ಒಳನುಸುಳುಕೋರರ ರಕ್ಷಣೆಗಾಗಿ ಟಿಎಂಸಿ ‘ಎಸ್‌ಐಆರ್‌’ ವಿರೋಧಿಸುತ್ತಿದೆ: ಪ್ರಧಾನಿ ಮೋದಿ ಆರೋಪ

“ಬಂಗಾಳದಲ್ಲಿ ಆಡಳಿತ ಪಕ್ಷದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಮಿಷನ್ ಸಂಸ್ಕೃತಿಯು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ. ರಾಜ್ಯವು ‘ಮಹಾ ಜಂಗಲ್ ರಾಜ್’ ಕಾಲಕ್ಕೆ ಹಿಂದಿರುಗಿದೆ,” ಎಂದು ಪ್ರಧಾನಿ ಟೀಕಿಸಿದರು.

Update: 2025-12-20 13:19 GMT
ಪ್ರಧಾನಿ ನರೇಂದ್ರ ಮೋದಿ
Click the Play button to listen to article

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಒಳನುಸುಳುಕೋರರ ರಕ್ಷಣೆಯ ಸಲುವಾಗಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ರಾಣಾಘಾಟ್‌ನಲ್ಲಿ ಆಯೋಜಿತ ರ‍್ಯಾಲಿಯನ್ನು ವರ್ಚುಯಲ್‌ ಮೂಲಕ ಉದ್ದೇಶಿಸಿದ ಅವರು, ಟಿಎಂಸಿ ಪಕ್ಷವು ಭ್ರಷ್ಟಾಚಾರ ಹಾಗೂ ತುಷ್ಟೀಕರಣ ರಾಜಕೀಯದಲ್ಲಿ ಮುಳುಗಿದ್ದು, ರಾಜ್ಯದ ಜನರ ಸಮಸ್ಯೆಗಳನ್ನು ಕಡೆಗಣಿಸಿದೆ ಎಂದು ವಾಗ್ದಾಳಿ ನಡೆಸಿದರು.

“ಬಂಗಾಳದಲ್ಲಿ ಆಡಳಿತ ಪಕ್ಷದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಮಿಷನ್ ಸಂಸ್ಕೃತಿಯು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ. ಆಡಳಿತದಲ್ಲಿ ದುರವಸ್ಥೆ ಮನೆಮಾಡಿದ್ದು, ರಾಜ್ಯವು ‘ಮಹಾ ಜಂಗಲ್ ರಾಜ್’ ಕಾಲಕ್ಕೆ ಹಿಂದಿರುಗಿದೆ,” ಎಂದು ಪ್ರಧಾನಿ ಟೀಕಿಸಿದರು.

“ಟಿಎಂಸಿಯು ‘ಮೋದಿ ಗೋ ಬ್ಯಾಕ್’ ಎಂದು ಕೂಗುತ್ತದೆ, ಆದರೆ ಒಳನುಸುಳುಕೋರರನ್ನು ವಿರೋಧಿಸುವ ಧೈರ್ಯ ತೋರಿಸುತ್ತಿಲ್ಲ. ಅವರಿಗೆ ಒಳನುಸುಳುಕೋರರೇ ಪ್ರಿಯರು,” ಎಂದು ಅವರು ವ್ಯಂಗ್ಯವಾಡಿದರು.

’ಡಬಲ್ ಎಂಜಿನ್ ಸರ್ಕಾರ’ಕ್ಕೆ ಕರೆ

ಮುಂದಿನ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜನರು ಬೆಂಬಲ ನೀಡಬೇಕೆಂದು ಮನವಿ ಮಾಡಿದ ಮೋದಿ, “ಬಂಗಾಳದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಎರಡರಲ್ಲಿಯೂ ಬಿಜೆಪಿ ಆಡಳಿತ ಅಗತ್ಯ,” ಎಂದರು. ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಪಡೆದ ಗೆಲುವು ಬಂಗಾಳದಲ್ಲಿಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಿಕೆ ವ್ಯಕ್ತಪಡಿಸಿದರು.

“ಬಂಗಾಳದ ಬೀದಿಗಳು ಇಂದು ‘ಬಾಂಚ್ಟೆ ಚಾಯ್, ಬಿಜೆಪಿ ತಾಯ್’ (ಬದುಕಲು ನಮಗೆ ಬಿಜೆಪಿ ಬೇಕು) ಎಂಬ ಘೋಷಣೆಯಿಂದ ಮೊಳಗುತ್ತಿವೆ,” ಎಂದು ಪ್ರಧಾನಮಂತ್ರಿ ಹೇಳಿದರು.

ಮತುವಾ ಸಮುದಾಯದ ಭಾವನೆಗೆ ಸ್ಪಂದನೆ

ರಾಣಾಘಾಟ್‌ನ ತಾಹೇರ್‌ಪುರ ಪ್ರದೇಶದಲ್ಲಿ ನಡೆದ ಈ ರ‍್ಯಾಲಿಗೆ ಮತುವಾ ಸಮುದಾಯದ ಮತದಾರರ ಪ್ರಾಬಲ್ಯ ಇರುವುದರಿಂದ ರಾಜಕೀಯ ಮಹತ್ವ ಪಡೆದಿದೆ. ಎಸ್‌ಐಆರ್‌ ಅಭಿಯಾನ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಯ ನಂತರ ಮತುವಾ ಸಮುದಾಯದ ಮತದಾನದ ಹಕ್ಕಿಗೆ ಧಕ್ಕೆ ಉಂಟಾಗುವ ಭೀತಿ ಹೆಚ್ಚಿದೆ.

ಭಾಷಣದಲ್ಲಿ ಮೋದಿ ಅವರು ಮತುವಾ ಪಂಥದ ನಾಯಕರಾದ ಹರಿಚಂದ್ ಮತ್ತು ಗುರುಚಂದ್ ಠಾಕೂರ್ ಸೇರಿದಂತೆ ಚೈತನ್ಯ ಮಹಾಪ್ರಭು ಮತ್ತು ಜಯನಿತಾಯ್ ಸಂತರ ಸಾಧನೆಗಳನ್ನು ಸ್ಮರಿಸಿ, ಸಮುದಾಯದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.

ದಟ್ಟ ಮಂಜು ತೊಂದರೆ, ವರ್ಚುಯಲ್ ಭಾಷಣ

ತಾಹೇರ್‌ಪುರದ ರ‍್ಯಾಲಿ ಸ್ಥಳದಲ್ಲಿ ದಟ್ಟ ಮಂಜು ಕವಿದಿದ್ದರಿಂದ ಪ್ರಧಾನಿಯವರ ಹೆಲಿಕಾಪ್ಟರ್ ಇಳಿಯಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಅವರು ಕೊಲ್ಕತ್ತಾ ವಿಮಾನ ನಿಲ್ದಾಣದಿಂದಲೇ ವರ್ಚುಯಲ್ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದರು.

Tags:    

Similar News