ಘೋರ ದುರಂತ! ರಾಜಧಾನಿ ಎಕ್ಸ್‌ಪ್ರೆಸ್ ಡಿಕ್ಕಿ; 8 ಆನೆಗಳು ಬಲಿ- ಹಳಿ ತಪ್ಪಿದ ಬೋಗಿಗಳು
ಹೊಜೈನಲ್ಲಿ ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಬೆಳಗ್ಗಿನ ಜಾವ 2:17ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಮರಿ ಗಾಯಗೊಂಡಿದೆ.
ಅಸ್ಸಾಂನಲ್ಲಿ ಬೆಳ್ಳಂ ಬೆಳಗ್ಗೆ ಹಳಿ ದಾಟುತ್ತಿದ್ದ ಆನೆಗಳ ಹಿಂಡಿಗೆ ರೈಲು ಡಿಕ್ಕಿ ಹೊಡೆದಿದ್ದು, ಎಂಟು ಆನೆಗಳು ಮೃತಪಟ್ಟಿವೆ. ಹೊಜೈನಲ್ಲಿ ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಬೆಳಗ್ಗಿನ ಜಾವ 2:17ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಮರಿ ಗಾಯಗೊಂಡಿದೆ. ಪರಿಣಾಮವಾಗಿ ಐದು ಬೋಗಿಗಳು ಹಳಿ ತಪ್ಪಿದ್ದು, ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಯಾವುದೇ ಪ್ರಯಾಣಿಕರಿಗೆ ಸಾವುನೋವು ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಮಿಜೋರಾಂನ ಸೈರಂಗ್ (ಐಜ್ವಾಲ್ ಬಳಿ) ಅನ್ನು ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ಗೆ ಸಂಪರ್ಕಿಸುತ್ತದೆ. ದುರಂತ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿ.ಮೀ ದೂರದಲ್ಲಿದೆ. ಘಟನೆಯ ನಂತರ, ರೈಲ್ವೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸ್ಥಳಕ್ಕೆ ಧಾವಿಸಿದರು.
ರೈಲು ಸೇವೆಗಳು ಅಸ್ತವ್ಯಸ್ತ
ಆನೆಗಳ ಮೃತದೇಹದ ಭಾಗಗಳು ಹಳಿಗಳ ಮೇಲೆ ಚದುರಿ ಹೋಗಿದ್ದ ಕಾರಣ ರೈಲುಗಳು ಹಳಿ ತಪ್ಪಿದೆ. ಇನ್ನು ಈ ಘಟನೆಯಿಂದ ಅಸ್ಸಾಂ ಮತ್ತು ಈಶಾನ್ಯದ ಇತರ ಭಾಗಗಳಿಗೆ ರೈಲು ಸೇವೆಗಳು ಬಾಧಿತವಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, “ಈಶಾನ್ಯ ಗಡಿನಾಡು ರೈಲ್ವೆಯ ಲುಮ್ಡಿಂಗ್ ವಿಭಾಗದ ಜಮುನಾಮುಖ್-ಕಂಪುರ ವಿಭಾಗದಲ್ಲಿ ಡಿಸೆಂಬರ್ 20 ರಂದು ಬೆಳಗಿನ ಜಾವ 2.17 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೈಲು ಸಂಖ್ಯೆ 20507 ಡಿಎನ್ ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ಹಳಿಯಲ್ಲಿ ಆನೆಗಳನ್ನು ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ ಮತ್ತು ಐದು ಬೋಗಿಗಳು ಹಳಿ ತಪ್ಪಿದವು. ಘಟನೆಯ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶವನ್ನು ಗೊತ್ತುಪಡಿಸಿದ ಆನೆ ಕಾರಿಡಾರ್ ಎಂದು ಗುರುತಿಸಲಾಗಿಲ್ಲ” ಎಂದುತಿಳಿಸಿದ್ದಾರೆ.
ಪ್ರಯಾಣಿಕರು ಸುರಕ್ಷಿತ
ಇನ್ನು ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.ಅದೃಷ್ಟವಶಾತ್ ಸಣ್ಣಪುಟಾಟ ಗಾಯಗಳೂ ಆಗಿಲ್ಲ. ಹಳಿಯಲ್ಲಿ ಆನೆಗಳು ಇರುವುದನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ. ಆದರೂ ಎಂಟು ಆನೆಗಳು ಬಲಿಯಾಗಿವೆ ಎಂದು ವರದಿಯಾಗಿದೆ.