ನಾಯಿ, ಮೇಕೆಗಳನ್ನು ತಿನ್ನುತ್ತಿದ್ದ ಚಿರತೆ ಕೊನೆಗೂ ಬೋನಿಗೆ!
ಕಳೆದ ಎರಡು ವಾರಗಳಿಂದ ಈ ಗ್ರಾಮದಲ್ಲಿ ಚಿರತೆಯ ಹಾವಳಿ ವಿಪರೀತವಾಗಿತ್ತು. ಗ್ರಾಮಸ್ಥರ ಸಾಕು ಪ್ರಾಣಿಗಳಾದ ಮೇಕೆ, ಕುರಿ ಮತ್ತು ನಾಯಿಗಳು ನಿಗೂಢವಾಗಿ ಕಣ್ಮರೆಯಾಗುತ್ತಿದ್ದವು ಅಥವಾ ಅರ್ಧಂಬರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದವು.
ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ
ಕಳೆದ ಹಲವು ದಿನಗಳಿಂದ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಮತ್ತು ಸುತ್ತಮುತ್ತಲಿನ ರೈತರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಭಾನುವಾರ (ಡಿ.14) ಬೆಳಿಗ್ಗೆ ಗ್ರಾಮದ ರೈತ ಟಿ. ಕೃಷ್ಣಪ್ಪ ಅವರ ತೋಟದಲ್ಲಿ ಇರಿಸಿದ್ದ ಬೋನಿನಲ್ಲಿ ಸುಮಾರು 8 ರಿಂದ 10 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ.
ಕಳೆದ ಎರಡು ವಾರಗಳಿಂದ ಈ ಗ್ರಾಮದಲ್ಲಿ ಚಿರತೆಯ ಹಾವಳಿ ವಿಪರೀತವಾಗಿತ್ತು. ಗ್ರಾಮಸ್ಥರ ಸಾಕು ಪ್ರಾಣಿಗಳಾದ ಮೇಕೆ, ಕುರಿ ಮತ್ತು ನಾಯಿಗಳು ನಿಗೂಢವಾಗಿ ಕಣ್ಮರೆಯಾಗುತ್ತಿದ್ದವು ಅಥವಾ ಅರ್ಧಂಬರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದವು. ಚಿರತೆ ಹಗಲೊತ್ತಿನಲ್ಲೂ ಕಬ್ಬಿನ ಗದ್ದೆಗಳ ಬಳಿ ಓಡಾಡುವುದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದರು. ರೈತರು ಜಮೀನಿಗೆ ಕೆಲಸಕ್ಕೆ ಹೋಗಲೂ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
10 ದಿನಗಳ ಕಾರ್ಯಾಚರಣೆ
ಗ್ರಾಮಸ್ಥರ ದೂರಿನ ಮೇರೆಗೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆಯ ಚಲನವಲನವನ್ನು ಪತ್ತೆಹಚ್ಚಿ ಕಾರ್ಯಾಚರಣೆ ಆರಂಭಿಸಿದ್ದರು. ಚಿರತೆ ಅಡಗಿರಬಹುದಾದ ಸಂಭಾವ್ಯ ಜಾಗಗಳನ್ನು ಗುರುತಿಸಿ, ಟಿ. ಕೃಷ್ಣಪ್ಪ ಅವರ ತೋಟದಲ್ಲಿ 10 ದಿನಗಳ ಹಿಂದೆಯೇ ಬೋನು ಇರಿಸಲಾಗಿತ್ತು. ಚಿರತೆಯನ್ನು ಆಕರ್ಷಿಸಲು ಬೋನಿನೊಳಗೆ ನಾಯಿಯನ್ನು ಕಟ್ಟಲಾಗಿತ್ತು. ಭಾನುವಾರ ಆಹಾರ ಹುಡುಕಿಕೊಂಡು ಬಂದ ಚಿರತೆ ಬೋನಿನೊಳಗೆ ಸಿಕ್ಕಿಬಿದ್ದಿದೆ.
ಮೈಸೂರು ಭಾಗದಲ್ಲಿ ಹೆಚ್ಚಿದ ಚಿರತೆ ಹಾವಳಿ:
ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಲೇ ಇದೆ. ಕಳೆದ 5 ವರ್ಷಗಳಲ್ಲಿ ಮೈಸೂರು ಭಾಗದಲ್ಲಿ ಸುಮಾರು 308 ಚಿರತೆಗಳನ್ನು ಸೆರೆಹಿಡಿಯಲಾಗಿದೆ ಎಂಬ ಅಂಕಿಅಂಶ ಅರಣ್ಯ ಇಲಾಖೆ ಬಳಿ ಇದೆ. ಇತ್ತೀಚೆಗೆ ಮೈಸೂರು ಮಾತ್ರವಲ್ಲದೆ, ಚಿಕ್ಕಮಗಳೂರು, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲೂ ಚಿರತೆ ದಾಳಿ ಪ್ರಕರಣಗಳು ವರದಿಯಾಗಿವೆ. ಕೆಲ ದಿನಗಳ ಹಿಂದಷ್ಟೇ ಕಡೂರು ತಾಲೂಕಿನಲ್ಲಿ ಬಾಲಕಿಯೊಬ್ಬಳ ಮೇಲೆ ಚಿರತೆ ದಾಳಿ ಮಾಡಿದ್ದ ಘಟನೆ ನಡೆದಿತ್ತು.
ದೊಡ್ಡಮಾರಗೌಡನಹಳ್ಳಿಯಲ್ಲಿ ಚಿರತೆ ಸೆರೆಯಾಗಿರುವುದಕ್ಕೆ ಗ್ರಾಮಸ್ಥರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಭಾಗದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ರೈತರು, ಅರಣ್ಯ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.