ಡಿಸೆಂಬರ್ 26ರಿಂದ ರೈಲು ಟಿಕೆಟ್ ದರ ಹೆಚ್ಚಳ, ಯಾರಿಗೆ ಎಷ್ಟು? ಇಲ್ಲಿದೆ ಲೆಕ್ಕಾಚಾರ
ಡಿಸೆಂಬರ್ 26ರಿಂದ ಭಾರತೀಯ ರೈಲ್ವೆ ಪ್ರಯಾಣ ದರ ಏರಿಕೆ ಜಾರಿಗೆ ಬರಲಿದೆ. ಎಸಿ ಮತ್ತು ಸ್ಲೀಪರ್ ಕೋಚ್‌ಗಳ ದರ ಎಷ್ಟು ಹೆಚ್ಚಾಗಲಿದೆ? ಯಾರಿಗೆ ಈ ಬಿಸಿ ತಟ್ಟಲಿದೆ? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.
ಹೊಸ ವರ್ಷದ ಸಂಭ್ರಮಕ್ಕಾಗಿ ಅಥವಾ ಸಾಲು ಸಾಲು ರಜೆಗಳ ಮಜಾ ಕಳೆಯಲು ಊರಿಗೆ ಹೋಗುವ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ನಿಮಗೊಂದು ಕಹಿ ಸುದ್ದಿ ಇಲ್ಲಿದೆ. ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದು, (Railway Ticket Price Hike) ಈ ಪರಿಷ್ಕೃತ ದರಗಳು ಇದೇ ಡಿಸೆಂಬರ್ 26ರಿಂದಲೇ ಜಾರಿಗೆ ಬರಲಿವೆ.
ಮೇಲ್ನೋಟಕ್ಕೆ ಈ ದರ ಏರಿಕೆ ಚಿಕ್ಕದು ಎನಿಸಿದರೂ, ದೂರದ ಊರುಗಳಿಗೆ ಪ್ರಯಾಣಿಸುವವರ ಜೇಬಿಗೆ ಇದು ಕತ್ತರಿ ಹಾಕುವುದು ಖಚಿತ. ಜತೆಗೆ ದೊಡ್ಡ ಕುಟುಂಬದ ಜತೆ ಪ್ರಯಾಣ ಮಾಡುವುದಾದರೆ ಬಜೆಟ್ ಹೆಚ್ಚಾಗುವುದು ಖಚಿತ. ಹಾಗಾದರೆ ರೈಲು ದರ ಎಷ್ಟು ಹೆಚ್ಚಳ, ಯಾರಿಗೆ ಇದರಿಂದ ಪರಿಣಾಮ? ಈ ನಿರ್ಧಾರದ ಹಿಂದಿನ ಲೆಕ್ಕಾಚಾರವೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
ದರ ಏರಿಕೆ ಎಷ್ಟು? ಲೆಕ್ಕಾಚಾರ ಹೇಗೆ?
ರೈಲ್ವೆ ಇಲಾಖೆಯು ಕಿಲೋಮೀಟರ್ ಆಧಾರದ ಮೇಲೆ ದರವನ್ನು ಹೆಚ್ಚಿಸಿದೆ. ಸರಳವಾಗಿ ಹೇಳಬೇಕೆಂದರೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ನೀವು ಎಸಿ ಕೋಚ್‌ನಲ್ಲಿ ಪ್ರಯಾಣಿಸಿ ಅಥವಾ ನಾನ್-ಎಸಿ ಸ್ಲೀಪರ್‌ನಲ್ಲಿ ಪ್ರಯಾಣಿಸಿ, ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚುವರಿ ದರ ಕೊಡಬೇಕಾಗುತ್ತದೆ. ಸಾಮಾನ್ಯ ದರ್ಜೆಯಲ್ಲಿ 215 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಪ್ರಯಾಣಿಸುವವರಿಗೆ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಳವಾಗಲಿದೆ.
ಉದಾಹರಣೆಗೆ, ನೀವು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಮಾಡುವುದಾದರೆ 1,000 ಕಿಲೋಮೀಟರ್ ಸಾಗಬಕೇಕು ಎಂದುಕೊಳ್ಳೋಣ. ಹಳೆಯ ದರಕ್ಕೆ ಹೋಲಿಸಿದರೆ, ಈಗಿನ 2 ಪೈಸೆ ಏರಿಕೆಯಂತೆ ನೀವು ಒಂದು ಟಿಕೆಟ್ಗೆ 20 ರೂಪಾಯಿ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ (1000 km x 0.02 = 20 ರೂ.). ಇದು ಚಿಕ್ಕ ಮೊತ್ತ ಎನಿಸಿದರೂ, ಕುಟುಂಬ ಸಮೇತ ಹೋಗುವಾಗ ಅಥವಾ ಆಗಾಗ ಪ್ರಯಾಣಿಸುವಾಗ ಈ ಮೊತ್ತದ ಹೊರೆ ತಿಳಿಯುತ್ತದೆ.
ಯಾರಿಗೆ ದರ ಏರಿಕೆಯ ಬಿಸಿ ತಟ್ಟಲ್ಲ?
ರೈಲ್ವೆ ಇಲಾಖೆಯು ದೈನಂದಿನ ಪ್ರಯಾಣಿಕರು ಮತ್ತು ಬಡವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ವಿನಾಯಿತಿಗಳನ್ನು ನೀಡಿದೆ. ಸಬರ್ಬನ್ ರೈಲುಗಳಲ್ಲಿ ಅಂದರೆ ನಗರದೊಳಗೆ ಅಥವಾ ಹತ್ತಿರದ ಉಪನಗರಗಳಿಗೆ ಸಂಚರಿಸುವ (ಉದಾಹರಣೆಗೆ ಬೆಂಗಳೂರು ದೇವನಹಳ್ಳಿ ಮೆಮು) ರೈಲುಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಸಾಮಾನ್ಯ ದರ್ಜೆಯಲ್ಲಿ 215 ಕಿಲೋಮೀಟರ್‌ಗಿಂತ ಕಡಿಮೆ ದೂರ ಪ್ರಯಾಣಿಸುವವರಿಗೂ ದರ ಏರಿಕೆ ಅನ್ವಯಿಸುವುದಿಲ್ಲ. ಇದು ದಿನಗೂಲಿ ನೌಕರರು ಮತ್ತು ಸಣ್ಣ ವ್ಯಾಪಾರಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ರೈಲ್ವೆ ಇಲಾಖೆಗೆ ಇದರಿಂದಾಗುವ ಲಾಭವೇನು?
ಭಾರತೀಯ ರೈಲ್ವೆ ಜಗತ್ತಿನ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದರೂ, ಪ್ರಯಾಣಿಕರ ವಿಭಾಗದಲ್ಲಿ ಇಲಾಖೆ ನಷ್ಟವನ್ನೇ ಅನುಭವಿಸುತ್ತಿದೆ. ಸರಕು ಸಾಗಣೆಯಿಂದ ಬರುವ ಲಾಭದಲ್ಲಿ ಪ್ರಯಾಣಿಕರ ಟಿಕೆಟ್ ದರವನ್ನು ಸಬ್ಸಿಡಿ ಮೂಲಕ ಸರಿದೂಗಿಸಲಾಗುತ್ತಿದೆ. ಈಗಿನ ಈ ಸಣ್ಣ ದರ ಏರಿಕೆಯಿಂದ ರೈಲ್ವೆ ಇಲಾಖೆಗೆ ವಾರ್ಷಿಕವಾಗಿ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಹರಿದುಬರುವ ನಿರೀಕ್ಷೆಯಿದೆ. ಈ ಹಣವನ್ನು ರೈಲ್ವೆ ಆಧುನೀಕರಣ, ಸುರಕ್ಷತೆ ಮತ್ತು ಪ್ರಯಾಣಿಕರ ಸೌಲಭ್ಯಗಳ ಸುಧಾರಣೆಗೆ ಬಳಸಲಾಗುವುದು ಎಂದು ಅಂದಾಜಿಸಲಾಗಿದೆ.
ದರ ಏರಿಕೆಗೆ ಕಾರಣವೇನು
ಸುಮಾರು ಐದುವರೆ ವರ್ಷಗಳ ಬಳಿಕ (ಜನವರಿ 1, 2020ರ ನಂತರ) ರೈಲ್ವೆ ಇಲಾಖೆ ಇಂತಹದೊಂದು ನಿರ್ಧಾರಕ್ಕೆ ಬಂದಿದೆ. ಜುಲೈನಲ್ಲಿ ಎಸಿ ಮತ್ತು ನಾನ್-ಎಸಿ ದರಗಳಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಲಾಗಿತ್ತಾದರೂ, ಅದು ವ್ಯಾಪಕವಾಗಿರಲಿಲ್ಲ. ಡೀಸೆಲ್ ಮತ್ತು ವಿದ್ಯುತ್ ದರಗಳ ಏರಿಕೆಯಿಂದ ರೈಲುಗಳನ್ನು ಓಡಿಸುವ ವೆಚ್ಚ ಹೆಚ್ಚಾಗಿದೆ.
ವಂದೇ ಭಾರತ್ ರೈಲುಗಳ ವಿಸ್ತರಣೆ, ಅಮೃತ್ ಭಾರತ್ ನಿಲ್ದಾಣಗಳ ಅಭಿವೃದ್ಧಿ ಮತ್ತು 'ಕವಚ'ದಂತಹ ಸುರಕ್ಷತಾ ತಂತ್ರಜ್ಞಾನಗಳ ಅಳವಡಿಕೆಗೆ ಇಲಾಖೆಗೆ ದೊಡ್ಡ ಮೊತ್ತದ ಹಣಕಾಸಿನ ಅಗತ್ಯವಿದೆ ಅದಕ್ಕಾಗಿ ಬೆಲೆ ಹೆಚ್ಚಿಸಲಾಗುತ್ತಿದೆ.
ಡಿಸೆಂಬರ್ 26ರ ನಂತರ ನೀವು ಟಿಕೆಟ್ ಬುಕ್ ಮಾಡುವಾಗ ಅಥವಾ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವಾಗ ದರದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಇದು ಜನಸಾಮಾನ್ಯರ ಮೇಲೆ ದೊಡ್ಡ ಮಟ್ಟದ ಪ್ರಹಾರವಲ್ಲದಿದ್ದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಇದೊಂದು ಹೆಚ್ಚುವರಿ ಹೊರೆ ಎಂಬುದಂತೂ ಸತ್ಯ.