ಪಶ್ಚಿಮ ಬಂಗಾಳ: SIR ಕರಡು ಪಟ್ಟಿ ಪ್ರಕಟದ ನಂತರ ನಾಡಿಯಾದಲ್ಲಿ ಪ್ರಧಾನಿ ಮೋದಿಯವರ ಮೊದಲ ಸಾರ್ವಜನಿಕ ಸಭೆ
x

ಕರಡು SIR ಪಟ್ಟಿಗಳು ಪ್ರಕಟವಾದ ನಂತರ ಇದು ಮೋದಿ ಅವರ ಮೊದಲ ರಾಜ್ಯ ಭೇಟಿಯಾಗಿದೆ. 

ಪಶ್ಚಿಮ ಬಂಗಾಳ: 'SIR' ಕರಡು ಪಟ್ಟಿ ಪ್ರಕಟದ ನಂತರ ನಾಡಿಯಾದಲ್ಲಿ ಪ್ರಧಾನಿ ಮೋದಿಯವರ ಮೊದಲ ಸಾರ್ವಜನಿಕ ಸಭೆ

ಇತ್ತೀಚೆಗೆ ಪ್ರಕಟವಾದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕರಡು ಪಟ್ಟಿಯು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕರಡು ಪಟ್ಟಿಯಲ್ಲಿ ಸುಮಾರು 58.2 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ.


Click the Play button to hear this message in audio format

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕರಡು ಪಟ್ಟಿ ಪ್ರಕಟಗೊಂಡ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಶನಿವಾರ (ಡಿ.20) ನಾಡಿಯಾ ಜಿಲ್ಲೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಲಿದ್ದು, ಇದೇ ವೇದಿಕೆಯಲ್ಲಿ ಸುಮಾರು 3,200 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಇತ್ತೀಚೆಗೆ ಪ್ರಕಟವಾದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕರಡು ಪಟ್ಟಿಯು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕರಡು ಪಟ್ಟಿಯಲ್ಲಿ ಸುಮಾರು 58.2 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ. ಇದು ಒಟ್ಟು ಮತದಾರರ ಸಂಖ್ಯೆಯನ್ನು 7.08 ಕೋಟಿಗೆ ಇಳಿಸಿದೆ. ಇದರ ಜೊತೆಗೆ, ಸುಮಾರು 1.36 ಕೋಟಿ ನಮೂದುಗಳಲ್ಲಿ 'ತಾರ್ಕಿಕ ವ್ಯತ್ಯಾಸಗಳು' ಕಂಡುಬಂದಿದ್ದು, 30 ಲಕ್ಷ ಮತದಾರರನ್ನು 'ಅನ್‌ಮ್ಯಾಪ್ಡ್‌' ಎಂದು ಗುರುತಿಸಲಾಗಿದೆ. ಮುಂದಿನ 45 ದಿನಗಳಲ್ಲಿ ಇವರ ಪರಿಶೀಲನೆ ನಡೆಯಬೇಕಿದೆ.

ವತುಲಾ ಸಮುದಾಯದಲ್ಲಿ ಆತಂಕ

ಈ ಬೆಳವಣಿಗೆಯು ಬಾಂಗ್ಲಾದೇಶದಿಂದ ವಲಸೆ ಬಂದು ನೆಲೆಸಿರುವ ದಲಿತ ಹಿಂದೂ ಸಮುದಾಯವಾದ 'ಮತುಲಾ' ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸಿದೆ. ದಾಖಲೆಗಳ ಕೊರತೆಯಿಂದ ತಮ್ಮ ಹೆಸರು ಪಟ್ಟಿಯಿಂದ ಅಳಿಸಿಹೋಗಬಹುದು ಮತ್ತು ಮತದಾನದ ಹಕ್ಕಿನಿಂದ ವಂಚಿತರಾಗಬಹುದು ಎಂಬ ಭೀತಿ ಈ ಸಮುದಾಯದಲ್ಲಿದೆ. ಈ ಸಮುದಾಯವು ರಾಜ್ಯದ 294 ವಿಧಾನಸಭಾ ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನಾಡಿಯಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಮತುಲಾ ಸಮುದಾಯದ ಜನಸಂಖ್ಯೆ ದಟ್ಟವಾಗಿದ್ದು, ಪ್ರಧಾನಿಯವರು ರಣಘಾಟ್‌ನ ತಾಹೇರ್‌ಪುರದಲ್ಲಿ ನಡೆಸಲಿರುವ ಸಭೆಯಲ್ಲಿ ಈ ಸಮುದಾಯಕ್ಕೆ ಅಭಯ ನೀಡುವ ನಿರೀಕ್ಷೆಯಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದಾರೆ. ರಣಘಾಟ್ ಲೋಕಸಭಾ ಸಂಸದ ಜಗನ್ನಾಥ್ ಸರ್ಕಾರ್ ಮಾತನಾಡಿ, "ಮತುಲಾ ಸಮುದಾಯದಲ್ಲಿ ಉದ್ದೇಶಪೂರ್ವಕವಾಗಿ ಭಯ ಹುಟ್ಟಿಸಲಾಗುತ್ತಿದೆ. ಪ್ರಧಾನಿಯವರ ಸಂದೇಶವು ಈ ಎಲ್ಲಾ ಸುಳ್ಳು ಸುದ್ದಿಗಳಿಗೆ ತೆರೆ ಎಳೆಯಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ವಿರೋಧ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ SIR ಪ್ರಕ್ರಿಯೆಯನ್ನು ವಿರೋಧಿಸುತ್ತಿದೆ. ಈ ಪ್ರಕ್ರಿಯೆಯನ್ನು ಆತುರದಲ್ಲಿ ನಡೆಸಲಾಗುತ್ತಿದ್ದು, ಲಕ್ಷಾಂತರ ಅರ್ಹ ಮತದಾರರನ್ನು, ಅದರಲ್ಲೂ ವಿಶೇಷವಾಗಿ ನಿರಾಶ್ರಿತ ಹಿಂದೂಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ನಾಡಿಯಾ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದೆ.

ಪ್ರಧಾನಿ ಮೋದಿ ಅವರು ತಮ್ಮ ಭೇಟಿಯ ಬಗ್ಗೆ 'X' ಖಾತೆಯಲ್ಲಿ ಬರೆದುಕೊಂಡಿದ್ದು, "ಪಶ್ಚಿಮ ಬಂಗಾಳದ ಜನತೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಆದರೆ, ಟಿಎಂಸಿ ಸರ್ಕಾರದ ದುರಾಡಳಿತದಿಂದಾಗಿ ನೊಂದಿದ್ದಾರೆ. ಟಿಎಂಸಿಯ ಲೂಟಿ ಮತ್ತು ದಬ್ಬಾಳಿಕೆ ಮಿತಿಮೀರಿದೆ. ಹೀಗಾಗಿ ಬಿಜೆಪಿಯೇ ಜನರ ಆಶಾಕಿರಣವಾಗಿದೆ," ಎಂದು ಹೇಳಿದ್ದಾರೆ.

ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಸಾರ್ವಜನಿಕ ಸಭೆಯ ಜೊತೆಗೆ, ಪ್ರಧಾನಿ ಮೋದಿ ಅವರು ರಾಜ್ಯದ ಸಂಪರ್ಕ ಜಾಲವನ್ನು ಬಲಪಡಿಸುವ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. NH-34ರ ಬಾರಾಜಗುಳಿ-ಕೃಷ್ಣಾನಗರ ವಿಭಾಗ: ನಾಡಿಯಾ ಜಿಲ್ಲೆಯಲ್ಲಿ ಹಾದುಹೋಗುವ 66.7 ಕಿ.ಮೀ ಉದ್ದದ ಚತುಷ್ಪಥ ರಸ್ತೆಯ ಲೋಕಾರ್ಪಣೆ ಮಾಡಲಿದ್ದು. ಬಳಿಕ NH-34ರ ಬಾರಾಸತ್-ಬಾರಾಜಗುಳಿ ವಿಭಾಗದ ಉತ್ತರ 24 ಪರಗಣ ಜಿಲ್ಲೆಯಲ್ಲಿ 17.6 ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಒಟ್ಟು 3,200 ಕೋಟಿ ರೂ. ವೆಚ್ಚದ ಈ ಯೋಜನೆಗಳು ದಕ್ಷಿಣ ಬಂಗಾಳ (ಕೋಲ್ಕತ್ತಾ) ಮತ್ತು ಉತ್ತರ ಬಂಗಾಳದ (ಸಿಲಿಗುರಿ) ನಡುವಿನ ಸಂಪರ್ಕವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವ ಈ ಭೇಟಿ ಮತ್ತು ಸಾರ್ವಜನಿಕ ಸಭೆಯು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

Read More
Next Story