ಶಾಮನೂರು ವಿಧಿವಶ; ದಾವಣಗೆರೆ ವಿವಿ ಪರೀಕ್ಷೆಗಳು ಮುಂದೂಡಿಕೆ
ನಾಳೆ (ಡಿ.15) ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಕುಲಸಚಿವ ಸಿ.ಕೆ ರಮೇಶ್ ಪ್ರಕಟಣೆ ಹೊರಡಿಸಿದ್ದಾರೆ.
ಕಾಂಗ್ರೆನ್ ಹಿರಿಯ ನಾಯಕ, ರಾಜ್ಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಇಂದು ನಿಧನರಾಗಿದ್ದಾರೆ. ಈ ಹಿನ್ನೆಲೆ ನಾಳೆ (ಡಿ.15) ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಸಿ.ಕೆ ರಮೇಶ್ ಪ್ರಕಟಣೆ ಹೊರಡಿಸಿದ್ದು, ಸೋಮವಾರ ನಡೆಯಲಿರುವ ಎಲ್ಲಾ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ಮುಂದೂಡಿಕೆಯಾದ ಪರೀಕ್ಷಾ ದಿನಾಂಕವನ್ನ ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ರಜೆ ಘೋಷಣೆ
ಶಾಮನೂರು ಶಿವಶಂಕರಪ್ಪನವರು ನಿಧನರಾದ ಪ್ರಯುಕ್ತ ಅವರ ಗೌರವಾರ್ಥವಾಗಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಡಿಸೆಂಬರ್ 15 ರಂದು ದಾವಣಗೆರೆ ನಗರದ ವ್ಯಾಪ್ತಿಯ ಎಲ್ಲಾ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆಯನ್ನು ಮುಂದಿನ ಶನಿವಾರ ಡಿಸೆಂಬರ್ 27 ರಂದು ಪೂರ್ತಿ ದಿನ ಶಾಲೆಯನ್ನು ನಡೆಸಿ ಸರಿದೂಗಿಸಲು ಸೂಚಿಸಲಾಗಿದೆ.
ವಿಶ್ವವಿದ್ಯಾನಿಲಯ ಶಿವಗಂಗೋತ್ರಿ, ಸ್ನಾತಕೋತ್ತರ ಕೇಂದ್ರ ಜಿ. ಆರ್. ಹಳ್ಳಿ, ಚಿತ್ರದುರ್ಗ ಹಾಗೂ ಎಲ್ಲಾ ಘಟಕ ಕಾಲೇಜುಗಳಿಗೆ 15- 12-2025 ರಂದು ರಜೆ ಘೋಷಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರು ಎಸ್ ಎ ಘಂಟಿ ತಿಳಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಶಂಕರಪ್ಪ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶಾಮನೂರು ಅವರು ಭಾರತದ ಅತ್ಯಂತ ಹಿರಿಯ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಜೂನ್ 16, 1931 ರಂದು ದಾವಣಗೆರೆಯಲ್ಲಿ ಜನಿಸಿದ ಇವರು, ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ದಾವಣಗೆರೆಯ ದಣಿ ಎಂದೇ ಖ್ಯಾತರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು ಭಾರತದ ರಾಜಕಾರಣದಲ್ಲಿ ಅತ್ಯಂತ ಹಿರಿಯ ಶಾಸಕ, ರಾಜಕೀಯ ಮುತ್ಸದ್ದಿಯಾಗಿದ್ದವರು. ಓದಿದ್ದು ಹತ್ತನೇ ತರಗತಿಯಾದರೂ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಇಡೀ ದೇಶವೇ ತಿರುಗಿನೋಡುವಂತಹ ಸಾಧನೆ ಮಾಡಿದ್ದಾರೆ. ತಮ್ಮ ಒಡೆತನದ ಬಾಪೂಜಿ ಸಂಸ್ಥೆಗಳ ಮೂಲಕ ಸಾವಿರಾರು ವೈದ್ಯರು ಹಾಗೂ ಎಂಜಿನಿಯರ್ ಗಳನ್ನು ದೇಶಕ್ಕೆ ಕೊಡುಗೆ ನೀಡಿದ್ದಾರೆ.
ಸಕ್ಕರೆ ಹಾಗೂ ಡಿಸ್ಟಿಲರಿ ಉದ್ಯಮಗಳ ಸ್ಥಾಪನೆ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಐದು ದಶಕಗಳ ರಾಜಕೀಯ ಜೀವನದಲ್ಲಿ ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ರಾಜಕೀಯದ ಜೊತೆಯಲ್ಲೇ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
2016 ರಲ್ಲಿ ಕೇಂದ್ರ ಸರ್ಕಾರ ಕೊಡಮಾಡುವ ಉತ್ತಮ ತೋಟಗಾರಿಕೆ ರಾಜ್ಯ ಪ್ರಶಸ್ತಿಯು ಕರ್ನಾಟಕಕ್ಕೆ ದೊರಕಿತ್ತು. ಅದು ಶಾಮನೂರು ಶಿವಶಂಕರಪ್ಪ ಅವರ ಕಾಳಜಿ ಹಾಗೂ ಪರಿಶ್ರಮಕ್ಕೆ ಸಂದ ಪ್ರಶಸ್ತಿಯಾಗಿತ್ತು.
ಸಮುದಾಯದ ಏಕತೆಗೆ ಶ್ರಮಿಸಿದ ನಾಯಕ
ಶಾಮನೂರು ಶಿವಶಂಕರಪ್ಪ 2012ರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಆರಂಭವಾದಾಗಿನಿಂದಲೂ ಸಮುದಾಯದಲ್ಲಿ ಏಕತೆ ಕಾಪಾಡಿಕೊಂಡು ಬರಲು ಶ್ರಮಿಸಿದರು. 'ವೀರಶೈವ-ಲಿಂಗಾಯತ' ಎರಡೂ ಒಂದೇ ಎಂದು ಪ್ರತಿಪಾದಿಸಿದರು. ಇವರ ಅವಧಿಯಲ್ಲೇ ವೀರಶೈವ ಮಹಾಸಭಾದ ಹೆಸರು ವೀರಶೈವ-ಲಿಂಗಾಯತ ಮಹಾಸಭಾ ಎಂದು ಬದಲಾಯಿತು.
ವೀರಶೈವ ಲಿಂಗಾಯತ ಮಠಾಧೀಶರನ್ನು ಒಗ್ಗೂಡಿಸಲು ನಿರಂತರ ಪ್ರಯತ್ನ ನಡೆಸಿದ್ದರು. ಈ ಪ್ರಯತ್ನದ ಮೊದಲ ಭಾಗವಾಗಿ ಪಂಚಪೀಠ ಮಠಾಧೀಶರ ಸಮ್ಮೇಳನ ಆಯೋಜಿಸಿ ಯಶಸ್ಸು ಕಂಡಿದ್ದರು.