ದಾವಣಗೆರೆ ಗಡಿ ಗ್ರಾಮದಲ್ಲಿ ಕೇಳಿಸಿದ ನಿಗೂಢ ಶಬ್ದ: ಭೂಮಿ ಕಂಪಿಸಿದ ಅನುಭವಕ್ಕೆ ಬೆಚ್ಚಿಬಿದ್ದ ಜನರು

ಇದೇ ರೀತಿಯ ಘಟನೆ ಕಳೆದ ತಿಂಗಳು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್, ಮಾಸ್ತಿ ಮತ್ತು ಲಕ್ಕೂರು ಭಾಗಗಳಲ್ಲೂ ನಡೆದಿತ್ತು. ಅಲ್ಲಿಯೂ ಭಾರಿ ನಿಗೂಢ ಶಬ್ದ ಕೇಳಿಬಂದಿತ್ತಾದರೂ, ಅದರ ಮೂಲ ಯಾವುದು ಎಂಬುದು ಪತ್ತೆಯಾಗಿರಲಿಲ್ಲ.

Update: 2025-12-14 04:39 GMT

ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕೇಳಿಬಂದ ಭಾರಿ ನಿಗೂಢ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ.

Click the Play button to listen to article

ಶನಿವಾರ ರಾತ್ರಿ (ಡಿಸೆಂಬರ್ 13) ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕೇಳಿಬಂದ ಭಾರಿ ನಿಗೂಢ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ.

ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳ ಗಡಿಭಾಗದಲ್ಲಿರುವ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಏಕಾಏಕಿ ದೊಡ್ಡ ಶಬ್ದ ಕೇಳಿಬಂದಿದ್ದು, ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ತೀವ್ರತೆಗೆ ಕೆಲವು ಮನೆಗಳಲ್ಲಿ ಪಾತ್ರೆಗಳು ನೆಲಕ್ಕುರುಳಿವೆ ಎಂದು ವರದಿಯಾಗಿದೆ. ಭಯಭೀತರಾದ ಗ್ರಾಮಸ್ಥರು ತಕ್ಷಣವೇ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಅಧಿಕಾರಿಗಳ ಸ್ಪಷ್ಟನೆ

ಘಟನೆಯ ನಂತರ ಜಗಳೂರು ಠಾಣೆ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಗಳೂರು ತಹಸೀಲ್ದಾರ್ ಸಯ್ಯದ್ ಕಲೀಂವುಲ್ಲಾ, "ನಮ್ಮ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಕಡೆಯಿಂದ ಈ ಶಬ್ದ ಬಂದಿರುವ ಸಾಧ್ಯತೆಯಿದೆ. ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ," ಎಂದು ಮನವಿ ಮಾಡಿದ್ದಾರೆ.

ಹಿಂದಿನ ಘಟನೆಗಳು

ಇದೇ ರೀತಿಯ ಘಟನೆ ಕಳೆದ ತಿಂಗಳು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್, ಮಾಸ್ತಿ ಮತ್ತು ಲಕ್ಕೂರು ಭಾಗಗಳಲ್ಲೂ ನಡೆದಿತ್ತು. ಅಲ್ಲಿಯೂ ಭಾರಿ ನಿಗೂಢ ಶಬ್ದ ಕೇಳಿಬಂದಿತ್ತಾದರೂ, ಅದರ ಮೂಲ ಯಾವುದು ಎಂಬುದು ಪತ್ತೆಯಾಗಿರಲಿಲ್ಲ. ಪ್ರಸ್ತುತ ದಾವಣಗೆರೆ ಗಡಿಭಾಗದಲ್ಲಿ ಕೇಳಿಸಿದ ಶಬ್ದದ ಮೂಲದ ಬಗ್ಗೆಯೂ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Tags:    

Similar News