ಇಹಲೋಕ ತ್ಯಜಿಸಿದ ದಾವಣಗೆರೆಯ ದಣಿ- ಶ್ಯಾಮನೂರು ಶಿವಶಂಕರಪ್ಪ ನಿಧನಕ್ಕೆ ಗಣ್ಯರ ಸಂತಾಪ
1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಶಿವಶಂಕರಪ್ಪ ಅವರು ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ದಾವಣಗೆರೆಯ ದಣಿ ಎಂದೇ ಖ್ಯಾತರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು ಭಾರತದ ರಾಜಕಾರಣದಲ್ಲಿ ಅತ್ಯಂತ ಹಿರಿಯ ಶಾಸಕ, ರಾಜಕೀಯ ಮುತ್ಸದ್ದಿಯಾಗಿದ್ದವರು. ಓದಿದ್ದು ಹತ್ತನೇ ತರಗತಿಯಾದರೂ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಇಡೀ ದೇಶವೇ ತಿರುಗಿನೋಡುವಂತಹ ಸಾಧನೆ ಮಾಡಿದ್ದಾರೆ. ತಮ್ಮ ಒಡೆತನದ ಬಾಪೂಜಿ ಸಂಸ್ಥೆಗಳ ಮೂಲಕ ಸಾವಿರಾರು ವೈದ್ಯರು ಹಾಗೂ ಎಂಜಿನಿಯರ್ ಗಳನ್ನು ದೇಶಕ್ಕೆ ಕೊಡುಗೆ ನೀಡಿದ್ದಾರೆ.
ಸಕ್ಕರೆ ಹಾಗೂ ಡಿಸ್ಟಿಲರಿ ಉದ್ಯಮಗಳ ಸ್ಥಾಪನೆ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಐದು ದಶಕಗಳ ರಾಜಕೀಯ ಜೀವನದಲ್ಲಿ ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ರಾಜಕೀಯದ ಜೊತೆಯಲ್ಲೇ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
2016 ರಲ್ಲಿ ಕೇಂದ್ರ ಸರ್ಕಾರ ಕೊಡಮಾಡುವ ಉತ್ತಮ ತೋಟಗಾರಿಕೆ ರಾಜ್ಯ ಪ್ರಶಸ್ತಿಯು ಕರ್ನಾಟಕಕ್ಕೆ ದೊರಕಿತ್ತು. ಅದು ಶಾಮನೂರು ಶಿವಶಂಕರಪ್ಪ ಅವರ ಕಾಳಜಿ ಹಾಗೂ ಪರಿಶ್ರಮಕ್ಕೆ ಸಂದ ಪ್ರಶಸ್ತಿಯಾಗಿತ್ತು.
ಸಮುದಾಯದ ಏಕತೆಗೆ ಶ್ರಮಿಸಿದ ನಾಯಕ
ಶಾಮನೂರು ಶಿವಶಂಕರಪ್ಪ 2012ರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಆರಂಭವಾದಾಗಿನಿಂದಲೂ ಸಮುದಾಯದಲ್ಲಿ ಏಕತೆ ಕಾಪಾಡಿಕೊಂಡು ಬರಲು ಶ್ರಮಿಸಿದರು. 'ವೀರಶೈವ-ಲಿಂಗಾಯತ' ಎರಡೂ ಒಂದೇ ಎಂದು ಪ್ರತಿಪಾದಿಸಿದರು. ಇವರ ಅವಧಿಯಲ್ಲೇ ವೀರಶೈವ ಮಹಾಸಭಾದ ಹೆಸರು ವೀರಶೈವ-ಲಿಂಗಾಯತ ಮಹಾಸಭಾ ಎಂದು ಬದಲಾಯಿತು.
ವೀರಶೈವ ಲಿಂಗಾಯತ ಮಠಾಧೀಶರನ್ನು ಒಗ್ಗೂಡಿಸಲು ನಿರಂತರ ಪ್ರಯತ್ನ ನಡೆಸಿದ್ದರು. ಈ ಪ್ರಯತ್ನದ ಮೊದಲ ಭಾಗವಾಗಿ ಪಂಚಪೀಠ ಮಠಾಧೀಶರ ಸಮ್ಮೇಳನ ಆಯೋಜಿಸಿ ಯಶಸ್ಸು ಕಂಡಿದ್ದರು.
ರಾಜಕೀಯ ಹಾದಿ
2023: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
2018: ದಾವಣಗೆರೆ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಗೆಲುವು.
2013: ಶಿವಶಂಕರಪ್ಪನವರು ತೋಟಗಾರಿಕೆ ಸಚಿವರಾಗಿ ನಿಯುಕ್ತಿ.
2008: 2008 ರಲ್ಲಿ ದಾವಣಗೆರೆ ಕ್ಷೇತ್ರದಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆ.
2004: ದಾವಣಗೆರೆ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
1998: 1998 ರಿಂದ 1999 ರ ಅವಧಿಯಲ್ಲಿ ಸಂಸದರಾಗಿ ಕಾರ್ಯನಿರ್ವಹಣೆ.
1994: ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
1978: ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ
ಗಣ್ಯರ ಸಂತಾಪ
ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಮುಖಂಡರು, ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ನಿಧನರಾದ ವಿಷಯ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಅವರ ಸರಳತೆ ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಸುಧೀರ್ಘ ಜನಸೇವೆ ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಭರಿಸಲಾಗದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಸಚಿವ ಎಂ.ಬಿ.ಪಾಟೀಲ ಸಂತಾಪ
ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸಾರ್ವಜನಿಕ ಜೀವನದಲ್ಲಿ ಅವರ ಸೇವೆ, ಸಂಘಟನೆಗೆ ನೀಡಿದ ನಾಯಕತ್ವ ಮತ್ತು ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳು ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಮತ್ತು ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ನನ್ನ ಸಂಬಂಧಿಯೂ ಆಗಿದ್ದ ಅವರು, ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಾಗಿ ಪಕ್ಷದಲ್ಲಿ ತಳಮಟ್ಟದಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಬಾಪುಜಿ ಶಿಕ್ಷಣ ಸಂಸ್ಥೆಯನ್ನು ಅತ್ಯಂತ ಎತ್ತರಕ್ಕೆ ಕಟ್ಟಿ ಬೆಳೆಸಿದವರು. ದೊಡ್ಡ ದಾನಿಗಳಾಗಿದ್ದ ಅವರು, ಶ್ರೀಶೈಲ ಕ್ಷೇತ್ರ ಅಭಿವೃದ್ಧಿಗೆ ಮತ್ತು ಉಳವಿ ಕ್ಷೇತ್ರದ ಅಭಿವೃದ್ಧಿಗೆ, ಗುಡ್ಡಾಪುರ ದಾನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅವರು ಬಹಳಷ್ಟು ಶ್ರಮಿಸಿದ್ದಾರೆ. ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿದ್ದ ಅವರು ಅದನ್ನು ಪಾಲಿಸಿಕೊಂಡು ಬಂದಿದ್ದರು. ಶಿಸ್ತಿನಿಂದ ತುಂಬು ಜೀವನ, ಕೂಡು ಕುಟುಂಬದ ಸಂಭ್ರಮ ಅನುಭವಿಸಿದ್ದಾರೆ. ವ್ಯಾಪಾರ, ವ್ಯವಹಾರ, ಸಂಘ-ಸಂಸ್ಥೆಗಳು, ಸಮಾಜ, ಸಹಕಾರ ಕ್ಷೇತ್ರ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಕ್ಷೇತ್ರಗಳಲ್ಲಿಯೂ ವಿಶಿಷ್ಠ ಸಾಧನೆ ಮಾಡಿದ್ದಾರೆ. ಅವರ ಸಾಧನೆಗಳಿಗೆ ಲೆಕ್ಕವೇ ಇಲ್ಲ ಎಂದು ಸಚಿವ ಎಂ. ಬಿ. ಪಾಟೀಲ ಕಂಬನಿ ಮಿಡಿದಿದ್ದಾರೆ.