ಪೋನ್ ಕದ್ದಾಲಿಕೆ ಪ್ರಕರಣ | ಕಾಂಗ್ರೆಸ್‌ಗೆ ಸವಾಲೊಡ್ಡಿದ್ದ ಆರ್.ಅಶೋಕ
ನಿರ್ಮಲಾನಂದನಾಥ ಶ್ರೀಗಳ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ
ಮಂಡ್ಯ: ನಿರ್ಮಲಾನಂದನಾಥ ಶ್ರೀಗಳ ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್‌ಗೆ ಸವಾಲೊಡ್ಡಿದ್ದಾರೆ.
'ನಿರ್ಮಲಾನಂದನಾಥ ಶ್ರೀಗಳ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನ ಜಿ.ಪರಮೇಶ್ವರ ಅವರೇ ಗೃಹಸಚಿವರಾಗಿದ್ದರು. ಇದಕ್ಕೆ ಕಾಂಗ್ರೆಸ್ ಮುಖಂಡರೇ ಉತ್ತರ ಕೊಡಬೇಕು' ಎಂದು ಆರ್.ಅಶೋಕ ಶುಕ್ರವಾರ(ಏ.12) ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 'ಕಾಂಗ್ರೆಸ್‌ನವರು ಆದಿಚುಂಚನಗಿರಿ ಮಠಕ್ಕೆ ಹೋದರೆ ಏನೂ ತೊಂದರೆ ಇಲ್ಲ, ನಾವು ಹೋದರೆ ಮಾತ್ರ ದೊಡ್ಡದಾಗಿ ಟೀಕಿಸುತ್ತಾರೆ. ಬಿಜೆಪಿಯೇ ಕುಮಾರಸ್ವಾಮಿ ಸರ್ಕಾರ ಬೀಳಿಸಿತೆಂದು ಆರೋಪಿಸುತ್ತಾರೆ. ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದೇ ಸಿದ್ದರಾಮಯ್ಯ, ಸಿದ್ದವನದಲ್ಲಿ ಆದ ಯೋಜನೆಗಳ ಬಗ್ಗೆಯೂ ಮಾತನಾಡಲಿ' ಎಂದರು.
'ರಾಜ್ಯದಲ್ಲಿ ಲಿಂಗಾಯತರನ್ನು ಬಿಟ್ಟರೆ ಒಕ್ಕಲಿಗ ಸಮುದಾಯದವರೇ ಹೆಚ್ಚಿದ್ದರೂ ಸಮುದಾಯಕ್ಕೆ 6ನೇ ಸ್ಥಾನ ನೀಡಲಾಗಿದೆ. ಸಿದ್ದರಾಮಯ್ಯನವರೇ ಜಾತಿ ಗಣತಿಯಲ್ಲಿ ಇದನ್ನು ಬರೆಸಿದ್ದಾರೆ' ಎಂದು ದೂರಿದರು.
'ದೇಶ ಕಾಯಲು ಮೋದಿ ಇದ್ದರೆ, ಕಾವೇರಿ ನದಿ ಕಾಯಲು ಕುಮಾರಣ್ಣ ಇರುತ್ತಾರೆ. ಮೋದಿ ಸಂಪುಟದಲ್ಲಿ ಕುಮಾರಣ್ಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಸ್ಟಾರ್ ಚಂದ್ರು ದುಡ್ಡು ಖಾಲಿಯಾಗುತ್ತದೆಯೇ ಹೊರತು ಮತ ಬೀಳುವುದಿಲ್ಲ. ಕುಮಾರಣ್ಣ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಅಂಬರೀಷ್ ನಂತರ ಮಂಡ್ಯಕ್ಕೆ ಕೇಂದ್ರ ಸಚಿವ ಸ್ಥಾನ ಒಲಿದು ಬರಲಿದೆ' ಎಂದರು.