ಕಾರ್ಮಿಕ ಸಂಹಿತೆ|ನ್ಯಾ.ಗೋಪಾಲಗೌಡ ನೇತೃತ್ವದಲ್ಲಿ ಅಧ್ಯಯನಕ್ಕೆ ಸಮಿತಿ ರಚಿಸಿದ ಕೇರಳ ಸರ್ಕಾರ
ಕರ್ನಾಟಕದವರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಸಮಿತಿಯ ಅಧ್ಯಕ್ಷತೆ ವಹಿಸಲಿದ್ದು, ಪ್ರೊ.ಶ್ಯಾಮ್ ಸುಂದರ್ ಮತ್ತು ವರ್ಕಿಚನ್ ಪೆಟ್ಟಾ ಅವರು ಸದಸ್ಯರಾಗಿದ್ದಾರೆ.
ಕೇಂದ್ರ ಕಾರ್ಮಿಕ ಸಂಹಿತೆಗಳಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೇರಳ ಸರ್ಕಾರವು ಪರಿಷ್ಕೃತ ಸಂಹಿತೆಗಳ ಅಧ್ಯಯನ, ಅವುಗಳ ಪರಿಣಾಮ ವಿಶ್ಲೇಷಣೆ ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ನೇಮಕ ಮಾಡಿದೆ.
ತಿರುವನಂತಪುರಂನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಮಿಕ ಸಮಾವೇಶದಲ್ಲಿ ಕಾರ್ಮಿಕ ಸಚಿವ ವಿ. ಶಿವಂಕುಟ್ಟಿ ಅವರು ಸಮಿತಿ ನೇಮಕದ ಘೋಷಣೆ ಮಾಡಿದರು.
ಕರ್ನಾಟಕದವರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಸಮಿತಿಯ ಅಧ್ಯಕ್ಷತೆ ವಹಿಸಲಿದ್ದು, ಪ್ರೊ.ಶ್ಯಾಮ್ ಸುಂದರ್ ಮತ್ತು ವರ್ಕಿಚನ್ ಪೆಟ್ಟಾ ಅವರು ಸದಸ್ಯರಾಗಿದ್ದಾರೆ. ಈ ಸಮಿತಿಯು ಒಂದು ತಿಂಗಳೊಳಗೆ ಅಧ್ಯಯನ ನಡೆಸಿ, ಪ್ರಾಥಮಿಕ ವರದಿ ಸಲ್ಲಿಸಲಿದೆ.
ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹರಣ ಮಾಡುವಂತಹ ಕೇಂದ್ರದ ಕಾರ್ಮಿಕ ಕಾನೂನುಗಳ ವಿರುದ್ಧ ಹೋರಾಟ ಮುಂದುವರೆಸಲು ಸಮಾವೇಶದಲ್ಲಿ ಒಮ್ಮತದ ಪ್ರಸ್ತಾವ ಅಂಗೀಕರಿಸಲಾಯಿತು.
ದೇಶದಲ್ಲಿ ಈವರೆಗೆ ಜಾರಿಯಲ್ಲಿದ್ದ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಮಾಡಿರುವುದು ಉದ್ಯೋಗಿಗಳಿಗೆ ಮಾರಕವಾಗಿವೆ. ಈ ಸಂಹಿತೆಗಳು ಕಾರ್ಪೋರೇಟ್ ಸಂಸ್ಥೆಗಳ ಹಿತಾಸಕ್ತಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಸರ್ಕಾರದ ಕ್ರಮವು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ವಿರುದ್ಧವಾಗಿವೆ ಎಂದು ಶಿವಂಕುಟ್ಟಿ ಟೀಕಿಸಿದ್ದಾರೆ.
ಬಹುತೇಕ ರಾಜ್ಯಗಳು ಕಾರ್ಮಿಕ ಸಂಹಿತೆಗಳ ಅನುಸಾರವಾಗಿ ತಮ್ಮ ಕಾನೂನುಗಳಲ್ಲಿ ತಿದ್ದುಪಡಿ ಮಾಡಿಕೊಂಡಿದ್ದರೂ ಕೇರಳವು ಯಾವುದೇ ಕಾರ್ಮಿಕ ವಿರೋಧಿ ತಿದ್ದುಪಡಿ ಮಾಡುವುದಿಲ್ಲ ಎಂಬ ದೃಢ ನಿಲುವು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಕಾರ್ಮಿಕರ ಹಕ್ಕು ರಕ್ಷಣೆ, ಐಟಿ ವಲಯದವರು, ಗಿಗ್ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಸೇರಿ ಎಲ್ಲಾ ವರ್ಗದವರ ಸುರಕ್ಷತೆ ಖಚಿತಪಡಿಸುವಲ್ಲಿ ಕೇರಳವು ಮಾದರಿ ರಾಜ್ಯವಾಗಿ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ.