ಅಕ್ರಮ ಸಂಬಂಧ|ಪ್ರಿಯಕರನ ಕೊಲೆಗೆ ಯತ್ನಿಸಿದ ಮಹಿಳೆ; ದೊಡ್ಡಬಳ್ಳಾಪುರದಲ್ಲಿ ಭೀಕರ ಕೃತ್ಯ
ಗಂಭೀರವಾಗಿ ಗಾಯಗೊಂಡಿರುವ ಕಾರ್ತಿಕ್ ಎಂಬುವರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸಾಂದರ್ಭಿಕ ಚಿತ್ರ
ಅಕ್ರಮ ಸಂಬಂಧದ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ಮಹಿಳೆಯೊಬ್ಬರು ತನ್ನ ಪ್ರಿಯಕರನ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಪುಟ್ಟಯ್ಯನ ಅಗ್ರಹಾರ ಗ್ರಾಮದ ನಿವಾಸಿ ಕಾರ್ತಿಕ್ (26) ಹಲ್ಲೆಗೊಳಗಾದ ಯುವಕ. ಕಾರ್ತಿಕ್ ಅದೇ ಗ್ರಾಮದ ದೀಪಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಈ ಹಿಂದೆಯೂ ಇವರ ನಡುವೆ ಗಲಾಟೆ ನಡೆದು ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆಗ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದರು.
ಆದರೆ, ಶನಿವಾರ (ಡಿ.14) ಮತ್ತೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಈ ವೇಳೆ ದೀಪಾ ಅವರು ಕಾರ್ತಿಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಗನ ಮೇಲಿನ ಹಲ್ಲೆಯನ್ನು ತಡೆಯಲು ಬಂದ ಕಾರ್ತಿಕ್ ತಂದೆ ಮಧುಸೂದನ್ ಅವರ ಮೇಲೂ ದಾಳಿ ನಡೆದಿದೆ.
ಪ್ರಾಣಾಪಾಯದಿಂದ ಪಾರು
ಘಟನೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಇದರಿಂದಾಗಿ ಕಾರ್ತಿಕ್ ಮತ್ತು ಅವರ ತಂದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ತಿಕ್ ಅವರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ದೀಪಾ ವಿರುದ್ಧ ಕಾರ್ತಿಕ್ ಕುಟುಂಬಸ್ಥರು ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.