ಬೆಂಗಳೂರು ಸೇರಿ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಳ
ಈ ವಾರಾಂತ್ಯದಲ್ಲಿ ಗಾಳಿಯ ಸರಾಸರಿ ವೇಗವು ಗಂಟೆಗೆ ಸುಮಾರು 16 ಕಿ.ಮೀ ಇರಲಿದೆ. ಹಾಗಾಗಿ, ಮುಂಜಾನೆ ಮತ್ತು ಸಂಜೆ ಹೊರಗೆ ಹೋಗುವವರು ಬೆಚ್ಚಗಿನ ಜಾಕೆಟ್‌ಗಳು ಅಥವಾ ಸ್ವೆಟರ್‌ಗಳನ್ನು ಧರಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ಬೆಂಗಳೂರು ಚಳಿ
ರಾಜ್ಯದಲ್ಲಿ ತೀವ್ರ ಚಳಿ ಆರಂಭವಾಗಿದೆ. ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಮೈ ಕೊರೆಯುವಂತಹ ಚಳಿಯಿಂದ ಜನ ತತ್ತರಿಸಿದ್ದಾರೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಪ್ರತಿದಿನವೂ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಜೊತೆಗೆ ಶೀತ ಗಾಳಿಯೂ ಬೀಸುತ್ತಿದೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 76-85 ರಷ್ಟಿದ್ದು, ಪ್ರಸ್ತುತ ಬೆಂಗಳೂರು ವಾಯುಗುಣಮಟ್ಟದಲ್ಲಿ 'ಮಧ್ಯಮ' ಶ್ರೇಣಿಯಲ್ಲಿದೆ. ಇದು ಉತ್ತರ ಭಾರತದ ನಗರಗಳ ತೀವ್ರ ಮಾಲಿನ್ಯಕ್ಕಿಂತ ಗಣನೀಯವಾಗಿ ಉತ್ತಮವಾಗಿದೆ. PM2.5 ಕಣಗಳ ಮಟ್ಟವು 99.78 µg/m³ ಹಾಗೂ PM10 ಮಟ್ಟವು 107 µg/m³ ರಷ್ಟಿದ್ದು, ಎರಡೂ ಸದ್ಯಕ್ಕೆ ಸಮಾನ್ಯವಾಗಿದೆ.
ಶನಿವಾರ ಮತ್ತು ಭಾನುವಾರಗಳಂದು ಬೆಂಗಳೂರಿನಲ್ಲಿ ಹಗಲಿನ ವೇಳೆಯಲ್ಲಿ ಬಿಸಿಲಿನ ವಾತಾವರಣವಿದ್ದರೂ ಚಳಿಯ ಅನುಭವ ಹೆಚ್ಚಾಗಿರಲಿದೆ. ಈ ವಾರಾಂತ್ಯದಲ್ಲಿ ಗಾಳಿಯ ಸರಾಸರಿ ವೇಗವು ಗಂಟೆಗೆ ಸುಮಾರು 16 ಕಿ.ಮೀ ಇರಲಿದೆ. ಹಾಗಾಗಿ, ಮುಂಜಾನೆ ಮತ್ತು ಸಂಜೆ ಹೊರಗೆ ಹೋಗುವವರು ಬೆಚ್ಚಗಿನ ಜಾಕೆಟ್‌ಗಳು ಅಥವಾ ಸ್ವೆಟರ್‌ಗಳನ್ನು ಧರಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.