
ಸಾಂದರ್ಭಿಕ ಚಿತ್ರ
ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಸರಣಿ ಭೂಕಂಪನದಿಂದ ಜನರಲ್ಲಿ ಹೆಚ್ಚಿದ ಆತಂಕ
ನಗರದ ಹೊರವಲಯದಲ್ಲಿರುವ ಭೂತನಾಳ ತಾಂಡ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ಖಚಿತಪಡಿಸಿದೆ. ಭೂಮಿಯ ಸುಮಾರು 5 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ.
ವಿಜಯಪುರ ನಗರದಲ್ಲಿ ಮಂಗಳವಾರ (ನ. 4) ಬೆಳಿಗ್ಗೆ 7:49ಕ್ಕೆ ಲಘು ಭೂಕಂಪನ ಸಂಭವಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.9 ಎಂದು ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಈ ಬಗ್ಗೆ ಮಾಹಿತಿ ನೀಡಿದ್ದು, ನಗರದ ಹೊರವಲಯದಲ್ಲಿರುವ ಭೂತನಾಳ ತಾಂಡ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ಖಚಿತಪಡಿಸಿದೆ. ಭೂಮಿಯ ಸುಮಾರು 5 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ. ಭೂಮಿ ತೀವ್ರವಾಗಿ ಕಂಪಿಸುವುದರ ಜೊತೆಗೆ ಭಾರೀ ಶಬ್ದವೂ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜನರಲ್ಲಿ ಹೆಚ್ಚಿದ ಭಯ
ಕಳೆದ 15 ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು ಏಳೆಂಟು ಬಾರಿ ಇದೇ ರೀತಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಸರಣಿ ಭೂಕಂಪನಗಳಿಂದಾಗಿ ಜಿಲ್ಲೆಯ ಜನರಲ್ಲಿ ತೀವ್ರ ಭಯ ಮತ್ತು ಆತಂಕ ಮನೆಮಾಡಿದೆ. ಬೆಳಿಗ್ಗೆ ಭೂಮಿ ಕಂಪಿಸುತ್ತಿದ್ದಂತೆ ಗಾಢ ನಿದ್ರೆಯಲ್ಲಿದ್ದ ಅನೇಕರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಅಭಯ ನೀಡಿದ ಜಿಲ್ಲಾಡಳಿತ
ಭೂಕಂಪನದ ತೀವ್ರತೆ ಕಡಿಮೆ ಇರುವುದರಿಂದ ಯಾವುದೇ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿಲ್ಲ. ಇದು ಲಘು ಭೂಕಂಪನವಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ ಮತ್ತು ಜನರಿಗೆ ಧೈರ್ಯ ತುಂಬಿದೆ.

