ರಕ್ಷಕರೇ ಆದರು ಭಕ್ಷಕರು: ಮತ್ತೊಮ್ಮೆ ಪೊಲೀಸ್ ಇಲಾಖೆಗೆ ಮಸಿ, ನೆಲಮಂಗಲದಲ್ಲಿ ಕಾನ್‌ಸ್ಟೆಬಲ್‌ನಿಂದಲೇ ಭೂಕಬಳಿಕೆ!

ಈ ಪ್ರಕರಣದಲ್ಲಿ ಕೇವಲ ಕಾನ್‌ಸ್ಟೆಬಲ್ ಮಾತ್ರವಲ್ಲದೆ, ಹಿರಿಯ ಉಪ ನೋಂದಣಾಧಿಕಾರಿ ಡಿ.ಪಿ. ಸತೀಶ್ ಅವರ ಹೆಸರೂ ಕೇಳಿಬಂದಿದ್ದು, ಸರ್ಕಾರಿ ಅಧಿಕಾರಿಗಳೇ ಭೂಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

Update: 2025-12-14 05:16 GMT

 ಹೆಡ್ ಕಾನ್‌ಸ್ಟೆಬಲ್ ಗಿರಿಜೇಶ್ 

Click the Play button to listen to article

"ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?" ಎಂಬ ಗಾದೆ ಮಾತು ರಾಜ್ಯ ಪೊಲೀಸ್ ಇಲಾಖೆಗೆ ಮತ್ತೊಮ್ಮೆ ಅನ್ವರ್ಥವಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ಮಾಡಬೇಕಾದ ಪೊಲೀಸರೇ (Police) ಇದೀಗ ಭೂಗಳ್ಳತನದಂತಹ ಗಂಭೀರ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಇಲಾಖೆಯ ಘನತೆಗೆ ಮಸಿ ಬಳಿದಂತಾಗಿದೆ.

ನೆಲಮಂಗಲದ ದಾಬಸ್ ಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನು ಕಬಳಿಸಲು ಯತ್ನಿಸಿದ ಆರೋಪದಡಿ ಸ್ವತಃ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರ ವಿರುದ್ಧವೇ ಎಫ್‌ಐಆರ್ (FIR) ದಾಖಲಾಗಿದೆ. ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗಿರಿಜೇಶ್ ಸೇರಿದಂತೆ ಒಟ್ಟು 9 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದು ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಂತಿದೆ.

ಪ್ರಕರಣದ ಹಿನ್ನೆಲೆ ಏನು?

ನಾಗರಬಾವಿ ನಿವಾಸಿ ಥಾಂಪಿ ಮ್ಯಾಥ್ಯೂ ಎಂಬುವವರಿಗೆ ಸೇರಿದ ಬೆಲೆಬಾಳುವ ಜಮೀನಿನ ಮೇಲೆ ಆರೋಪಿಗಳು ಕಣ್ಣಿಟ್ಟಿದ್ದರು. ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಮಾಚನಹಳ್ಳಿ ಮತ್ತು ಕಂಬಾಳು ಗ್ರಾಮಗಳಲ್ಲಿ ಮ್ಯಾಥ್ಯೂ ಅವರಿಗೆ ಸೇರಿದ ಒಟ್ಟು ಸುಮಾರು 8 ಎಕರೆಗೂ ಹೆಚ್ಚು ಜಮೀನಿದೆ. ಈ ಜಮೀನು ಕೆಐಎಡಿಬಿ (KIADB) ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡ ಕಾನ್‌ಸ್ಟೆಬಲ್ ಗಿರಿಜೇಶ್ ಮತ್ತು ಆತನ ಸಹಚರರು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೆಐಎಡಿಬಿಯಿಂದ ಬರುವ ಕೋಟ್ಯಂತರ ರೂಪಾಯಿ ಪರಿಹಾರ ಹಣವನ್ನು ಲಪಟಾಯಿಸಲು ಸಂಚು ರೂಪಿಸಿದ್ದರು.

ಖಾಕಿ ತೊಟ್ಟವರೇ ಖದೀಮರಾದಾಗ

ಸಾಮಾನ್ಯವಾಗಿ ಭೂಗಳ್ಳತನ ನಡೆದಾಗ ಜನರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಆದರೆ, ಇಲ್ಲಿ ಆರಕ್ಷಕನೇ (Constable) ಪ್ರಮುಖ ಆರೋಪಿಯಾಗಿರುವುದು ವಿಪರ್ಯಾಸ. ಆರೋಪಿಗಳು ನಕಲಿ ಕ್ರಯಪತ್ರ ಸಿದ್ಧಪಡಿಸಿ , ಥಾಂಪಿ ಮ್ಯಾಥ್ಯೂ ಅವರ ಹೆಸರಿನ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದರು. ದೂರುದಾರರು ಕೆಐಎಡಿಬಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಹೋದಾಗ, ತಮ್ಮ ಜಮೀನು ಬೇರೆಯವರ ಪಾಲಾಗಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಕೇವಲ ಕಾನ್‌ಸ್ಟೆಬಲ್ ಮಾತ್ರವಲ್ಲದೆ, ಹಿರಿಯ ಉಪ ನೋಂದಣಾಧಿಕಾರಿ ಡಿ.ಪಿ. ಸತೀಶ್ ಅವರ ಹೆಸರೂ ಕೇಳಿಬಂದಿದ್ದು, ಸರ್ಕಾರಿ ಅಧಿಕಾರಿಗಳೇ ಭೂಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಪೊಲೀಸರೇ ಸುಲಿಗೆ, ಡ್ರಗ್ ದಂಧೆ ಮತ್ತು ದರೋಡೆ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದೀಗ ನೆಲಮಂಗಲದ ಈ ಪ್ರಕರಣವು "ರಕ್ಷಕರು ಭಕ್ಷಕರಾಗುತ್ತಿರುವ" ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ.

Tags:    

Similar News