ಸಾರಿಗೆ ನೌಕರರ ಮುಷ್ಕರ| ರಾಜ್ಯ ಸರ್ಕಾರಕ್ಕೆ ಮತ್ತೆ ಬಿಸಿ ಸೋಮವಾರದಿಂದಲೇ ಪ್ರತಿಭಟನೆ ಆರಂಭಕ್ಕೆ ಸಿದ್ಧತೆ
ಸಾರಿಗೆ ನೌಕರರು ಅಧಿವೇಶನ ಮುಗಿಯುವವರೆಗೂ ಹಂತ ಹಂತವಾಗಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಸಾರಿಗೆ ಸಂಘಟನೆಗಳ ನಡುವೆ ನಡೆದ ಸಾಲು ಸಾಲು ಸಂಧಾನ ಸಭೆಗಳು ವಿಫಲಗೊಂಡ ಬೆನ್ನಲ್ಲೇ, ರಾಜ್ಯದ ಸಾರಿಗೆ ನೌಕರರು ಮತ್ತೊಮ್ಮೆ ಪ್ರತಿಭಟನೆಯ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದ ಬಳಿಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ನೌಕರರ ಸಂಘಟನೆಗಳು ಚಿಂತನೆ ನಡೆಸಿವೆ. ಈ ಹಿನ್ನೆಲೆಯಲ್ಲಿ, ಸೋಮವಾದಿಂದಲೇ ಮತ್ತೆ ಮುಷ್ಕರ ನಡೆಸಲು ನೌಕರರ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.
ಸಾರಿಗೆ ಸಂಘಟನೆಗಳು ಸೋಮವಾರದಿಂದಲೇ ಪ್ರತಿಭಟನೆಗೆ ಮುಂದಾಗುತ್ತಿದ್ದು, ಸರ್ಕಾರದ ನಿರ್ಧಾರಗಳ ಕುರಿತು ಪ್ರತಿಯೊಬ್ಬ ನೌಕರನಿಗೂ ಖುದ್ದಾಗಿ ತಿಳಿಸಲು ಪ್ರತಿ ಡಿಪೋಗಳಿಗೂ ಭೇಟಿ ನೀಡಲು ಯೋಜನೆ ರೂಪಿಸಿವೆ. ಡಿ.19ರಂದು ಅಧಿವೇಶನ ಕೊನೆಗೊಳ್ಳಲಿದ್ದು, ಅದರ ಬಳಿಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ನೌಕರರು ಕರಪತ್ರಗಳನ್ನು ಹಂಚುವ ಮೂಲಕ ಹೋರಾಟ ಮಾಡುವುದು ಶತಸಿದ್ದ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸುತ್ತಿದ್ದಾರೆ.
ಹಂತ ಹಂತದ ಪ್ರತಿಭಟನೆಗೆ ಯೋಜನೆ
ಸಾರಿಗೆ ನೌಕರರು ಅಧಿವೇಶನ ಮುಗಿಯುವವರೆಗೂ ಹಂತ ಹಂತವಾಗಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ. ನಿಗಮಗಳ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ಸರ್ಕಾರದ ಹೇಳಿಕೆಯ ವಿರುದ್ಧ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ ಎರಡು ವರ್ಷಗಳಿಂದಲೂ ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯುವ ಎಲ್ಲ ಸಿದ್ಧತೆಗಳನ್ನು ನೌಕರರು ಮಾಡಿಕೊಂಡಿದ್ದಾರೆ.
ನಾಳೆಯಿಂದಲೇ ಕರಪತ್ರಗಳನ್ನು ಹಂಚುವ ಮೂಲಕ ನೌಕರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನೌಕರರ ಮುಖಂಡರು ಖುದ್ದಾಗಿ ಡಿಪೋಗಳಿಗೆ ಭೇಟಿ ನೀಡಿ, ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮನವೊಲಿಸಲಿದ್ದಾರೆ. ಡಿಪೋ ಹಂತದಲ್ಲಿಯೇ ಪ್ರತಿಭಟನೆಗೆ ಎಲ್ಲ ರೀತಿಯಲ್ಲಿ ಸಜ್ಜುಗೊಳಿಸಲಾಗುವುದು. 'ಯಾವುದೇ ಕ್ಷಣದಲ್ಲಿ ಮುಷ್ಕರಕ್ಕೆ ಕರೆ ನೀಡಬಹುದು, ಸಿದ್ಧರಿರಿ' ಎಂದು ನೌಕರರನ್ನು ಮಾನಸಿಕವಾಗಿ ಸಿದ್ಧಪಡಿಸುವ ಪ್ರಯತ್ನ ನಡೆಯುತ್ತಿದೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು
ಸಾರಿಗೆ ನೌಕರರು ತಮ್ಮ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ
38 ತಿಂಗಳ ವೇತನದ ಬಾಕಿ ಹಣವನ್ನು (ಅರಿಯರ್ಸ್) ಕೂಡಲೇ ನೀಡಬೇಕು.
ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನವಾದ ವೇತನವನ್ನು ಸಾರಿಗೆ ನೌಕರರಿಗೂ ನೀಡಬೇಕು.
ನೌಕರರ ಮೇಲಿನ ಕಾರ್ಮಿಕ ಕಿರುಕುಳವನ್ನು ತಕ್ಷಣವೇ ನಿಲ್ಲಿಸಬೇಕು.
1-1-2024 ರಿಂದ ಅನ್ವಯವಾಗುವಂತೆ ವೇತನವನ್ನು ಜಾರಿಗೊಳಿಸಬೇಕು.