'ಅಮುಲ್' ಮಾದರಿ ಅನುಸರಿಸಿದ 'ಭಾರತ್ ಟ್ಯಾಕ್ಸಿ': ಓಲಾ- ಊಬರ್‌ಗೆ ಹೊಸ ಸವಾಲು

ಖಾಸಗಿ ಕಂಪನಿಗಳು ವರ್ಷಗಟ್ಟಲೆ ರೈಡ್-ಮ್ಯಾಚಿಂಗ್ ಅಲ್ಗಾರಿದಮ್‌ಗಳಲ್ಲಿ ಹೂಡಿಕೆ ಮಾಡಿರುವ ಕಾರಣ, ತಂತ್ರಜ್ಞಾನವು ಭಾರತ್ ಟ್ಯಾಕ್ಸಿಗೆ ಸವಾಲಾಗಿದೆ.

Update: 2025-12-20 13:51 GMT
Click the Play button to listen to article

ದೇಶದ ರೈಡ್-ಹೇಲಿಂಗ್ (ಟ್ಯಾಕ್ಸಿ ಸೇವೆ) ವಲಯದಲ್ಲಿ ಕ್ರಾಂತಿಕಾರಿ ಹೆಜ್ಜೆಯಿಡಲು ಸಹಕಾರ ಸಚಿವಾಲಯದ ಬೆಂಬಲಿತ 'ಭಾರತ್ ಟ್ಯಾಕ್ಸಿ' ವೇದಿಕೆ ಸಿದ್ಧವಾಗಿದೆ. ಗುಜರಾತ್‌ನ ಯಶಸ್ವಿ 'ಅಮುಲ್' ಸಹಕಾರ ಮಾದರಿಯನ್ನೇ ಅನುಸರಿಸುತ್ತಿರುವ ಈ ಪ್ಲಾಟ್‌ಫಾರ್ಮ್, ಚಾಲಕರಿಗೆ ಹೆಚ್ಚಿನ ಆದಾಯ ಮತ್ತು ಪ್ರಯಾಣಿಕರಿಗೆ ಸರ್ಜ್ ದರ ರಹಿತ ಸೇವೆ ಒದಗಿಸುವ ಭರವಸೆ ನೀಡಿದೆ.

ಜನವರಿ 1ರಂದು ರಾಷ್ಟ್ರವ್ಯಾಪಿ ಕಾರ್ಯಾರಂಭ ಮಾಡಲು ಸಿದ್ಧವಾಗಿರುವ ಭಾರತ್ ಟ್ಯಾಕ್ಸಿಯು, ಈಗಾಗಲೇ ಆಯ್ದ ಪ್ರದೇಶಗಳಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಿದೆ. ಖಾಸಗಿ ಬಂಡವಾಳಕ್ಕಿಂತ ಹೆಚ್ಚಾಗಿ, ಇದು ಸಾಮೂಹಿಕ ಒಡೆತನದ ಮೂಲಕ ವಿಸ್ತರಣೆ ಮತ್ತು ವಿಶ್ವಾಸ ಗಳಿಸಲು ಹೊರಟಿದೆ.

ಚಾಲಕರೇ ವೇದಿಕೆಯ ನಿಜವಾದ ಮಾಲೀಕರು

ಭಾರತ್ ಟ್ಯಾಕ್ಸಿಯನ್ನು ನವದೆಹಲಿ ಮೂಲದ 'ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್' ನಿರ್ವಹಿಸುತ್ತಿದೆ. ಈ ಸಂಸ್ಥೆಯ ಅಧ್ಯಕ್ಷರಾಗಿ 'ಅಮುಲ್'ನ ವ್ಯವಸ್ಥಾಪಕ ನಿರ್ದೇಶಕರಾದ ಜಯನ್ ಮೆಹ್ತಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಬೆಂಬಲ ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ದೊಂದಿಗೆ ಇದರ ಏಕೀಕರಣವು ವೇದಿಕೆಗೆ ಬಲ ತುಂಬಿದೆ. ಸಹಕಾರ ಸಂಸ್ಥೆಯಾಗಿರುವ ಕಾರಣ, ಇಲ್ಲಿ ಯಾವುದೇ ಲಾಭದ ಉದ್ದೇಶದ ಖಾಸಗಿ ಕಂಪನಿ ಇರುವುದಿಲ್ಲ; ಬದಲಾಗಿ ಸಾವಿರಾರು ಚಾಲಕರೇ ಒಗ್ಗೂಡಿ ಸೇವೆ ಒದಗಿಸುತ್ತಾರೆ ಮತ್ತು ಮಾಲೀಕತ್ವ ಹೊಂದಿರುತ್ತಾರೆ.

ಚಾಲಕರಿಗೆ ಹೆಚ್ಚಿನ ಆದಾಯದ ಭರವಸೆ

ಭಾರತ್ ಟ್ಯಾಕ್ಸಿಯ ಪ್ರಮುಖ ಆಕರ್ಷಣೆ ಎಂದರೆ ಇದು ಶೂನ್ಯ ಕಮಿಷನ್ ಮಾದರಿಯನ್ನು ಹೊಂದಿದೆ. ಅಂದರೆ, ಓಲಾ ಮತ್ತು ಊಬರ್ನಂತಹ ಅಗ್ರಿಗೇಟರ್‌ಗಳು ವಿಧಿಸುವ ಶೇ. 20-30 ಕಮಿಷನ್ ದರವನ್ನು ಇಲ್ಲಿ ವಿಧಿಸಲಾಗುವುದಿಲ್ಲ. ಇದರಿಂದ ಚಾಲಕರು ತಮ್ಮ ದೈನಂದಿನ ಗಳಿಕೆಯ ಬಹುಪಾಲು ಅಂದರೆ ಶೇ. 80ರಿಂದ 100 ರಷ್ಟು ಆದಾಯ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಪ್ಲಾಟ್‌ಫಾರ್ಮ್ ನಿರ್ವಹಣಾ ವೆಚ್ಚಗಳಿಗಾಗಿ ಅಲ್ಪ ಪ್ರಮಾಣದ ಶುಲ್ಕವನ್ನು ವಿಧಿಸುವ ಸಾಧ್ಯತೆಯಿದ್ದರೂ, ಇದು ಖಾಸಗಿ ಕಂಪನಿಗಳಿಗಿಂತ ಗಣನೀಯವಾಗಿ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.

ಈ ಹೆಚ್ಚಿನ ಆದಾಯದ ಭರವಸೆಯಿಂದಾಗಿ, ಈ ಯೋಜನೆ ಪ್ರಕಟಣೆಯ ಕೇವಲ 10 ದಿನಗಳಲ್ಲಿ 51,000 ಕ್ಕೂ ಹೆಚ್ಚು ಚಾಲಕರು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಯಾಣಿಕರಿಗೆ ದರ ಏರಿಕೆಯಿಂದ ಮುಕ್ತಿ

ಪ್ರಯಾಣಿಕರ ದೃಷ್ಟಿಕೋನದಿಂದ, ಭಾರತ್ ಟ್ಯಾಕ್ಸಿಯು ಸ್ಥಿರ ದರಗಳು ಮತ್ತು ಸರ್ಜ್ ಶುಲ್ಕದಿಂದ ಸಂಪೂರ್ಣ ಮುಕ್ತಿ ನೀಡುವುದಾಗಿ ಭರವಸೆ ನೀಡಿದೆ. ಅಧಿಕ ಸಮಯ ಅಥವಾ ಪ್ರತಿಕೂಲ ಹವಾಮಾನದಲ್ಲಿ ದರಗಳು ಹೆಚ್ಚಾಗುವುದನ್ನು ಇದು ತಡೆಯುತ್ತದೆ. ಚಾಲಕರು ಕೇವಲ ಸೇವೆ ಒದಗಿಸುವವರಾಗಿರದೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರುತ್ತಾರೆ. ಚುನಾಯಿತ ಪ್ರತಿನಿಧಿಗಳು ಆಡಳಿತ ಮಂಡಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸವಾಲುಗಳು

ಖಾಸಗಿ ಕಂಪನಿಗಳು ವರ್ಷಗಟ್ಟಲೆ ರೈಡ್-ಮ್ಯಾಚಿಂಗ್ ಅಲ್ಗಾರಿದಮ್‌ಗಳಲ್ಲಿ ಹೂಡಿಕೆ ಮಾಡಿರುವ ಕಾರಣ, ತಂತ್ರಜ್ಞಾನವು ಭಾರತ್ ಟ್ಯಾಕ್ಸಿಗೆ ಸವಾಲಾಗಿದೆ. ಈ ಅಂತರವನ್ನು ಕಡಿಮೆ ಮಾಡಲು, ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್, ONDC-ಬೆಂಬಲಿತ 'ನಮ್ಮ ಯಾತ್ರಿ' (Namma Yatri) ಅಪ್ಲಿಕೇಶನ್‌ನ ತಂತ್ರಜ್ಞಾನವನ್ನೇ ಬಳಸುತ್ತಿದೆ.

ಹೊಸ ವೇದಿಕೆಯ ಯಶಸ್ಸು ಕೇವಲ ತಂತ್ರಜ್ಞಾನದ ಮೇಲೆ ಮಾತ್ರವಲ್ಲದೆ, ಚಾಲಕರ ನಡವಳಿಕೆ, ವಿವಾದಗಳ ನಿರ್ವಹಣೆ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ನಿಂತಿದೆ. ಅಮೆರಿಕಾದ ನ್ಯೂಯಾರ್ಕ್‌ನಲ್ಲಿ 2021 ರಿಂದ ಚಾಲಕರ ಒಡೆತನದ 'ಡ್ರೈವರ್ಸ್ ಕೋಆಪರೇಟಿವ್' ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಾಹರಣೆ ಇದೆ. 

Tags:    

Similar News