಯ ಆರ್ಕಿಡ್‌ಗಳು ಇಲ್ಲಿವೆ. ಈ ಟರ್ಮಿನಲ್ 2,000ಕ್ಕೂ ಹೆಚ್ಚು ಜಾತಿಯ ಸಸ್ಯಗಳನ್ನು ಹೊಂದಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ಪ್ರೇರಿತವಾದ ವಿಶೇಷ ವಲಯ ಮತ್ತು ಮಾಜುಲಿ ದ್ವೀಪವನ್ನು ಪ್ರತಿನಿಧಿಸುವ ಕಲಾಕೃತಿಗಳನ್ನು ಒಳಗೊಂಡಿದೆ.
ಈ ಟರ್ಮಿನಲ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ 'ಬಿದಿರಿನ ವಾಲ್ಟ್' (Bamboo vault), ಇದು ಕಟ್ಟಡಕ್ಕೆ ಬೇರೆಯದ್ದೇ ಆದ ರೂಪ ನೀಡುತ್ತದೆ. ಈಶಾನ್ಯದ ಸಾಂಸ್ಕೃತಿಕ ಸಂಕೇತವೆಂದು ಪರಿಗಣಿಸಲಾದ ಬಿದಿರನ್ನು ವಿನ್ಯಾಸದಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಈ ವಾಲ್ಟ್ ಪ್ರದೇಶವನ್ನು ಬಹುಮುಖಿ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಲಾಗಿದ್ದು, ಇದು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ವಿನ್ಯಾಸವು ಸ್ಥಳೀಯವಾಗಿ ಬೆಳೆದ ಸುಮಾರು 140 ಮೆಟ್ರಿಕ್ ಟನ್ ಈಶಾನ್ಯದ ಬಿದಿರನ್ನು ಒಳಗೊಂಡಿದೆ. ಅಲ್ಲದೆ, ಕಾಜಿರಂಗದಿಂದ ಪ್ರೇರಿತವಾದ ಹಸಿರು ಭೂದೃಶ್ಯಗಳು, 'ಜಾಪಿ' (Japi) ಲಾಂಛನಗಳು, ಐಕಾನಿಕ್ ಖಡ್ಗಮೃಗದ ಸಂಕೇತ ಮತ್ತು ಕೊಪೌ ಹೂವನ್ನು ಪ್ರತಿಬಿಂಬಿಸುವ 57 ಆರ್ಕಿಡ್‌ಗಳಿರುವ ಸ್ತಂಭಗಳನ್ನು ಇದು ಹೊಂದಿದೆ.
ಸುಮಾರು ಒಂದು ಲಕ್ಷ ಸ್ಥಳೀಯ ತಳಿಯ ಸಸ್ಯಗಳನ್ನು ಹೊಂದಿರುವ ವಿಶಿಷ್ಟ "ಸ್ಕೈ ಫಾರೆಸ್ಟ್" (Sky Forest), ಆಗಮಿಸುವ ಪ್ರಯಾಣಿಕರಿಗೆ ಕಾಡಿನೊಳಗೆ ಇರುವಂತಹ ತನ್ಮಯತೆಯ ಅನುಭವವನ್ನು ನೀಡುತ್ತದೆ.
ಡಿಜಿಯಾತ್ರಾ ಗೇಟುಗಳು
ಸುಮಾರು 1.4 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಹರಡಿರುವ ಈ ನೂತನ ಸಮಗ್ರ ಟರ್ಮಿನಲ್ ಕಟ್ಟಡವು ವಾರ್ಷಿಕ 1.3 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ರನ್‌ವೇ, ಏರ್‌ಫೀಲ್ಡ್ ಸಿಸ್ಟಮ್‌ಗಳು ಮತ್ತು ಟ್ಯಾಕ್ಸಿವೇಗಳನ್ನು ಪ್ರಮುಖವಾಗಿ ಮೇಲ್ದರ್ಜೆಗೇರಿಸಲಾಗಿದೆ.
ಹೊಸ ಟರ್ಮಿನಲ್ ಡಿಜಿಟಲ್ ಏಕೀಕರಣ ಮತ್ತು ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಒತ್ತು ನೀಡಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನಾಲ್ಕು 'ಡಿಜಿಯಾತ್ರಾ' (DigiYatra) ಗೇಟ್‌ಗಳು ಸೇರಿದಂತೆ ಒಟ್ಟು 14 ಪ್ರವೇಶ ದ್ವಾರಗಳಿವೆ. ವೇಗದ ಮತ್ತು ತೊಂದರೆಯಿಲ್ಲದ ಭದ್ರತಾ ತಪಾಸಣೆಗಾಗಿ ಫುಲ್-ಬಾಡಿ ಸ್ಕ್ಯಾನರ್‌ಗಳು, ಸ್ವಯಂಚಾಲಿತ ಲಗೇಜ್ ನಿರ್ವಹಣೆ, ಫಾಸ್ಟ್-ಟ್ರಾಕ್ ಇಮಿಗ್ರೇಷನ್ ಮತ್ತು ಎಐ (AI) ಚಾಲಿತ ಕಾರ್ಯಾಚರಣೆಗಳು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ.
ಪ್ರಧಾನಿಯ ಇತರೆ ಕಾರ್ಯಕ್ರಮಗಳು
ತಮ್ಮ ಎರಡು ದಿನಗಳ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿಯವರು ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿದೇಶಿಯ ಮುಕ್ತ ಅಸ್ಸಾಂ ಮತ್ತು ರಾಜ್ಯದ ಅಸ್ಮಿತೆಯ ರಕ್ಷಣೆಗಾಗಿ ನಡೆದ ಐತಿಹಾಸಿಕ 'ಅಸ್ಸಾಂ ಚಳವಳಿ'ಯ ಹುತಾತ್ಮರಿಗೆ ಗೌರವ ಸಲ್ಲಿಸಲು ಅವರು 'ಸ್ವಾಹಿದ್ ಸ್ಮಾರಕ್ ಕ್ಷೇತ್ರ'ಕ್ಕೆ ಭೇಟಿ ನೀಡಲಿದ್ದಾರೆ.
ನಂತರದ ದಿನದಲ್ಲಿ, ಅವರು ದಿಬ್ರುಗಢದ ನಾಮರೂಪ್‌ನಲ್ಲಿರುವ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್ ಕಾರ್ಪೊರೇಷನ್ ಲಿಮಿಟೆಡ್ (BVFCL) ಆವರಣದಲ್ಲಿ ಹೊಸ ಬ್ರೌನ್‌ಫೀಲ್ಡ್ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.