ಮುಂಬೈನಲ್ಲಿ ನಟಿ ನೋರಾ ಫತೇಹಿ ಗುದ್ದಿದ ಕಾರು, ನಟಿಗೆ ಸಣ್ಣಪುಟ್ಟ ಗಾಯ

ನೋರಾ ಅವರು ಸನ್‌ಬರ್ನ್ ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರ ಕಾರಿಗೆ ಡಿಕ್ಕಿ ಹೊಡೆದ ವ್ಯಕ್ತಿಯನ್ನು ವಿನಯ್ ಸಕ್ಪಾಲ್ (27) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

Update: 2025-12-21 05:30 GMT

ನಟಿ ನೋರಾ ಫತೇಹಿ ಹಾಗೂ ಅಪಘಾತವಾಗಿರುವ ಕಾರು

Click the Play button to listen to article

ಬಾಲಿವುಡ್‌ನ ಜನಪ್ರಿಯ ನಟಿ ಮತ್ತು ಡ್ಯಾನ್ಸರ್ ನೋರಾ ಫತೇಹಿ ಅವರ ಕಾರಿಗೆ ಪಾನಮತ್ತ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಮುಂಬೈನ ಪಶ್ಚಿಮ ಉಪನಗರದ ಅಂಬೋಲಿ ಲಿಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ನೋರಾ ಅವರು ಸನ್‌ಬರ್ನ್ ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರ ಕಾರಿಗೆ ಡಿಕ್ಕಿ ಹೊಡೆದ ವ್ಯಕ್ತಿಯನ್ನು ವಿನಯ್ ಸಕ್ಪಾಲ್ (27) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎಂದು ಶಂಕಿಸಲಾಗಿದೆ.

ಅಪಘಾತದ ಭೀಕರತೆ ಹಂಚಿಕೊಂಡ ನಟಿ

ಅಪಘಾತದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ, "ಇದು ತುಂಬಾ ಭಯಾನಕ ಮತ್ತು ಆಘಾತಕಾರಿ ಕ್ಷಣವಾಗಿತ್ತು. ಡಿಕ್ಕಿಯ ರಭಸಕ್ಕೆ ನಾನು ಕಾರಿನೊಳಗೆ ಹಾರಿ ಕಿಟಕಿಗೆ ತಲೆಯನ್ನು ಬಲವಾಗಿ ಚಚ್ಚಿಕೊಂಡೆ. ನನ್ನ ಕಣ್ಣೆದುರೇ ಸಾವು ಕಂಡಂತಾಯಿತು," ಎಂದು ಹೇಳಿಕೊಂಡಿದ್ದಾರೆ. ತಮಗೆ ಸಣ್ಣಪುಟ್ಟ ಗಾಯಗಳು ಮತ್ತು ಊತ ಉಂಟಾಗಿದ್ದು, ಲಘುವಾಗಿ ತಲೆಗೆ ಪೆಟ್ಟು ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ವೈದ್ಯಕೀಯ ಚಿಕಿತ್ಸೆ ನಂತರ ಕಾರ್ಯಕ್ರಮಕ್ಕೆ ಹಾಜರು

ಅಪಘಾತದ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ವಿಶೇಷವೆಂದರೆ, ಇಷ್ಟೆಲ್ಲಾ ಆಘಾತದ ನಡುವೆಯೂ ನೋರಾ ಅವರು ತಮ್ಮ ವೃತ್ತಿಪರತೆಯನ್ನು ಮೆರೆದಿದ್ದು, ವೈದ್ಯಕೀಯ ತಪಾಸಣೆಯ ನಂತರ ನಿಗದಿಯಂತೆ ಸನ್‌ಬರ್ನ್ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

"ನಾನು ಬದುಕಿರುವುದೇ ದೊಡ್ಡ ಅದೃಷ್ಟ. ದಯವಿಟ್ಟು ಯಾರೂ ಕುಡಿದು ವಾಹನ ಚಲಾಯಿಸಬೇಡಿ. ಮಧ್ಯಾಹ್ನ 3 ಗಂಟೆಗೆ ಇಂತಹ ಘಟನೆ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ," ಎಂದು ನೋರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ಚಾಲಕನ ವಿರುದ್ಧ ಅಜಾಗರೂಕತೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Tags:    

Similar News