ಇಲ್ಲಿದೆ ಶುಭಸುದ್ದಿ; ಮಾಜಿ ಅಗ್ನಿವೀರರಿಗೆ ಬಿಎಸ್‌ಎಫ್ ನೇಮಕದಲ್ಲಿ ಶೇ.50ರಷ್ಟು ಮೀಸಲಾತಿ
ಬಿಎಸ್‌ಎಫ್ ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) ನೇಮಕಾತಿ ನಿಯಮಗಳು-2015ಕ್ಕೆ ತಿದ್ದುಪಡಿ ತರುವ ಮೂಲಕ ಈ ಪರಿಷ್ಕೃತ ಕೋಟಾವನ್ನು ಜಾರಿಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಗಡಿ ಭದ್ರತಾ ಪಡೆಯ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಶೇ.10 ರಿಂದ ಶೇ.50ಕ್ಕೆ ಹೆಚ್ಚಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.
ಬಿಎಸ್‌ಎಫ್ ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) ನೇಮಕಾತಿ ನಿಯಮಗಳು-2015ಕ್ಕೆ ತಿದ್ದುಪಡಿ ತರುವ ಮೂಲಕ ಈ ಪರಿಷ್ಕೃತ ಕೋಟಾವನ್ನು ಜಾರಿಗೊಳಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಅಗ್ನಿವೀರರ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಸಿಗಲಿದೆ. ನಂತರದ ಬ್ಯಾಚ್‌ಗಳ ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ಸಡಿಲಿಕೆ ನೀಡಲಾಗುವುದು.
ಪ್ರಮುಖವಾಗಿ, ಮಾಜಿ ಅಗ್ನಿವೀರರಿಗೆ ದೈಹಿಕ ಗುಣಮಟ್ಟ ಪರೀಕ್ಷೆ ಮತ್ತು ದೈಹಿಕ ದಕ್ಷತಾ ಪರೀಕ್ಷೆಗಳಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ನೇರ ನೇಮಕಾತಿಯ ಮೂಲಕ ಪ್ರತಿ ವರ್ಷ ಭರ್ತಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಮಾಜಿ ಅಗ್ನಿವೀರರಿಗೆ ಮೀಸಲಿಡಲಾಗುತ್ತದೆ. ಉಳಿದಂತೆ ಶೇ.10ರಷ್ಟು ಮಾಜಿ ಸೈನಿಕರಿಗೆ ಮತ್ತು ಶೇ.3ರಷ್ಟು ಕಾಂಬ್ಯಾಟೈಸ್ಡ್ ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ಹುದ್ದೆಗಳಿಗೆ ಮೀಸಲಿಡಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ.
ಎರಡು ಹಂತದ ನೇಮಕಾತಿ ಪ್ರಕ್ರಿಯೆ
ನೇಮಕಾತಿ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ
ಮೊದಲ ಹಂತ: ಮಾಜಿ ಅಗ್ನಿವೀರರಿಗಾಗಿ ಮೀಸಲಿಡಲಾದ ಶೇ.50ರಷ್ಟು ಹುದ್ದೆಗಳ ನೇಮಕಾತಿಯನ್ನು ನೋಡಲ್ ಫೋರ್ಸ್ ನಡೆಸಲಿದೆ.
ಎರಡನೇ ಹಂತ: ಉಳಿದ ಶೇ.47ರಷ್ಟು ಹುದ್ದೆಗಳಿಗೆ (ಶೇ.10ರಷ್ಟು ಮಾಜಿ ಸೈನಿಕರು ಸೇರಿದಂತೆ) ಸಿಬ್ಬಂದಿ ನೇಮಕಾತಿ ಆಯೋಗವು (SSC) ಪರೀಕ್ಷೆ ನಡೆಸಲಿದೆ. ಒಂದು ವೇಳೆ ಮೊದಲ ಹಂತದಲ್ಲಿ ಅಗ್ನಿವೀರರ ಕೋಟಾದ ಹುದ್ದೆಗಳು ಭರ್ತಿಯಾಗದೇ ಉಳಿದಿದ್ದರೆ, ಅವುಗಳನ್ನು ಈ ಹಂತದಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಅಗ್ನಿಪಥ್ ಯೋಜನೆ ಹಿನ್ನೆಲೆ
ಸೇನಾಪಡೆಗಳ ವಯಸ್ಸಿನ ಸರಾಸರಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜೂನ್ 2022ರಲ್ಲಿ ಕೇಂದ್ರ ಸರ್ಕಾರ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಡಿ 17.5 ರಿಂದ 21 ವರ್ಷದೊಳಗಿನ ಯುವಕರು 4 ವರ್ಷಗಳ ಅವಧಿಗೆ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ನಾಲ್ಕು ವರ್ಷಗಳ ನಂತರ ಶೇ.25ರಷ್ಟು ಅಗ್ನಿವೀರರನ್ನು ಮಾತ್ರ ಖಾಯಂ ಮಾಡಿಕೊಂಡು, ಉಳಿದ ಶೇ.75ರಷ್ಟು ಮಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ. ಹೀಗೆ ಹೊರಬರುವ ಅಗ್ನಿವೀರರ ಭವಿಷ್ಯಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಮೀಸಲಾತಿ ಕಲ್ಪಿಸುತ್ತಿದೆ.