ರಾಜ್ಯದಲ್ಲಿ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಬಲಿ

ಮೈಸೂರಿನ ಹುಣಸೂರು ತಾಲೂಕಿನ ಅಂಕನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಖಾಸಗಿ ಬಸ್‌ವೊಂದು, ಬಿಳಿಕೆರೆ ಕಡೆಯಿಂದ ಅಂಕನಹಳ್ಳಿಗೆ ಹೊರಟಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ.

Update: 2025-12-14 08:05 GMT

ಸಾಂದರ್ಭಿಕ ಚಿತ್ರ

Click the Play button to listen to article

ರಾಜ್ಯದಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ. ಮೈಸೂರು ಹಾಗೂ ಗದಗ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಗಳು ಕುಟುಂಬಗಳ ಆಕ್ರಂದನಕ್ಕೆ ಕಾರಣವಾಗಿದ್ದರೆ, ಧಾರವಾಡದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಬೈಕ್​ ಸವಾರರ ಸಾವು

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಂಕನಹಳ್ಳಿ ಗೇಟ್ ಬಳಿ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಖಾಸಗಿ ಬಸ್‌ವೊಂದು, ಬಿಳಿಕೆರೆ ಕಡೆಯಿಂದ ಅಂಕನಹಳ್ಳಿಗೆ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ನ ಚಕ್ರಕ್ಕೆ ಸಿಲುಕಿದ ಚಿಕ್ಕಾಡಿಗನಹಳ್ಳಿಯ ರವಿ (37) ಮತ್ತು ಅಂಕನಹಳ್ಳಿಯ ಪ್ರಸನ್ನ (42) ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಂತಿದ್ದ ಲಾರಿಗೆ ಕಾರು ಡಿಕ್ಕಿ 

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿಯಿಂದ ದಾಂಡೇಲಿಗೆ ತೆರಳುತ್ತಿದ್ದ ಕಾರು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಮೃತರನ್ನು ಬಳ್ಳಾರಿ ಮೂಲದ ಜಿತೇಂದ್ರ ರೆಡ್ಡಿ (25) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮೂವರ ಪೈಕಿ ಚಾಲಕ ಮೃತಪಟ್ಟರೆ, ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳಚಿಕೊಂಡ ಟ್ರ್ಯಾಕ್ಟರ್ ಟ್ರ್ಯಾಲಿ

ಈ ದುರಂತಗಳ ನಡುವೆಯೇ ಧಾರವಾಡದಲ್ಲಿ ಪವಾಡಸದೃಶ ರೀತಿಯಲ್ಲಿ ಅನಾಹುತವೊಂದು ತಪ್ಪಿದೆ. ಶ್ರೀನಗರ ವೃತ್ತದ ಬಳಿ ಹಳಿಯಾಳಕ್ಕೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಳಚಿಕೊಂಡಿದೆ. ರಸ್ತೆ ಉಬ್ಬಿನ ಮೇಲೆ ಸಾಗುವಾಗ ಟ್ರ್ಯಾಲಿ ಕಳಚಿದ್ದು, ಟ್ರ್ಯಾಕ್ಟರ್ ಕೆಲದೂರದವರೆಗೆ ಹಿಮ್ಮುಖವಾಗಿ ಚಲಿಸಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಹಿಂಬದಿಯಲ್ಲಿ ಯಾವುದೇ ವಾಹನಗಳು ಇಲ್ಲದಿದ್ದರಿಂದ ಮತ್ತು ಜನ ಸಂಚಾರ ವಿರಳವಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.

Tags:    

Similar News